ಆತ್ಮರಕ್ಷಣೆಗಾಗಿ ಕರಾಟೆ ಅಗತ್ಯ-ಶಕುಂತಳಾ ಶೆಟ್ಟಿ

ಪುತ್ತೂರು, ನ. 2: ಹೆಣ್ಣು ಮಕ್ಕಳಿಗೆ ಆತ್ಮಸ್ಥೈರ್ಯ ಹೆಚ್ಚಿಸಲು ಮತ್ತು ಆತ್ಮರಕ್ಷಣೆಗಾಗಿ ಕರಾಟೆ ಕಲಿಯುವುದು ಅಗತ್ಯ ಎಂದು ಪುತ್ತೂರು ಶಾಸಕಿ ಶಕುಂತಳಾ ಶೆಟ್ಟಿ ಹೇಳಿದರು.
ಅವರು ಗುರುವಾರ ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿಯಲ್ಲಿ 3 ತಿಂಗಳ ಕಾಲ ಹಮ್ಮಿಕೊಳ್ಳಲಾದ ಕರಾಟೆ ತರಬೇತಿ ಶಿಬಿರವನ್ನು ಗುರುವಾರ ಕೊಂಬೆಟ್ಟು ಪ.ಪೂ. ಕಾಲೇಜು ಆವರಣದಲ್ಲಿ ಉದ್ಘಾಟಿಸಿ ಮಾತನಾಡಿ ತರಬೇತಿ ಪಡೆದ ವಿದ್ಯಾರ್ಥಿಗಳನ್ನು ಕರಾಟೆಯ ಉಪಯೋಗ ಸರಿಯಾದ ರೀತಿಯಲ್ಲಿ ಬಳಸಿಕೊಳ್ಳಬೇಕು. ಕೇವಲ ಆತ್ಮರಕ್ಷಣೆಗೆ ಮಾತ್ರ ಕರಾಟೆಯನ್ನು ಉಪಯೋಗಿಸಿಕೊಳ್ಳಿ ಎಂದು ಸಲಹೆ ನೀಡಿದರು.
ಅಧ್ಯಕ್ಷತೆ ವಹಿಸಿದ್ದ ಪುತ್ತೂರು ತಾಲೂಕು ಪಂಚಾಯತ್ ಅಧ್ಯಕ್ಷೆ ಭವಾನಿ ಚಿದಾನಂದ್ ಪ್ರಸ್ತುತ ಕೇವಲ ಪಠ್ಯ ಶಿಕ್ಷಣದಿಂದ ಮಾತ್ರ ಸಮಗ್ರ ಕಲಿಕೆ ಅಸಾಧ್ಯ. ಇದರೊಂದಿಗೆ ಆತ್ಮರಕ್ಷಣೆಯ ಶಿಕ್ಷಣವೂ ಬೇಕಾಗಿದೆ. ಹಿಂದೆಲ್ಲಾ ಈಗಿನಂತೆ ಮೊಬೈಲ್, ಟಿ.ವಿ ಮಾಧ್ಯಮಗಳಿಲ್ಲದ ಸಮಯದಲ್ಲಿ ಚಲನಚಿತ್ರ ವೀಕ್ಷಿಸಲು ಚಿತ್ರಮಂದಿರಕ್ಕೆ ಹೋಗಬೇಕಾಗಿತ್ತು. ಅಂದು ನಮಗೆ ಕೀಟಲೆ ನೀಡುವವರನ್ನು ಎಚ್ಚರಿಸಲು ಶಿಕ್ಷಕರು ನಮ್ಮಲ್ಲಿ ಒಂದು ಗುಂಡು ಪಿನ್, ಸೂಜಿಯನ್ನು ಕೈಯಲ್ಲಿ ಹಿಡಿದು ಕೊಳ್ಳಿ ಎಂದು ಸಲಹೆ ನೀಡುತ್ತಿದ್ದರು. ಇಂದು ಕರಾಟೆ ಶಿಕ್ಷಣ ಕಲಿಯುವ ಮೂಲಕ ನಮ್ಮ ಆತ್ಮರಕ್ಷಣೆ ಇನ್ನಷ್ಟು ಬಲಿಷ್ಠವಾಗಲಿದೆ ಎಂದರು.
ಕ್ಷೇತ್ರ ಶಿಕ್ಷಣಾಧಿಕಾರಿ ಸುಕನ್ಯ ಡಿ.ಎನ್, ತಾಲೂಕು ಯುವಜ ಸೇವಾ ಮತ್ತು ಕ್ರೀಡಾಧಿಕಾರಿ ಮಾಮಚ್ಚನ್, ತಾಲೂಕು ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಅಬ್ರಹಾಂ, ತಾಲೂಕು ದೈಹಿಕ ಶಿಕ್ಷಣ ಶಿಕ್ಷಕ ಆನಂದ್, ಕೊಂಬೆಟ್ಟು ಪ.ಪೂ. ಕಾಲೇಜ್‌ನ ಉಪ ಪ್ರಾಂಶುಪಾಲ ಶಿವರಾಮ ಹೆಬ್ಬಾರ್, ಕರಾಟೆ ತರಬೇತುದಾರ ಟಿ.ಡಿ.ತೋಮಸ್, ಹಿರಿಯ ಶಿಕ್ಷಕಿ ಜಯಶ್ರೀ ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ದೈಹಿಕ ಪರಿವೀಕ್ಷಣಾಧಿಕಾರಿ ಸುಂದರ ಗೌಡ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಣ ಸಂಯೋಜಕ ಲೋಕಾನಂದ್ ಸ್ವಾಗತಿಸಿದರು. ಶಿಕ್ಷಕ ಬಾಲಕೃಷ್ಣ ಗೌಡ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಸಾಂಕೇತಿವಾಗಿ ಕರಾಟೆ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳಿಂದ ಕರಾಟೆ ಪ್ರದರ್ಶನ ನಡೆಯಿತು. ತರಬೇತುದಾರ ತಾರನಾಥ ಮಾರ್ಗದರ್ಶನ ನೀಡಿದರು.
ರಾಷ್ಟ್ರೀಯ ಮಾಧ್ಯಮ ಶಿಕ್ಷಣ ಅಭಿಯಾನದಡಿ ಈ ಹಿಂದೆ ಇದ್ದ ಕರಾಟೆ ಶಿಕ್ಷಣ ಕಾರ್ಯಕ್ರಮ ಕೆಲವೆ ಶಾಲೆಗಳಿಗೆ ಸೀಮಿತವಾಗಿದ್ದು ಇದೀಗ ತಾಲೂಕಿನ ಎಲ್ಲಾ ಸರಕಾರಿ ಶಾಲೆಗಳಲ್ಲೂ 9ನೇ ತರಗತಿಯ ಹೆಣ್ಣು ಮಕ್ಕಳಿಗೆ ಕರಾಟೆ ಶಿಕ್ಷಣ ತರಬೇತಿಯನ್ನು ಸರಕಾರ ಕಡ್ಡಾಯಗೊಳಿಸಿದ್ದು, ಸ್ವಯಂ ರಕ್ಷಣಾ ಕೌಶಲ್ಯ ತರಬೇತಿಯು ನವಂಬರ್ ತಿಂಗಳಿಂದ ಜನವರಿ ತನಕ ಮೂರು ತಿಂಗಳ ತಾಲೂಕು ಮಟ್ಟದ ಕರಾಟೆ ತರಬೇತಿ ನಡೆಯಲಿದೆ.







