ಚೇತೇಶ್ವರ ಪೂಜಾರ ಐತಿಹಾಸಿಕ ಸಾಧನೆ
ಪ್ರ.ದರ್ಜೆ ಕ್ರಿಕೆಟ್‌ನಲ್ಲಿ 12ನೆ ದ್ವಿಶತಕ ಸಿಡಿಸಿದ ಭಾರತದ ಮೊದಲಿಗ

ಹೊಸದಿಲ್ಲಿ, ನ.2: ಜಾರ್ಖಂಡ್ ವಿರುದ್ಧ ರಣಜಿ ಟ್ರೋಫಿ ‘ಬಿ’ ಗುಂಪಿನ ಪಂದ್ಯದಲ್ಲಿ 12ನೆ ಪ್ರಥಮ ದರ್ಜೆ ಕ್ರಿಕೆಟ್ ದ್ವಿಶತಕ ಸಿಡಿಸಿದ ಸೌರಾಷ್ಟ್ರ ಬ್ಯಾಟ್ಸ್‌ಮನ್ ಚೇತೇಶ್ವರ ಪೂಜಾರ ಐತಿಹಾಸಿಕ ಸಾಧನೆ ಮಾಡಿದ್ದಾರೆ.
ಈ ಸಾಧನೆಯ ಮೂಲಕ ಪೂಜಾರ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 11 ದ್ವಿಶತಕಗಳನ್ನು ಸಿಡಿಸಿರುವ ವಿಜಯ್ ಮರ್ಚೆಂಟ್ ದಾಖಲೆಯನ್ನು ಮುರಿದರು. ಇದೀಗ ದೇಶೀಯ ಕ್ರಿಕೆಟ್‌ನಲ್ಲಿ ಗರಿಷ್ಠ ದ್ವಿಶತಕ ಸಿಡಿಸಿದ ಭಾರತದ ಮೊದಲ ದಾಂಡಿಗ ಎನಿಸಿಕೊಂಡಿದ್ದಾರೆ. ವಿಜಯ್ ಹಝಾರೆ, ಸುನೀಲ್ ಗವಾಸ್ಕರ್ ಹಾಗೂ ರಾಹುಲ್ ದ್ರಾವಿಡ್ ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ತಲಾ 10 ದ್ವಿಶತಕಗಳನ್ನು ಬಾರಿಸಿದ್ದಾರೆ. ಏಷ್ಯಾ ಆಟಗಾರರಲ್ಲಿ ಕುಮಾರ ಸಂಗಕ್ಕರ 13 ದ್ವಿಶತಕ ದಾಖಲಿಸಿ ಪೂಜಾರಗಿಂತ ಮುಂದಿದ್ದಾರೆ. ಆಸ್ಟ್ರೇಲಿಯದ ದಂತಕತೆ ಡಾನ್ ಬ್ರಾಡ್ಮನ್ ಗರಿಷ್ಠ (37) ಪ್ರಥಮ ದರ್ಜೆ ಶತಕ ಸಿಡಿಸಿದ ವಿಶ್ವದ ಮೊದಲ ಬ್ಯಾಟ್ಸ್‌ಮನ್ ಆಗಿದ್ದಾರೆ
ಅಜೇಯ 125 ರನ್‌ನಿಂದ ಬ್ಯಾಟಿಂಗ್ ಮುಂದುವರಿಸಿದ ಪೂಜಾರ 355 ಎಸೆತಗಳಲ್ಲಿ 205 ರನ್ ಗಳಿಸಿದ್ದು, 28 ಬೌಂಡರಿ ಬಾರಿಸಿದ್ದಾರೆ. ಶಾಬಾಝ್ ನದೀಮ್‌ಗೆ ವಿಕೆಟ್ ಒಪ್ಪಿಸಿದರು. ಪೂಜಾರ ದ್ವಿಶತಕದ ನೆರವಿನಿಂದ ಸೌರಾಷ್ಟ್ರ ಮೊದಲ ಇನಿಂಗ್ಸ್‌ನಲ್ಲಿ 9 ವಿಕೆಟ್‌ಗಳ ನಷ್ಟಕ್ಕೆ 553 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. 108 ರನ್ ಗಳಿಸಿದ ಚಿರಾಗ್ ಜಾನಿ ಅವರು ಪೂಜಾರಗೆ ಉತ್ತಮ ಸಾಥ್ ನೀಡಿದರು.





