ಮಣಿಪಾಲ: ಬಂಧಿತ ನೈಜಿರಿಯಾ ಪ್ರಜೆ ಸ್ವದೇಶಕ್ಕೆ

ಮಣಿಪಾಲ, ನ.2: ವೀಸಾ ಅವಧಿ ಮುಗಿದ ನಂತರವೂ ಕಳೆದ 10 ತಿಂಗಳು ಗಳಿಂದ ಮಣಿಪಾಲದಲ್ಲಿ ಅಕ್ರಮವಾಗಿ ವಾಸಮಾಡಿ ಪೊಲೀಸರಿಂದ ಬಂಧಿತನಾದ ನೈಜಿರಿಯಾದ ಪ್ರಜೆಯನ್ನು ಉಡುಪಿ ನ್ಯಾಯಾಲಯದ ಆದೇಶದಂತೆ ಇಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ನೈಜೀರಿಯಾಕ್ಕೆ ಕಳುಹಿಸಿಕೊಡಲಾಗಿದೆ.
ನೈಜಿರಿಯಾ ದೇಶದ ರಾಜಿ ರೊಖಿಬ್ ಬಬತುಂಡೆ(25) ಶಿಕ್ಷಣದ ಉದ್ದೇಶಕ್ಕಾಗಿ 2011ರ ಆ.24ರಂದು ಭಾರತಕ್ಕೆ ಬಂದು ಮಣಿಪಾಲ ವಿವಿಯ ಸ್ಕೂಲ್ ಆಫ್ ಅಲೈಡ್ ಸೈನ್ಸ್‌ನಲ್ಲಿ ಮಾಸ್ಟರ್ ಆಫ್ ಅಕ್ಯುಪೆಶನಲ್ ಥೆರಪಿ ಕೋರ್ಸ್‌ಗೆ ಸೇರಿದ್ದನು. ಆತ ಇಲ್ಲಿಯೇ ಪದವಿ ಮತ್ತು ಸ್ನಾತಕೋತ್ತರ ಪದವಿಯನ್ನು ಪಡೆದಿದ್ದನು.
ಮಣಿಪಾಲ ಜಿಲ್ಲಾಧಿಕಾರಿ ರಸ್ತೆಯಲ್ಲಿರುವ ನೆಹರೂ ಬ್ಲಾಕ್‌ನ ಹಿಂಬದಿಯ ದಾಮೋದರ್ ನಿಲಯದಲ್ಲಿ ವಾಸವಾಗಿದ್ದ ಈತನ ಪಾಸ್‌ಪೋರ್ಟ್ ಅವಧಿ 2020ರ ಡಿ.30ರವರೆಗೆ ಇದ್ದರೂ, ಸ್ಟುಡೆಂಟ್ ವೀಸಾ ಅವಧಿಯು 2017ರ ಜ.31ಕ್ಕೆ ಮುಕ್ತಾಯವಾಗಿತ್ತು. ಅದರ ಬಳಿಕವೂ ಆತ ಭಾರತದಲ್ಲಿರಲು ವೀಸಾ ಮತ್ತು ವಾಸ್ತವ್ಯದ ನೊಂದಾವಣೆ ಪತ್ರ ಇಲ್ಲದೆ ಅಕ್ರಮವಾಗಿ ಮಣಿಪಾಲದಲ್ಲಿ ವಾಸ್ತವ್ಯವಿದ್ದು, ಪಾಸ್‌ಪೊರ್ಟ್ ನಿಯಮಾವಳಿಗಳನ್ನು ಉಲ್ಲಂಘಿಸಿದ್ದನು.
ಅದರಂತೆ ಪೊಲೀಸರು ಆತನನ್ನು ಅ.16ರಂದು ಬಂಧಿಸಿ ಉಡುಪಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು. ನ್ಯಾಯಾಲಯ ವಿಚಾರಣೆ ನಡೆಸಿ ಆತನಿಗೆ ಅ.16ರಿಂದ 25ರವರೆಗೆ ಸಾದಾ ಶಿಕ್ಷೆ ಹಾಗೂ 10,000 ರೂ.ಗಳ ದಂಡ ವಿಧಿಸಿತ್ತಲ್ಲದೇ ದೇಶದಿಂದ ಕಳುಹಿಸಿಕೊಡುವಂತೆಯೂ ಆದೇಶಿಸಿತ್ತು.
ಅದರಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸಂಜೀವ್ ಎಂ.ಪಾಟೀಲ್ ಅವರು ಆತನನ್ನು ನೈಜೀರಿಯಾಕ್ಕೆ ಕಳುಹಿಸಲು ವ್ಯವಸ್ಥೆ ಮಾಡಿದ್ದು, ನ.2ರಂದು ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಇಮಿಗ್ರೇಷನ್ ಅಧಿಕಾರಿಗಳಿಗೆ ಹಸ್ತಾಂತರಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಇಂದು ಆತನನ್ನು ನೈಜೀರಿಯಾಕ್ಕೆ ಕಳುಹಿಸಿಕೊಡಲಾಗಿದೆ ಎಂದು ಉಡುಪಿ ಪೊಲೀಸ್ ಇಲಾಖೆಯ ಪ್ರಕಟಣೆ ತಿಳಿಸಿದೆ.







