ಬ್ರಹ್ಮಾವರ: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ

ಬ್ರಹ್ಮಾವರ, ನ.2: ರಾಷ್ಟ್ರೀಯ ಗ್ರಂಥಾಲಯ ಸಪ್ತಾಹದಂಗವಾಗಿ ಬ್ರಹ್ಮಾವರದ ಹಂದಾಡಿ ಗ್ರಾಪಂ ಸಭಾಂಗಣದಲ್ಲಿ ತಾಲೂಕು ಮಟ್ಟದ ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ಇತ್ತೀಚೆಗೆ ನಡೆಯಿತು.
ಕಾರ್ಯಕ್ರಮವನ್ನು ಹಂದಾಡಿ ಗ್ರಾಪಂ ಅಧ್ಯಕ್ಷೆ ಪ್ರತಿಮಾ ಶೆಟ್ಟಿ ಉದ್ಘಾಟಿಸಿ ದರು. ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಉಪಾಧ್ಯಕ್ಷೆ ವಸಂತಿ ಶೆಟ್ಟಿ ಬ್ರಹ್ಮಾವರ ಮಾತನಾಡಿ, ಓದುವುದು ಒಳ್ಳೆಯ ಹವ್ಯಾಸವಾಗಿದ್ದು ಇದು ಎಳವೆಯಲ್ಲಿಯೇ ಪ್ರಾಪ್ತವಾದರೆ ಉತ್ತಮ ಬದುಕು ರೂಪಿಸಲು ಸಹಕಾರಿಯಾಗುತ್ತದೆ. ಪುಸ್ತಕದ ವಿಚಾರ ಮಸ್ತಕಕ್ಕೆ ಇಳಿಯಲು ಏಕಾಗ್ರತೆಯ ಜೊೆಗೆ ಆಸಕ್ತಿಯೂ ಇರಬೇಕು ಎಂದರು.
ಪುಸ್ತಕ ಓದಿ ಬಹುಮಾನ ಗೆಲ್ಲಿರಿ ಎಂಬ ವಿಷಯದಲ್ಲಿ ನಡೆದ ಸ್ಪರ್ಧೆಯಲ್ಲಿ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿಯೇ ಬೇರೆ ಬೇರೆ ಪುಸ್ತಕಗಳನ್ನು ನೀಡಿ ಭಾಷಣ ಸ್ಪರ್ಧೆಯನ್ನು ನಡೆಸಲಾಯಿತು. ಹೈಸ್ಕೂಲು ಮಟ್ಟದ ಸ್ಪರ್ಧೆಯಲ್ಲಿ ಬ್ರಹ್ಮಾವರ ವಲಯದ ವಿವಿಧ ಪ್ರೌಢಶಾಲೆಗಳ 60ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿ ದ್ದರು. ಆ ನಂತರ ಪದವಿ ಪೂರ್ವ ಮತ್ತು ಪದವಿ ಕಾಲೇಜು ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ ನಡೆಯಿತು. ಸುಮಾರು 25 ಮಂದಿ ವಿದ್ಯಾರ್ಥಿಗಳು ಇದರಲ್ಲಿ ಭಾಗವಹಿಸಿದ್ದರು.
ಸ್ಪರ್ಧೆಯ ತೀರ್ಪುಗಾರರಾಗಿ ಲೇಖಕಿ ವಸಂತಿ ಶೆಟ್ಟಿ ಬ್ರಹ್ಮಾವರ, ಚಂದ್ರಶೇಖರ ಕೆದಿಲಾಯ ಮತ್ತು ಭವಾನಿ ವಿ.ಶೆಟ್ಟಿ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಉಡುಪಿ ತಾಪಂ ಸದಸ್ಯ ಸುಧೀರ್ ಕುಮಾರ್ ಶೆಟ್ಟಿ, ನೀಲಾವರ ಗ್ರಾಪಂ ಸದಸ್ಯ ಮತ್ತು ಜಿಲ್ಲಾ ಗ್ರಂಥಾಲಯ ಪ್ರಾಧಿಕಾರದ ಸದಸ್ಯ ಮಹೇಂದ್ರ ಕುಮಾರ್ ಉಪಸ್ಥಿತರಿದ್ದರು.
ಜಿಲ್ಲಾ ಕೇಂದ್ರ ಗ್ರಂಥಾಲಯದ ಮುಖ್ಯ ಗ್ರಂಥಾಲಯಾಧಿಕಾರಿ ನಳಿನಿ ಜಿ.ಐ. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಗ್ರಂಥಾಲಯ ಸಹಾಯಕಿ ಶಕುಂತಳಾ ಕುಂದರ್ ವಂದಿಸಿದರು. ಕುಂದಾಪುರ ಶಾಖೆಯ ಗ್ರಂಥಾಲಯ ಸಹಾಯಕ ಜಗದೀಶ ಭಟ್ ಕಾರ್ಯಕ್ರಮ ನಿರೂಪಿಸಿದರು.







