ಆರ್ಟ್ ಗ್ಯಾಲರಿ, ಚಿತ್ರಕಲಾ ಪ್ರದರ್ಶನ ಉದ್ಘಾಟನೆ

ಉಡುಪಿ, ನ.2: ಕಲಾವಿದ ವಸಂತ ರಾವ್ ಅವರು ಬ್ರಹ್ಮಗಿರಿ ಸರ್ಕಲ್‌ನ ಅನುಗ್ರಹ ಸಂಕೀರ್ಣದಲ್ಲಿ ನೂತನವಾಗಿ ಆರಂಭಿಸಿದ ಉಡುಪಿ ಆರ್ಟ್ ಗ್ಯಾಲರಿ ಹಾಗೂ ಅವರ ‘ಕಲರ್ಸ್ ಆಫ್ ಗ್ರಾಟಿಟ್ಯುಡ್’ ವರ್ಣಚಿತ್ರಕಲಾ ಪ್ರದರ್ಶನವನ್ನು ಪರ್ಯಾಯ ಪೇಜಾವರ ಮಠದ ಕಿರಿಯ ಯತಿಗಳಾದ ಶ್ರೀ ವಿಶ್ವಪ್ರಸನ್ನ ತೀರ್ಥ ಶ್ರೀ ಇಂದು ಸಂಜೆ ಉದ್ಘಾಟಿಸಿದರು.
ಬದುಕಿನಲ್ಲಿ ಸಂತೋಷ ಹಾಗೂ ಉತ್ಸಾಹಕ್ಕೆ ಕಲೆಯ ಕಲಿಕೆ ಅತ್ಯಗತ್ಯ. ಕಲೆ ಎಂಬುದು ಬದುಕಿನ ಅವಿಭಾಜ್ಯ ಅಂಗವಾದಾಗ ಸಿಗುವ ಸಂತೋಷವೇ ಅನನ್ಯ ಎಂದ ಸ್ವಾಮೀಜಿ, ಎಲ್ಲರ ಬದುಕೂ ಕಲಾಮಯವಾಗಿರಲಿ ಎಂದು ಹಾರೈಸಿದರು.
ಉಡುಪಿ ಚಿತ್ರಕಲಾ ಮಂದಿರದ ನಿರ್ದೇಶಕ ಡಾ.ಯು.ಸಿ.ನಿರಂಜನ್, ಉದ್ಯಮಿ ಶಶಿಕುಮಾರ್ ಆರ್.ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಕಲಾವಿದ ವಸಂತ ರಾವ್ ಅವರು ಸಾಹಸಕ್ಕೆ ಶುಭವನ್ನು ಹಾರೈಸಿದರು.
ವಸಂತ ರಾವ್ ಅವರು ಪ್ರಾಸ್ತಾವಿಕ ಮಾತುಗಳ ಮೂಲಕ ಅತಿಥಿಗಳನ್ನು ಸ್ವಾಗತಿಸಿ, ವಂದಿಸಿದರು. ಆಸ್ಟ್ರೇಲಿಯದ ಸಿಡ್ನಿಯಲ್ಲಿ ಚಿತ್ರಕಲೆಯಲ್ಲಿ ವಿಶೇಷ ಅಧ್ಯಯನ ನಡೆಸಿ ಮರಳಿರುವ ವಸಂತ ರಾವ್ ಅವರ ಇತ್ತೀಚಿನ 60 ಕಲಾಕೃತಿಗಳು ಪ್ರದರ್ಶನ ಇಲ್ಲಿ ನಡೆದಿದೆ. ಇದು ಸಾರ್ವಜನಿಕರ ವೀಕ್ಷಣೆಗೆ ಬೆಳಗ್ಗೆ 11 ರಿಂದ ಸಂಜೆ 6 ರವರೆಗೆ ತೆರೆದಿರುತ್ತದೆ.







