ಪರಿವರ್ತನಾ ಯಾತ್ರೆಗೆ ನೀರಸ ಪ್ರತಿಕ್ರಿಯೆ: ರಾಜ್ಯ ಬಿಜೆಪಿಗೆ ತೀವ್ರ ಮುಖಭಂಗ
ಹಲವು ಅವಾಂತರ-ಅವ್ಯವಸ್ಥೆಗಳಿಗೆ ಸಾಕ್ಷಿಯಾದ ಕಾರ್ಯಕ್ರಮ
.jpg)
ಬೆಂಗಳೂರು, ನ. 2: ಬಿಜೆಪಿಯ ನವ ಕರ್ನಾಟಕ ನಿರ್ಮಾಣ ‘ಪರಿವರ್ತನಾ ಯಾತ್ರೆ’ಗೆ ನಿರೀಕ್ಷಿತ ಮಟ್ಟದ ಕಾರ್ಯಕರ್ತರು ಪಾಲ್ಗೊಳ್ಳದ ಹಿನ್ನೆಲೆಯಲ್ಲಿ ಖಾಲಿ ಕುರ್ಚಿಗಳಿಗೆ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಭಾಷಣ ಮಾಡಿದ್ದು ನಡೆಯಿತು. ಮಾತ್ರವಲ್ಲ, ಹಲವು ಅವಾಂತರ-ಅವ್ಯವಸ್ಥೆಗಳಿಗೆ ಸಾಕ್ಷಿಯಾಯಿತು. ಯಾತ್ರೆಯಲ್ಲಿ ಸುಮಾರು ಮೂರು ಲಕ್ಷ ಮಂದಿ ಭಾಗವಹಿಸುತ್ತಾರೆ ಎಂದು ಬಿಜೆಪಿ ನಾಯಕರು ಹೇಳಿದ್ದಾರಾದರೂ, ಬರೇ ಮೂರು ಸಾವಿರ ಕಾರ್ಯಕರ್ತರನ್ನಷ್ಟೇ ಸೇರಿಸಲು ಸಾಧ್ಯವಾಗಿದೆ.
ಗುರುವಾರ ತುಮಕೂರು ರಸ್ತೆಯಲ್ಲಿನ ನೆಲಮಂಗಲ ಸಮೀಪದ ಬೆಂಗಳೂರು ಅಂತಾರಾಷ್ಟ್ರೀಯ ವಸ್ತುಪ್ರದರ್ಶನ ಕೇಂದ್ರದಲ್ಲಿ ಏರ್ಪಡಿಸಿದ್ದ ರ್ಯಾಲಿಗೆ ವಿವಿಧ ಕಡೆಗಳಿಂದ ಬೈಕ್, ಬಸ್ಸು, ಕಾರುಗಳಲ್ಲಿ ಏಕಕಾಲಕ್ಕೆ ಕಾರ್ಯಕರ್ತರು ಮೈದಾನಕ್ಕೆ ಆಗಮಿಸಿದ್ದರಿಂದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸುಮಾರು ನಾಲ್ಕೈದು ಕಿ.ಮೀ.ಗಳಷ್ಟು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಇದರಿಂದಾಗಿ ತುಮಕೂರು ರಸ್ತೆಯಲ್ಲಿ ವಾಹನಗಳು ಆಮೆಗತಿಯಲ್ಲಿ ಸಾಗುತ್ತಿದ್ದುದು ಮಾತ್ರವಲ್ಲ, ಆರೇಳು ಆ್ಯಂಬುಲೆನ್ಸ್ ವಾಹನಗಳು ವಾಹನ ದಟ್ಟಣೆಯಲ್ಲಿ ಸಿಲುಕಿದವು. ಹೀಗಾಗಿ ರೋಗಿಗಳು ಮತ್ತವರ ಸಂಬಂಧಿಕರು ಬಿಜೆಪಿ ಮುಖಂಡರಿಗೆ ಹಿಡಿಶಾಪ ಹಾಕಿದ್ದು ನಡೆಯಿತು.
‘ಪರಿವರ್ತನಾ ಯಾತ್ರೆ’ ಉತ್ಸಾಹದಲ್ಲಿ ಬಿಜೆಪಿ ಮುಖಂಡರು-ಕಾರ್ಯಕರ್ತರು ಮೈದಾನದತ್ತ ವಾಹನಗಳಲ್ಲಿ ನುಗ್ಗುತ್ತಿದ್ದರೆ, ಬೆಳಗ್ಗೆಯಿಂದಲೇ ರಾಜ್ಯದ ವಿವಿಧೆಡೆಗಳಿಂದ ನಗರಕ್ಕೆ ಬರುವ ಕೆಎಸ್ಸಾರ್ಟಿಸಿ ಬಸ್ಸಿಗಳಲ್ಲಿದ್ದ ಪ್ರಯಾಣಿಕರು, ಸಾರ್ವಜನಿಕರು ಹಾಗೂ ಆ್ಯಂಬುಲೆನ್ಸ್‌ನಲ್ಲಿದ್ದ ರೋಗಿಗಳು ಅಕ್ಷರಶಃ ದಿಗ್ಭಂದನದಲ್ಲಿ ಸಿಲುಕಿ ಗಂಟೆಗಟ್ಟಲೆ ಸಂಕಷ್ಟಕ್ಕೆ ಅನುಭವಿಸಿದರು.
