ಉಳ್ಳಾಲ: ಸೋಮೇಶ್ವರ ವ್ಯಾಪ್ತಿಯಲ್ಲಿ ಸಿಆರ್‌ಝೆಡ್ -2ರ ಅನುಷ್ಠಾನದ ಮಾಹಿತಿ ಸಭೆ
ಉಳ್ಳಾಲ, ನ. 2: ಉಳ್ಳಾಲ ಸೋಮೇಶ್ವರ ವ್ಯಾಪ್ತಿಯಲ್ಲಿ ಸಿಆರ್ ಝೆಡ್ -2ರ ಅನುಷ್ಠಾನದ ಕರಡು ನಕ್ಷೆಯ ಮಾಹಿತಿ ಹಾಗೂ ಆಕ್ಷೇಪಣೆ ಸಲ್ಲಿಸುವ ಕುರಿತ ಮಾಹಿತಿ ಸಭೆಯು ಗುರುವಾರ ಉಳ್ಳಾಲ ನಗರಸಭೆಯಲ್ಲಿ ನಡೆಯಿತು.
ಸಭೆಯಲ್ಲಿ ಪರಿಸರ ಇಲಾಖೆಯ ಪ್ರಾದೇಶಿಕ ನಿರ್ದೇಶಕ ಡಾ.ವೈ.ಕೆ.ದಿನೇಶ್ ಕುಮಾರ್ ಅವರು ಮಾತನಾಡಿ, ಅಭಿವೃದ್ಧಿ ಹೊಂದುತ್ತಿರುವ ಪ್ರದೇಶಗಳಲ್ಲಿ ಸಿಆರ್ ಝೆಡ್-2 ನ್ನು ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಉಳ್ಳಾಲ ಮತ್ತು ಸೋಮೇಶ್ವರದ ಕರಡು ನಕ್ಷೆಯನ್ನು ರಚಿಸಲಾಗಿದ್ದು, ನ.7 ರ ಒಳಗೆ ಕೇಂದ್ರ ಸರಕಾರಕ್ಕೆ ಅನುಮೋದನೆಗೆ ಕಳುಹಿಸುವ ಮುನ್ನ ಆಕ್ಷೇಪಣೆಗಳಿದ್ದಲ್ಲಿ ಸಲ್ಲಿಸಬಹುದು ಎಂದು ಹೇಳಿದರು.
ಜಿಲ್ಲೆಯ ಸಮುದ್ರ ತೀರದ ಪ್ರದೇಶಗಳಲ್ಲಿ ಶೇ.60 ರಷ್ಟು ಸಿಆರ್ ಝೆಡ್ -2 ವ್ಯಾಪ್ತಿಯಲ್ಲಿದೆ. ಉಳ್ಳಾಲ ಮತ್ತು ಸೋಮೇಶ್ವರ ವ್ಯಾಪ್ತಿಯಲ್ಲಿ 1991ರಿಂದ ಸಿಆರ್ ಝೆಡ್-1, ಮತ್ತು ಸಿಆರ್ ಝೆಡ್-3ರ ಕಾಯ್ದೆ ಜಾರಿಯಲ್ಲಿದೆ. 1986ರಿಂದ ಆರಂಭಗೊಂಡ ಕಡಲ್ಕೊರೆತವನ್ನು ಮುಂದಿಟ್ಟು ಸಿಆರ್‌ಝೆಡ್-1 ನ್ನು ಉಳ್ಳಾಲದಲ್ಲಿ ಅನುಷ್ಠಾನಗೊಳಿಸಲಾಗಿತ್ತು. ಆದರೆ ಇದರಿಂದಾಗಿ ಸಮುದ್ರ ತೀರದಲ್ಲಿ ಮನೆಗಳು, ಕಟ್ಟಡಗಳು ಕಟ್ಟಲು ಅಸಾಧ್ಯವಾಗುತ್ತಿದ್ದು, ಅಭಿವೃದ್ಧಿ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಸಿಆರ್ ಝೆಡ್-2 ನೀತಿ ಜಾರಿಗೆ ಬಂದಲ್ಲಿ ಸಮುದ್ರ ತೀರದ ಜನರಿಗೆ ಕಾನೂನು