ವಿದ್ಯಾರ್ಥಿ ಒಕ್ಕೂಟದ ಚುನಾವಣಾ ದಿನಾಂಕ ಘೋಷಣೆಗೆ ನಿರಾಕರಣೆ
ಅಲಿಗಢ ಮುಸ್ಲಿಂ ವಿ.ವಿ.ಯಲ್ಲಿ ವಿದ್ಯಾರ್ಥಿಗಳಿಂದ ಪ್ರತಿಭಟನೆ

ಲಕ್ನೋ, ನ. 2: ಅಲಿಗಢ ಮುಸ್ಲಿಂ ವಿಶ್ವವಿದ್ಯಾನಿಲಯದಲ್ಲಿ ವಿದ್ಯಾರ್ಥಿ ಒಕ್ಕೂಟದ ಚುನಾವಣೆ ದಿನಾಂಕ ಘೋಷಿಸುವ ಗಡುವನ್ನು ಆಡಳಿತ ಮಂಡಳಿ ಮೀರಿದ ಹಿನ್ನೆಲೆಯಲ್ಲಿ ನಿನ್ನೆ ರಾತ್ರಿಯಿಂದ ಪ್ರತಿಭಟನೆ ಆರಂಭವಾಗಿದೆ. ಇದರಿಂದ ಕಳೆದ ಎರಡು ವಾರಗಳಿಂದ ಶಾಂತಿ ನೆಲೆಸಿದ್ದ ಎಎಂಯುನಲ್ಲಿ ಮತ್ತೆ ಅಶಾಂತಿ ಮೂಡಿದೆ.
ವಿದ್ಯಾರ್ಥಿ ಒಕ್ಕೂಟದ ಚುನಾವಣೆ ದಿನಾಂಕ ಘೋಷಿಸುವಂತೆ ಎಎಂಯು ವಿದ್ಯಾರ್ಥಿಗಳು ಸೆಪ್ಟಂಬರ್ 19ರಂದು ಪ್ರತಿಭಟನೆ ನಡೆಸಿದ್ದರು. ನವೆಂಬರ್ 1ರಂದು ಚುನಾವಣೆ ದಿನಾಂಕ ಘೋಷಿಸಲಾಗುವುದು ಎಂದು ಆಡಳಿತ ಮಂಡಳಿ ಭರವಸೆ ನೀಡಿದ ಬಳಿಕ ವಿದ್ಯಾರ್ಥಿಗಳು ಪ್ರತಿಭಟನೆ ಹಿಂದೆಗೆದಿದ್ದರು.
ಈಗ ಅಂತಿಮ ಗಡುವು ಮುಗಿದಿದೆ. ಆದರೂ ಆಡಳಿತ ಮಂಡಳಿ ಚುನಾವಣೆ ದಿನಾಂಕ ಘೋಷಿಸಿಲ್ಲ. ಈ ಹಿನ್ನೆಲೆಯಲ್ಲಿ ಬುಧವಾರ ವಿದ್ಯಾರ್ಥಿಗಳ ಚುನಾವಣಾ ದಿನಾಂಕ ಘೋಷಿಸುವಂತೆ ಆಗ್ರಹಿಸಿ ರಿಜಿಸ್ಟ್ರಾರ್ ಕಚೇರಿಗೆ ಮುತ್ತಿಗೆ ಹಾಕಿದರು.
ಆದಾಗ್ಯೂ, ಆಡಳಿತ ಮಂಡಳಿ ಯಾವುದೇ ಪ್ರತಿಕ್ರಿಯೆ ನೀಡದೇ ಇದ್ದಾಗ ವಿದ್ಯಾರ್ಥಿಗಳು ಬುಧವಾರ ರಾತ್ರಿ ವಿಶ್ವವಿದ್ಯಾನಿಲಯದ ಎಲ್ಲ ಗೇಟುಗಳನ್ನು ಮುಚ್ಚಿದರು ಹಾಗೂ ಪ್ರತಿಭಟನೆ ನಡೆಸಿದರು.





