ಪರಿಹಾರ ಕೋರಿ ಮನವಿ ಪತ್ರಗಳಿಗೆ ಸರಕಾರ ಲಿಖಿತ ಉತ್ತರ ನೀಡಬೇಕು: ಹೈಕೋರ್ಟ್ ತಾಕೀತು

ಬೆಂಗಳೂರು, ನ.2: ಸಾರ್ವಜನಿಕರು ತಮ್ಮ ಕುಂದು-ಕೊರತೆಗಳ ಪರಿಹಾರ ಕೋರಿ ಸಲ್ಲಿಸುವ ಮನವಿ ಪತ್ರಗಳನ್ನು ಪರಿಗಣಿಸುವ ಸಂಬಂಧ ರಾಜ್ಯ ಸರಕಾರ ಇನ್ನು ಮುಂದೆ ಲಿಖಿತ ಉತ್ತರ ನೀಡಬೇಕು ಹೊರತು ಮೌಖಿಕವಾಗಿ ತಿಳಿಸಬಾರದು ಎಂದು ಹೈಕೋರ್ಟ್ ಗುರುವಾರ ಅಭಿಪ್ರಾಯಪಟ್ಟಿದೆ.
ಮಡಿಕೇರಿಯ ಕೊನ್ನಂಜಗೇರಿ ಗ್ರಾಮದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಪಕ್ಕದಲ್ಲಿಯೇ ನಿರ್ಮಾಣಗೊಂಡಿರುವ ಮದ್ಯದಂಗಡಿಗೆ ಪರವಾನಗಿ ನೀಡದಿರಲು ಕೊಡಗು ಜಿಲ್ಲಾಧಿಕಾರಿ ಮತ್ತು ಅಬಕಾರಿ ಇಲಾಖೆ ಆಯುಕ್ತರಿಗೆ ನಿರ್ದೇಶಿಸುವಂತೆ ಕೋರಿ ಎ.ಎಂ.ಪೂವಯ್ಯ ಹಾಗೂ ಇತರೆ ಗ್ರಾಮಸ್ಥರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ.ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್.ದಿನೇಶ್ ಕುಮಾರ್ ಅವರಿದ್ದ ವಿಭಾಗೀಯ ಪೀಠವು ಹೀಗೆ ಅಭಿಪ್ರಾಯಪಟ್ಟಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲ ಉದಯ ಪ್ರಕಾಶ್ ಮೂಲಿಯಾ ವಾದ ಮಂಡಿಸಿ, ಕೊನ್ನಂಜಗೇರಿ ಗ್ರಾಮದಲ್ಲಿ ಸರಕಾರಿ ಮಾದರಿ ಪ್ರಾಥಮಿಕ ಶಾಲೆ 60 ಮೀಟರ್ ಅಂತರದಲ್ಲೇ ಬಿ.ಸಿ.ಸೋಮಯ್ಯ ಎಂಬುವರು ಮದ್ಯದಂಗಡಿ ತೆರೆದಿದ್ದಾರೆ. ಮದ್ಯ ಮಾರಾಟ ಪರವಾನಗಿ ಕೋರಿ ಅವರು ಅಬಕಾರಿ ಇಲಾಖೆಗೆ ಅರ್ಜಿ ಸಲ್ಲಿಸಿದ್ದಾರೆ. ಶಾಲೆಯ ಪಕ್ಕದಲ್ಲಿ ಮದ್ಯದಂಗಡಿ ತೆರೆಯವುದು ಕಾನೂನು ಬಾಹಿರ. ಹೀಗಾಗಿ, ಪರವಾನಗಿ ನೀಡದಂತೆ ಅರ್ಜಿದಾರರು 2017ರ ಆ.19 ಮತ್ತು ಸೆ.27ರಂದು ಸಲ್ಲಿಸಿರುವ ಎರಡು ಪ್ರತ್ಯೇಕ ಮನವಿ ಪತ್ರಗಳನ್ನು ಕೊಡಗು ಜಿಲ್ಲಾಧಿಕಾರಿ ಮತ್ತು ಅಬಕಾರಿ ಆಯುಕ್ತರು ಈವರೆಗೆ ಪರಿಗಣಿಸಿಲ್ಲ ಎಂದು ದೂರಿದರು.
ಸರಕಾರಿ ವಕೀಲರು ವಾದಿಸಿ, ಇನ್ನು ಸಹ ಮದ್ಯ ಪರವಾನಗಿ ನೀಡಿಲ್ಲ. ಶೀಘ್ರ ಅರ್ಜಿದಾರರ ಮನವಿಪತ್ರ ಪರಿಶೀಲಿಸಲಾಗುವುದು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠ, ಸರಕಾರವು ಅರ್ಜಿದಾರರ ಪರವಾನಗಿಯನ್ನು ಯಾವಾಗ ಪರಿಗಣಿಸುತ್ತೀರಾ? ಎಂಬುದನ್ನು ಖಚಿತವಾಗಿ ತಿಳಿಸಿ ಅದಕ್ಕೆ ಹಿಂಬರಹವನ್ನೂ ನೀಡಬೇಕು. ಮೌಖಿಕವಾಗಿ ಪರಿಗಣಿಸಲಾಗುವುದು ಎಂದರೆ ಸಾಲದು. ಸಾರ್ವಜನಿಕರು ತಮ್ಮ ಕುಂದು ಕೊರತೆಗಳ ಪರಿಹಾರ ಕೋರಿ ಸಲ್ಲಿಸುವ ಮನವಿಗಳನ್ನು ಪರಿಗಣಿಸುವ ಬಗ್ಗೆ ಸರಕಾರವು ಇನ್ನು ಲಖಿತವಾಗಿ ಉತ್ತರಿಸಬೇಕು. ಆ ಬಗ್ಗೆ ಹಿಂಬರಹ ನೀಡಬೇಕು ಎಂದು ಸರಕಾರಿ ವಕೀಲರಿಗೆ ಸೂಚಿತು. ಅರ್ಜಿ ವಿಚಾರಣೆಯನ್ನು ಡಿ.5ಕ್ಕೆ ಮುಂದೂಡಿತು.