ಸಡಿಲವಾಗಲಿದ್ದು, ದಾಖಲೆಗಳಿರುವ ಮನೆಗಳನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಸಾಧ್ಯ. ಇದೀಗ ಅಭಿವೃದ್ಧಿ ಹೊಂದುತ್ತಿರುವ ಪಟ್ಟಣ ಪಂ. ವ್ಯಾಪ್ತಿಗಳಲ್ಲಿ ಸಿಆರ್ ಝೆಡ್ -2 ನ್ನು ಜಾರಿಗೊಳಿಸಲು ತೀರ್ಮಾನಿಸಲಾಗಿದ್ದು, ಅದರಂತೆ ಪ್ರದೇಶಗಳಿಗೆ ಭೇಟಿ ನೀಡಿ ಕರಡು ನಕ್ಷೆಯನ್ನು ರಚಿಸಲಾಗಿದೆ. ಈ ಸಿಆರ್ ಝೆಡ್-2 ನೀತಿ ಸೋಮೇಶ್ವರ ಮತ್ತು ಉಳ್ಳಾಲ ನಗರಸಭೆ ವ್ಯಾಪ್ತಿಗೆ ಅನುಷ್ಠಾನಕ್ಕೆ ಬರಲಿದೆ. ನಕ್ಷೆಯನ್ನು ಗಮನಿಸಿ ಸಾರ್ವಜನಿಕರು ಆಕ್ಷೇಪಣೆಗಳಿದ್ದಲ್ಲಿ ನ.7 ರ ಮುನ್ನ ಅರ್ಜಿ ಸಲ್ಲಿಸಲು ಕೋರಲಾಗಿದೆ. ನಂತರ ವರದಿ ಕೇಂದ್ರ ಸರಕಾರಕ್ಕೆ ಅನುಮೋದನೆಗೆ ಕಳುಹಿಸಲಿದ್ದೇವೆ ಎಂದರು.
ಸಭೆಯಲ್ಲಿ ಸದಸ್ಯ ದಿನೇಶ್ ರೈ ಮಾತನಾಡಿ ನಗರಸಭೆ ಸರ್ವ ಸದಸ್ಯರು ಸಿಆರ್ ಝೆ -2ರ ನೀತಿ ಅನುಷ್ಠಾನಕ್ಕೆ ಒಪ್ಪಿಗೆ ಸೂಚಿಸಿದರೂ, ಸದ್ಯ ಸಿಆರ್ ಝೆಡ್ -1 ರ ನೀತಿಯಂತೆ ಡೋರ್ ನಂಬರ್, ವಿದ್ಯುತ್ , ಹಾಗೂ ನಿರಾಕ್ಷೇಪಣಾ ಪತ್ರವನ್ನು ನೀಡದೆ ಸತಾಯಿಸುತ್ತಿರುವ ಮನೆಮಂದಿಗೆ ಅದನ್ನು ನೀಡುವಂತೆ ಕಮೀಷನರ್ ಅವರಿಗೆ ಸೂಚಿಸಬೇಕು ಎಂಬ ಆಗ್ರಹಕ್ಕೆ ನಗರಸಭೆ ಸರ್ವ ಸದಸ್ಯರು ಬೆಂಬಲ ಸೂಚಿಸಿದರು. ಈ ಸಂದರ್ಭ ಸಿಆರ್ ಝೆಡ್ ನ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಉತ್ತಪ್ಪ, ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್ ಯು., ಉಳ್ಳಾಲ ನಗರಸಭೆ ಅಧ್ಯಕ್ಷ ಹುಸೈನ್ ಕುಂಞಿಮೋನು, ಉಪಾಧ್ಯಕ್ಷೆ ಚಿತ್ರಾ ಚಂದ್ರಕಾಂತ್, ಪೌರಾಯುಕ್ತೆ ವಾಣಿ.ವಿ ಆಳ್ವ ಉಪಸ್ಥಿತರಿದ್ದರು.







