ಕೋಟ್ಪಾ ಕಾಯ್ದೆಯ ಅನ್ವಯ ದಾಳಿ: 2500 ರೂ. ದಂಡ ವಸೂಲಿ
ಉಡುಪಿ, ನ.2: ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಆದೇಶದಂತೆ ಜಿಲ್ಲಾ ತಂಬಾಕು ನಿಯಂತ್ರಣ ಘಟಕ ಉಡುಪಿ, ಕಾರ್ಕಳ ತಾಲೂಕಿನಲ್ಲಿ ಕೋಟ್ಪಾ-2003ರ ಕಾಯ್ದೆಯ ಅನ್ವಯ ದಾಳಿ ನಡೆಸಿ, ಸೆಕ್ಷನ್ 4ರ ಅಡಿಯಲ್ಲಿ ಹತ್ತು ಪ್ರಕರಣ, 1800ರೂ. ದಂಡ ವಸೂಲಿ ಮತ್ತು ವಿಧಿ 6(ಎ) ಅಡಿಯಲ್ಲಿ ನಾಲ್ಕು ಪ್ರಕರಣ ದಾಖಲಿಸಿ 700ರೂ. ದಂಡ ವಸೂಲಿ ಮಾಡಲಾಯಿತು.
ಈ ದಾಳಿಯಲ್ಲಿ ಸಾರ್ವಜನಿಕರಿಗೆ ಕೋಟ್ಪಾ ಕಾಯ್ದೆಯ ಹಾಗೂ ತಂಬಾಕು ಸೇವನೆಯಿಂದಾಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಲಾಯಿತು. ರಾಜ್ಯ ಸರ್ಕಾರದ ಆದೇಶದಂತೆ ಸಿಗರೇಟು ಉತ್ಪನ್ನಗಳನ್ನು ಬಿಡಿ ಬಿಡಿಯಾಗಿ ಮಾರಾಟ ಮಾಡದಂತೆ ಅಂಗಡಿ ಮಾಲಿಕರಿಗೆ ತಿಳಿ ಹೇಳಲಾಯಿತು.
ಈ ದಾಳಿಯಲ್ಲಿ ಕಾರ್ಕಳ ತಾಲೂಕಿನ ಆರೋಗ್ಯಾಧಿಕಾರಿ ಡಾ.ಕೃಷ್ಣಾನಂದ ಶೆಟ್ಟಿ, ತಾಲೂಕು ಆರೋಗ್ಯ ಮೇಲ್ವಿಚಾರಕ ಬಿ.ವಿ. ಶಿವರಾಮ ರಾವ್, ಜಿಲ್ಲಾ ಎನ್‌ಟಿಸಿಪಿ ಘಟಕದ ಜಿಲ್ಲಾ ಸಲಹೆಗಾರರಾದ ಮಮತಾ ನಾಯಕ್, ಸಮಾಜ ಕಾರ್ಯಕರ್ತೆ ಶೈಲಾ ಎಸ್. ಎಂ., ಆಪ್ತ ಸಮಾಲೋಚಕರಾದ ಕೃತಿ ಎಂ.ಕೆ, ಕಾರ್ಕಳ ಪೊಲೀಸ್ ಠಾಣೆಯ ಅಧಿಕಾರಿಗಳು ಉಪಸ್ಥಿತರಿದ್ದರು.





