ಸರಕಾರಿ ಆಸ್ಪತ್ರೆಗಳಲ್ಲಿ ಎಂದಿನಂತೆ ಚಿಕಿತ್ಸೆ ಲಭ್ಯ: ಜಿಲ್ಲಾ ಆರೋಗ್ಯ, ಕುಟುಂಬ ಕಲ್ಯಾಣ ಇಲಾಖೆ ಸ್ಪಷ್ಟಣೆ
ಮಂಗಳೂರು, ನ.2: ಖಾಸಗಿ ಆಸ್ಪತ್ರೆಗಳು ನ.3ರಂದು ಮುಷ್ಕರಕ್ಕೆ ಕರೆ ನೀಡಿದ್ದರೂ, ಜಿಲ್ಲೆಯಲ್ಲಿರುವ ಎಲ್ಲಾ ಸರಕಾರಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಗಳು ಎಂದಿನಂತೆ ಸಾರ್ವಜನಿಕರ ಸೇವೆಗೆ ಲಭ್ಯವಿದೆ ಎಂದು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಪ್ರಕಟಣೆ ತಿಳಿಸಿದೆ.
ಜಿಲ್ಲೆಯಲ್ಲಿರುವ ಎಲ್ಲ 65 ಪ್ರಾಥಮಿಕ ಆರೋಗ್ಯ ಕೇಂದ್ರ, 7 ಸಮುದಾಯ ಆರೋಗ್ಯ ಕೇಂದ್ರ, 4 ತಾಲೂಕು ಆಸ್ಪತ್ರೆಗಳಲ್ಲಿ ವೈದ್ಯರ ಸೇವೆ ನಿರಂತರವಾಗಿ ಲಭ್ಯವಿದೆ. ಆಸ್ಪತ್ರೆಗಳ ಹೊರರೋಗಿ ಮತ್ತು ಒಳರೋಗಿ ವಿಭಾಗ ಸೇರಿದಂತೆ ಶಸ್ತ್ರಚಿಕಿತ್ಸೆಗಳ ಸೌಲಭ್ಯವೂ ಲಭ್ಯವಿದೆ. ತಾಲೂಕು ಆಸ್ಪತ್ರೆಗಳಲ್ಲಿ ಸ್ಪೆಷಲಿಸ್ಟ್ ಡಾಕ್ಟರ್‌ಗಳು ಚಿಕಿತ್ಸೆಗೆ ಲಭ್ಯವಿರುತ್ತಾರೆ. ನ.3ರಂದು ಎಲ್ಲ ಸರಕಾರಿ ಆಸ್ಪತ್ರೆಗಳಲ್ಲಿ ವೈದ್ಯರು ಕರ್ತವ್ಯಕ್ಕೆ ಹಾಜರಾಗಲಿದ್ದು, ರಜೆಯಲ್ಲಿರುವ ವೈದ್ಯರನ್ನು ಕರ್ತವ್ಯಕ್ಕೆ ಹಾಜರಾಗಲು ಸೂಚಿಸಲಾಗಿದೆ.
ಹೀಗಾಗಿ ಸಾರ್ವಜನಿಕರು ಯಾವುದೇ ಚಿಕಿತ್ಸೆ, ತುರ್ತು ಚಿಕಿತ್ಸೆ ಅಗತ್ಯವಿದ್ದಲ್ಲಿ ಅಥವಾ ಯಾವುದೇ ಸಾಮಾನ್ಯ ಕಾಯಿಲೆಗಳಿಗೆ ವೈದ್ಯರನ್ನು ಭೇಟಿಯಾಗಲು ಇಚ್ಚಿಸಿದ್ದಲ್ಲಿ ಜಿಲ್ಲೆಯ ಯಾವುದೇ ಸರಕಾರಿ ಆಸ್ಪತ್ರೆಗಳಿಗೆ ಭೇಟಿ ನೀಡಬಹುದು. ಇದಲ್ಲದೆ ಆರೋಗ್ಯ ಇಲಾಖೆಯ 17 ಆ್ಯಂಬುಲೆನ್ಸ್ ಗಳು ಹಾಗೂ 108 ಆರೋಗ್ಯ ಕವಚ ಸಾರ್ವಜನಿಕರಿಗೆ ಸೇವೆ ನೀಡಲು ಸನ್ನದ್ಧವಾಗಿದೆ.
ವೆನ್ಲಾಕ್ ಆಸ್ಪತ್ರೆ: ಮಂಗಳೂರಿನ ವೆನ್ಲಾಕ್ ಜಿಲ್ಲಾ ಆಸ್ಪತ್ರೆಯಲ್ಲಿ ತುರ್ತು ವೈದ್ಯಕೀಯ ಸೇವೆಗಾಗಿ ಎಲ್ಲ ವ್ಯವಸ್ಥೆಗಳನ್ನು ಕೈಗೊಳ್ಳಲಾಗಿದೆ. ಎಂದಿನಂತೆ ಪ್ರತೀ ನಿತ್ಯ ದೊರಕುವ ವೈದ್ಯಕೀಯ ಚಿಕಿತ್ಸೆಗಳು ಸಾರ್ವಜನಿಕರಿಗೆ ದೊರಕಲಿದೆ. ಎಲ್ಲ ವೈದ್ಯಕೀಯ ಸೇವೆಗಳನ್ನು ಆಸ್ಪತ್ರೆಯಲ್ಲಿ ಯಾವುದೇ ವ್ಯತ್ಯಯ ಇಲ್ಲದೆ ಕಾರ್ಯನಿರ್ವಹಿಸಲಾಗುವುದು.
ಆಸ್ಪತ್ರೆಯ ಸಿಬ್ಬಂದಿ ಹಾಗೂ ಫಾರ್ಮಸಿ/ಪ್ಯಾರ ಮೆಡಿಕಲ್/ನರ್ಸಿಂಗ್/ಗ್ರೂಪ್ ಡಿ/ಹೌಸ್ ಕೀಪಿಂಗ್‌ನವರಿಗೆ ತಮ್ಮ ಕರ್ತವ್ಯ ನಿರ್ವಹಿಸಲು ಸೂಚಿಸಿದೆ. ಎಲ್ಲ ಒಪಿಡಿ/ತುರ್ತು ಚಿಕಿತ್ಸಾ ಘಟಕಗಳು/ ಸರಕಾರಿ ವೈದ್ಯರ/ಎನ್‌ಎಚ್‌ಎಂ ನೆರವಿನಿಂದ ನಡೆಸಲಾಗುತ್ತದೆ. ಕ್ಯಾಶುವಲ್ಟಿ/ತುರ್ತು ಚಿಕಿತ್ಸೆಗಳನ್ನು ಒಪಿಡಿ/ಐಪಿಡಿ ಘಟಕದ ಮುಖ್ಯಸ್ಥರ ನೇತೃತ್ವದಲ್ಲಿ ಸೂಕ್ತವಾಗಿ ನಿರ್ವಹಿಸಲಾಗುವುದು ಎಂದು ವೆನ್ಲಾಕ್ ಅಧೀಕ್ಷಕರ ಪ್ರಕಟಣೆ ತಿಳಿಸಿದೆ.







