ನಾಡಿನ ಸಮಸ್ತ ನಾಗರೀಕರು ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಳ್ಳಿ: ಸಚಿವ ಮಹದೇವಪ್ಪ ಮನವಿ
ಪೂರ್ವಭಾವಿ ಸಭೆಯಲ್ಲಿ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆ

ಮೈಸೂರು,ನ.2: ಮೈಸೂರಿನಲ್ಲಿ ನವೆಂಬರ್ 24 ರಿಂದ ಮೂರು ದಿನಗಳ ಕಾಲ ನಡೆಯುವ 83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ನಾಡಿನ ಸಮಸ್ತ ನಾಗರಿಕರು ಪಾಲ್ಗೊಳ್ಳಬೇಕೆಂದು ಲೋಕೋಪಯೋಗಿ ಮತ್ತು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್.ಸಿ.ಮಹದೇವಪ್ಪ ಅವರು ಮನವಿ ಮಾಡಿದರು.
83ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಪೂರ್ವಭಾವಿ ಸಭೆಯನ್ನು ಅವರು ಗುರುವಾರ ಮೈಸೂರಿನ ಸರ್ಕಾರಿ ಅತಿಥಿಗೃಹದಲ್ಲಿ ನಡೆಸಿದರು.ಈ ಸಂದರ್ಭ ಸಾಹಿತ್ಯ ಸಮ್ಮೇಳನದ ಪೋಸ್ಟರ್ ಬಿಡುಗಡೆಗೊಳಿಸಿದರು.
ಬಳಿಕ ಮಾತನಾಡಿದ ಅವರು ನವೆಂಬರ್ 24,25,26 ರ ಮೂರು ದಿನಗಳ ಕಾಲ ಸಮ್ಮೇಳನ ನಡೆಯಲಿದ್ದು, ಇದಕ್ಕಾಗಿ ಮೂರು ನಾಲ್ಕು ಸಭೆ ನಡೆದಿದೆ. 15 ಉಪ ಸಮಿತಿ ರಚನೆಯಾಗಿದೆ. ನವೆಂಬರ್ 4ನೇ ತಾರೀಖಿನೊಳಗೆ ಕ್ರಿಯಾಯೋಜನೆ ಸಲ್ಲಿಸಲು ಗಡುವು ನೀಡಲಾಗಿದೆ ಎಂದರು. ಸಮ್ಮೇಳನಕ್ಕಾಗಿ ಸಂಘಟಕರು 10ಕೋಟಿ ರೂ. ಅನುದಾನ ಕೇಳಿದ್ದಾರೆ. ಸರ್ಕಾರ ಈಗ 6 ಕೋಟಿ ರೂ. ಒದಗಿಸಿದೆ. ಹೆಚ್ಚುವರಿ ಅನುದಾನ ಕೊಡಿಸಲು ಕ್ರಮ ವಹಿಸುತ್ತೇನೆ ಎಂದರು.
ಹಿಂದಿನ ಎಲ್ಲಾ ಸಮ್ಮೇಳನಕ್ಕಿಂತ ಹೆಚ್ಚು ವಿಜೃಂಭಣೆಯಿಂದ ಮೈಸೂರಿನ ಸಮ್ಮೇಳನ ನಡೆಯಬೇಕು.ಲಕ್ಷಾಂತರ ಕನ್ನಡಿಗರು ಭಾಗವಹಿಸುತ್ತಾರೆ. ಚಂಪಾ ಅವರು ಅಧ್ಯಕ್ಷರಾಗಿ ಆಯ್ಕೆಗೊಂಡಿದ್ದಾರೆ. ಅವರು ಎಡಪಂಥೀಯವಾದಿ ಮತ್ತು ಬಂಡಾಯ ಸಾಹಿತಿಗಳಾಗಿದ್ದು, ಸಮನ್ವಯತೆ ಕಾಪಾಡಿಕೊಳ್ಳುವ ಬದ್ಧತೆ ಅವರಿಗೆ ಇದೆ ಎಂದರು.
ಲಕ್ಷಾಂತರ ಜನರು ಕನ್ನಡದ ತೇರು ಎಳೆಯಲು ಬರುತ್ತಾರೆ. ಅವರನ್ನು ಮುಕ್ತವಾಗಿ, ಹೃದಯಪೂರ್ವಕವಾಗಿ ಅಹ್ವಾನಿಸುತ್ತೇನೆ ಎಂದರು.
ಸಭೆಯಲ್ಲಿ ಮೈಸೂರು ಬಣ್ಣ ಮತ್ತು ಅರಗು ಕಾರ್ಖಾನೆ ಅಧ್ಯಕ್ಷ ಹೆಚ್. ಎ. ವೆಂಕಟೇಶ್, ಮುಡಾ ಅಧ್ಯಕ್ಷ ಧೃವಕುಮಾರ್, ಜಿ.ಪಂ. ಅಧ್ಯಕ್ಷೆ ನಯಿಮಾ ಸುಲ್ತಾನ ನಜೀರ್ ಅಹಮದ್, ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಸಿದ್ದರಾಜು, ಜಿಲ್ಲಾಧಿಕಾರಿ ಡಿ.ರಂದೀಪ್, ಕ.ಸಾ.ಪ. ಜಿಲ್ಲಾ ಘಟಕದ ಅಧ್ಯಕ್ಷ ಡಾ. ವೈ.ಡಿ. ರಾಜಣ್ಣ, ಮತ್ತಿತರರು ಉಪಸ್ಥಿತರಿದ್ದರು.







