ಕ್ಷೇತ್ರ ಬದಲಾವಣೆಯ ಮಾತಿಲ್ಲ:ಶಾಸಕ ಚಲುವರಾಯಸ್ವಾಮಿ ಸ್ಪಷ್ಟನೆ
ಮಾಧ್ಯಮ ವರದಿ ವಿರುದ್ಧ ಅಸಮಾಧಾನ
ನಾಗಮಂಗಲ, ನ.2: ನಾನು ಕ್ಷೇತ್ರ ಬದಲಾವಣೆ ಮಾಡುತ್ತೇನೆಂಬುದು ವಿರೋಧಿ ಬಣದ ಸೋಲಿನ ಹತಾಶೆಯ ಮಾತು. ರಾಜಕೀಯವಾಗಿ ಎಂತಹ ಸಂದರ್ಭ ಎದುರಾದರೂ ಕ್ಷೇತ್ರ ಬದಲಾವಣೆಯ ಮಾತಿಲ್ಲ ಎಂದು ಶಾಸಕ ಎನ್.ಚಲುವರಾಯಸ್ವಾಮಿ ಸ್ಪಷ್ಟಪಡಿಸಿದರು.
ತಾಲೂಕಿನ ಕಸಬ ಹೋಬಳಿ ಅರಸೇಗೌಡನಕೊಪ್ಪಲು ಗ್ರಾಮದಲ್ಲಿ 10 ಲಕ್ಷ ರೂ. ವೆಚ್ಚದ ರಸ್ತೆ ಅಭಿವೃದ್ದಿ ಕಾಮಗಾರಿಗೆ ಚಾಲನೆ ನೀಡಿದ ಮಾತನಾಡಿದ ಅವರು, ದೃಶ್ಯ ಮಾಧ್ಯಮವೊಂದರಲ್ಲಿ ತಾವು ಕ್ಷೇತ್ರ ಬದಲಾವಣೆ ಮಾಡುವುದಾಗಿ ವರದಿಯಾಗಿರುವುದು ಸುಳ್ಳು ಎಂದರು.
ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಾಧ್ಯಮ ಕ್ಷೇತ್ರಕ್ಕೆ, ಅದರದೇ ಆದ ಘನತೆ ಮತ್ತು ಗೌರವ ಇದೆ. ಆದರೆ, ವಿಷಯ ಪ್ರಸಾರ ಮಾಡುವ ಮುನ್ನ ಸಂಬಂಧಿಸಿದ ವ್ಯಕ್ತಿಯ ಅಭಿಪ್ರಾಯಕ್ಕೆ ಮನ್ನಣೆ ನೀಡಬೇಕೆಂಬ ಕನಿಷ್ಠ ಜ್ಞಾನವಿರಬೇಕು ಎಂದು ಅಸಮಾಧಾನ ವ್ಯಕ್ತಪಡಿಸಿದರು. ಅನೇಕ ಬಾರಿ ಸ್ಪಷ್ಟೀಕರಣ ನೀಡುತ್ತಾ ಬಂದರೂ, ಪದೆ ಪದೆ ಸಾರ್ವಜನಿಕ ವಲಯದಲ್ಲಿ ಗೊಂದಲ ಮೂಡಿಸುವುದು ಸರಿಯಾದ ಕ್ರಮವಲ್ಲ. ನನ್ನ ರಾಜಕೀಯ ಜೀವನದ 25 ವರ್ಷಗಳ ಇತಿಹಾಸದಲ್ಲಿ ಕ್ಷೇತ್ರದ ಮತದಾರರ ಮೇಲೆ ನಂಬಿಕೆ ಇಟ್ಟವನೇ ವಿನಃ ಮತ್ತೆ ಯಾವುದನ್ನೂ ನಂಬಿದವನಲ್ಲ. ಈ ಕ್ಷೇತ್ರದ ನಾಗರಿಕರ ನಾಡಿ ಮಿಡಿತ ನನಗೆ ಅರ್ಥವಿದೆ ಎಂದು ಅವರು ಹೇಳಿದರು.
ಕಾಂಗ್ರೆಸ್ ಪಕ್ಷಕ್ಕೆ, ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲೂ ಅಭ್ಯರ್ಥಿಗಳ ಕೊರತೆ ಇಲ್ಲ. ನಾಗಮಂಗಲ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ನನಗೆ ಕಾಂಗ್ರೆಸ್ ಟಿಕೆಟ್ ತಪ್ಪಿಸುವ ಹುನ್ನಾರ ನಡೆಸಿದರೂ ಧೃತಿಗೆಡುವುದಿಲ್ಲ. ಕ್ಷೇತ್ರದ ಮತದಾರರ ಮೇಲೆ ನನಗೆ, ನನ್ನ ಮೇಲೆ ಮತದಾರರಿಗೆ ವಿಶ್ವಾಸವಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಶಾಸಕನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆಯೇ ಹೊರತು ಚುನಾವಣೆಯ ರಾಜಕೀಯ ಮಾಡಲು ಪ್ರಾರಂಭಿಸಿಲ್ಲ. ಕ್ಷೇತ್ರ ಬದಲಾವಣೆಯಂತಹ ವಿಷಯ ವಿರೋಧಿ ಬಣದ ಷಡ್ಯಂತರದ ಹತಾಶೆಯ ಕಲ್ಪನೆ. ಈ ವಿಷಯವಾಗಿ ನನ್ನ ಮತದಾರರು ಗೊಂದಲ ಮಾಡಿಕೊಳ್ಳಬಾರದು. 2018ರ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ನಾಗಮಂಗಲ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯಾಗುವುದನ್ನು ಯಾರಿಂದಲೂ ತಡೆಯಲು ಸಾಧ್ಯವಿಲ್ಲ. ದೇವರ ಮತ್ತು ಮತದಾರರ ತೀರ್ಮಾನಕ್ಕಷ್ಟೆ ನಾನು ಬದ್ದ ಎಂದರು.
ಜಿ.ಪಂ ಸದಸ್ಯೆ ಸುನಂದ ದೊರೆಸ್ವಾಮಿ, ತಾಪಂ ಸದಸ್ಯೆ ಜಯಲಕ್ಷ್ಮಿ ಬಸವಲಿಂಗೇಗೌಡ, ಗ್ರಾಪಂಸದಸ್ಯ ಅಶೋಕ್, ಟಿಎಪಿಸಿಎಂಎಸ್ ನಿರ್ದೇಶಕರಾದ ಕೆ.ಪಿ.ಶಿವನಂಜೇಗೌಡ ಮತ್ತು ಎಸ್.ಬಿ.ರಮೇಶ್, ಇತರ ಮುಖಂಡರು ಹಾಜರಿದ್ದರು.







