ತುಳು ಭಾಷೆ ಬೆಳವಣಿಗೆಗೆ ಶ್ರದ್ಧೆಯಿಂದ ಕೆಲಸ ಮಾಡೋಣ: ಸಚಿವ ರಮಾನಾಥ ರೈ

ಮಂಗಳೂರು, ನ. 2: ಯಾವುದೇ ಭಾಷೆ ಬಳಕೆಯಲ್ಲಿ ಇರದಿದ್ದರೆ, ಅದು ಸ್ವತಃ ನಾಶವಾಗುವ ಅಪಾಯವಿದೆ. ಆದ್ದರಿಂದ ತುಳು ಭಾಷೆಯನ್ನು ಹೆಚ್ಚಾಗಿ ಬಳೆಕ ಮಾಡುವುದರ ಜೊತೆಗೆ ಅದರ ಬೆಳವಣಿಗೆಗೆ ಶ್ರದ್ಧೆಯಿಂದ ಕೆಲಸ ಮಾಡಬೇಕಾದ ಅಗತ್ಯವಿದೆ ಎಂದು ಅರಣ್ಯ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ,.ರಮಾನಾಥರೈ ಹೇಳಿದ್ದಾರೆ.
ವಿಶ್ವ ತುಳುವೆರೆ ಆಯನೊ ಕೂಟ ಮತ್ತು ಡಾ.ಶಿವರಾಮ ಕಾರಂತ ಪಿಲಿಕುಳ ನಿಸರ್ಗಧಾಮ ಹಾಗೂ ವಿವಿಧ ಸಂಘಟನೆಗಳ ಸಹಯೋಗದಲ್ಲಿ ನಗರದ ಮಾರ್ನಮಿಕಟ್ಟೆಯ ಸುರೇಶ್ ವಿಹಾರ್‌ಲ್ಲಿ ನಡೆದ ‘ತುಳುನಾಡೋಚ್ಚಯ 2017’ ಕಚೇರಿ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ತುಳು ಭಾಷೆ ವಿವಿಧ ಜಿಲ್ಲೆಗಳಲ್ಲಿ ಬಳಕೆಯಲ್ಲಿದೆ. ಅದು ವ್ಯಾವಹಾರಿಕ ಭಾಷೆಯೂ ಹೌದು. ಪ್ರಪಂಚದ ವಿವಿಧ ದೇಶಗಳಲ್ಲಿ ತುಳುವರು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದಾರೆ. ಭಾಷೆಗೆ ಜಾತಿ. ಧರ್ಮ ಎಂಬುದಿಲ್ಲ. ಯಾರು ತುಳು ಭಾಷೆ ಮಾತನಾಡುತ್ತಾರೋ ಅವರೆಲ್ಲರೂ ತುಳುವರು ಎಂದರು.
‘ತುಳುನಾಡೋಚ್ಚಯ 2017’ ಇದರ ಅಧ್ಯಕ್ಷ ಡೇವಿಡ್ ಫ್ರಾಂಕ್ ಫೆರ್ನಾಂಡಿಸ್ ಅಧ್ಯಕ್ಷತೆ ವಹಿಸಿದ್ದರು. ಮೇಯರ್ ಕವಿತಾ ಸನಿಲ್, ಅತ್ತಾವರ ವಾರ್ಡ್‌ನ ಕಾರ್ಪೊರೇಟರ್ ಶೈಲಜಾ, ಶ್ರೀ ಕ್ಷೇತ್ರ ಬಪ್ಪನಾಡು ಅನುವಂಶಿಕ ಮೊಕ್ತೇಸರ ದುಗ್ಗಣ್ಣ ಸಾವಂತ ಅರಸೆರ್, ಕರ್ನಾಟಕ ತುಳು ಸಾಹಿತ್ಯ ಅಕಾಡಮಿಯ ಅಧ್ಯಕ್ಷ ಎ.ಸಿ.ಭಂಡಾರಿ, ಕನ್ನಡ ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ಹರಿಕೃಷ್ಣ ಪುನರೂರು, ತುಳು ಕೂಟ ಕುಡ್ಲದ ಅಧ್ಯಕ್ಷ ದಾಮೋದರ ನಿಸರ್ಗ, ಒಡಿಯೂರು ಶ್ರೀ ಗ್ರಾಮ ವಿಕಾಸ ಯೋಜನೆಯ ಸಂಚಾಲಕ ತಾರನಾಥ ಕೊಟ್ಟಾರಿ, ತುಳು ರಕ್ಷಣಾ ವೇದಿಕೆ ಮಹಿಳಾ ಘಟಕದ ಅಧ್ಯಕ್ಷೆ ಜ್ಯೋತಿಕಾ ಜೈನ್, ಮಂಗಳೂರು ತಾಲೂಕು ಮಹಿಳಾ ಒಕ್ಕೂಟದ ಅಧ್ಯಕ್ಷೆ ಚಂಚಲಾ ತೇಜೋಮಯ, ತುಳುನಾಡೋಚ್ಚಯದ ಪ್ರಧಾನ ಕಾರ್ಯದರ್ಶಿ ಶಮೀನಾ ಆಳ್ವ, ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಜಪ್ಪು ಮೊದಲಾದವರು ಉಪಸ್ಥಿತರಿದ್ದರು.