ಉದ್ಘಾಟನೆ ವಿಳಂಬ: ಪರಿವರ್ತನಾ ಯಾತ್ರೆಗೆ ಬೆಳಗ್ಗೆ 11ಗಂಟೆ ಸುಮಾರಿಗೆ ಬಿಜೆಪಿ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಚಾಲನೆ ನೀಡಬೇಕಿತ್ತು. ಆದರೆ, ಅವರು ಹೊಸದಿಲ್ಲಿಯಿಂದ ವಿಶೇಷ ವಿಮಾನದಲ್ಲಿ ಎಚ್‌ಎಎಲ್ ವಿಮಾನ ನಿಲ್ದಾಣಕ್ಕೆ ಆಗಮಿಸಿದರೂ, ಸ್ಥಳಕ್ಕೆ ಆಗಮಿಸಲು 2-3 ಗಂಟೆ ವಿಳಂಬ ಮಾಡಿ ಹೆಲಿಕ್ಯಾಪ್ಟರ್ ಮೂಲಕ ಮೈದಾನಕ್ಕೆ ಆಗಮಿಸಿದರು.
ಇದರಿಂದ ಕಾರ್ಯಕ್ರಮ ಉದ್ಘಾಟನೆ ಬೆಳಗ್ಗೆ 11ಗಂಟೆಯ ಬದಲಿಗೆ ಮಧ್ಯಾಹ್ನ 2 ಗಂಟೆ ಸುಮಾರಿಗೆ ಚಾಲನೆ ನೀಡಿದರು. ಈ ವೇಳೆಗಾಗಲೇ ವಿವಿಧಡೆಗಳಿಂದ ಆಗಮಿಸಿದ್ದ ಕೇಸರಿ ಕಾರ್ಯಕರ್ತರ ಸಹನೆ ಕಟ್ಟೆಯೊಡೆದು, ಮೈದಾನದಿಂದ ಹೊರ ನಡೆದಿದ್ದರು. ಇದರಿಂದ ರಾಷ್ಟ್ರೀಯಾಧ್ಯಕ್ಷ ಅಮಿತ್ ಶಾ ಖಾಲಿ ಕುರ್ಚಿಗಳಿಗೆ ಭಾಷಣ ಮಾಡುವ ಪರಿಸ್ಥಿತಿ ಸೃಷ್ಟಿಯಾಗಿತ್ತು.
ಪ್ರತಿ ಬೂತ್‌ನಿಂದ ಮೂರು ಬೈಕ್‌ನಲ್ಲಿ ಆರು ಮಂದಿ ಕಾರ್ಯಕರ್ತರು ಸೇರಿ ಒಟ್ಟು 3ಲಕ್ಷ ಮಂದಿ ಯಾತ್ರೆ ಉದ್ಘಾಟನೆ ಕಾರ್ಯಕ್ರಮಕ್ಕೆ ಸೇರುವ ನಿರೀಕ್ಷೆ ಇತ್ತು. 1ಲಕ್ಷಕ್ಕೂ ಅಧಿಕ ಮಂದಿಗೆ ಆಸನ ವ್ಯವಸ್ಥೆ ಕಲ್ಪಿಸಲಾಗಿತ್ತು. ಆದರೆ, ಕೇವಲ 20ರಿಂದ 25 ಸಾವಿರದಷ್ಟು ಆಸನಗಳೂ ಭರ್ತಿಯಾಗಲಿಲ್ಲ.
ಶಾಸಕರು ಹೇಳಿದರೂ ಬರಲಿಲ್ಲ: ಖಾಲಿ ಕುರ್ಚಿಗಳಿಗೆ ರಾಷ್ಟ್ರೀಯ ಅಧ್ಯಕ್ಷರು ಭಾಷಣ ಮಾಡುತ್ತಿದ್ದುದನ್ನು ಶಾಸಕರಾದ ನಾರಾಯಣಸ್ವಾಮಿ, ಎಸ್.ಆರ್.ವಿಶ್ವನಾಥ್ ಸೇರಿದಂತೆ ಹಲವು ಶಾಸಕರು ಮೈದಾನದ ಹೊರಗೆ ಮರದ ನೆರಳಿನಲ್ಲಿ ನಿಂತಿದ್ದ ಸಾರ್ವಜನಿಕರನ್ನು ಕುರ್ಚಿಗಳಿಗೆ ಬನ್ನಿ ಎಂದು ಕರೆದರೂ ಯಾರೂ ಬರಲಿಲ್ಲ.
ಮುಖಂಡರಿಗೆ ತರಾಟೆ: ಖಾಲಿ ಕುರ್ಚಿಗಳನ್ನು ಗಮನಿಸಿದ ಅಮಿತ್‌ಶಾ ವೇದಿಕೆಯಲ್ಲೆ ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದ ಗೌಡ ಸೇರಿದಂತೆ ಇನ್ನಿತರ ಮುಖಂಡರಿಗೆ ‘ನಿಮ್ಮ ಕೈಯಲ್ಲಿ ಜನ ಸೇರಿಸಲು ಆಗದಿದ್ದರೆ ಯಾತ್ರೆ ಏಕೆ ಮಾಡ್ತೀರಿ’ ಎಂದು ತರಾಟೆಗೆ ತೆಗೆದುಕೊಂಡ ಪ್ರಸಂಗವೂ ಜರುಗಿತು.
ತೀವ್ರ ಸ್ವರೂಪದ ಸಂಚಾರ ದಟ್ಟಣೆ ಹಿನ್ನೆಲೆಯಲ್ಲಿ ಅಮಿತ್ ಶಾ, ಕಾರ್ಯಕರ್ತರಿಗೆ ಸರಿಯಾಗಿ ಮಾಹಿತಿ ನೀಡಲಿಲ್ಲವೇಕೆ ಎಂದು ಯಡಿಯೂರಪ್ಪನವರಿಗೆ ದೂರವಾಣಿ ಮೂಲಕ ತರಾಟೆಗೆ ತೆಗೆದುಕೊಂಡಿದ್ದಾರೆಂದು ಗೊತ್ತಾಗಿದೆ. ಅಲ್ಲದೆ, ಹಿರಿಯ ಮುಖಂಡ ಹಾಗೂ ಮಾಜಿ ಸಚಿವ ಸೊಗಡು ಶಿವಣ್ಣ ಪರಿವರ್ತನಾ ರ್ಯಾಲಿಗೆ ತನಗೆ ಆಹ್ವಾನ ನೀಡಿಲ್ಲ ಎಂದು ತನ್ನ ಅಸಮಾಧಾನ ಹೊರಹಾಕಿದ್ದಾರೆ.
ಕಾನೂನು ಉಲ್ಲಂಘನೆ: ಪರಿವರ್ತನಾ ಯಾತ್ರೆಗೆ ವಿವಿಧೆಡೆಗಳಿಂದ ಬೈಕ್‌ಗಳಲ್ಲಿ ಆಗಮಿಸಿದ್ದ ಬಿಜೆಪಿ ಕಾರ್ಯಕರ್ತರು ಶಿರಸ್ತ್ರಾಣ(ಹೆಲ್ಮೆಟ್) ಧರಿಸದೇ ಸಂಚಾರ ನಿಯಮ ಉಲ್ಲಂಘಿಸಿದ್ದು ನಡೆಯಿತು. ಹೆಲ್ಮೆಟ್ ಧರಿಸದ ಬೈಕ್‌ಗಳಲ್ಲಿ ರ್ಯಾಲಿ ಹೊರಡುತಿದ್ದುದನ್ನು ಕಂಡು ಸಂಚಾರ ಪೊಲೀಸರು ಮೂಕಪ್ರೇಕ್ಷರಂತೆ ಇದ್ದುದು ಕಂಡುಬಂತು.
‘ಡೆಂಗ್ ಪೀಡಿತ ನನ್ನ ಸಂಬಂಧಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ದಾವಣಗೆರೆಯಿಂದ ಬೆಂಗಳೂರಿಗೆ ಕರೆತಂದಿದ್ದು, ಬಿಜೆಪಿ ಯಾತ್ರೆಯಿಂದಾದ ಸಂಚಾರ ದಟ್ಟಣೆಯಲ್ಲಿ ಸಿಲುಕಿ 1ಗಂಟೆಗೂ ಹೆಚ್ಚು ಕಾಲ ನಿಂತಲ್ಲೇ ನಿಂತಿದ್ದೇವೆ. ರೋಗಿಗಳಿಗೆ ಕಿರುಕುಳ ನೀಡುವ ಇಂತಹ ಯಾತ್ರೆಗಳ ಅಗತ್ಯವೇನಿದೆ’
-ರೋಗಿಯ ಸಂಬಂಧಿ







