ರಣಜಿ: ಮಹಾರಾಷ್ಟ್ರ ವಿರುದ್ಧ ಕರ್ನಾಟಕ ಮೇಲುಗೈ
ಮಾಯಾಂಕ್ ದ್ವಿಶತಕ, ಸಮರ್ಥ್ ಶತಕ

ಪುಣೆ, ನ.2: ಆರಂಭಿಕ ಆಟಗಾರರಾದ ಮಾಯಾಂಕ್ ಅಗರವಾಲ್ ದ್ವಿಶತಕ(ಅಜೇಯ 219) ಹಾಗೂ ರವಿಕುಮಾರ್ ಸಮರ್ಥ್(129) ಶತಕದ ಬೆಂಬಲದ ನೆರವಿನಿಂದ ಕರ್ನಾಟಕ ತಂಡ ರಣಜಿ ಟ್ರೋಫಿ ‘ಎ’ ಗುಂಪಿನ ಪಂದ್ಯದಲ್ಲಿ ಆತಿಥೇಯ ಮಹಾರಾಷ್ಟ್ರದ ವಿರುದ್ಧ ಸಂಪೂರ್ಣ ಮೇಲುಗೈ ಸಾಧಿಸಿದೆ.
ಎರಡನೆ ದಿನವಾದ ಗುರುವಾರ ವಿಕೆಟ್‌ನಷ್ಟವಿಲ್ಲದೆ 117 ರನ್‌ನಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಕರ್ನಾಟಕ 125 ಓವರ್‌ಗಳಲ್ಲಿ 2 ವಿಕೆಟ್‌ಗಳ ನಷ್ಟಕ್ಕೆ 461 ರನ್ ಗಳಿಸಿದ್ದು ಒಟ್ಟು 216 ರನ್ ಮುನ್ನಡೆಯಲ್ಲಿದೆ.
ಮೊದಲ ವಿಕೆಟ್‌ಗೆ 259 ರನ್ ಜೊತೆಯಾಟ ನಡೆಸಿದ ಅಗರವಾಲ್(ಅಜೇಯ 219,373 ಎಸೆತ, 25 ಬೌಂಡರಿ,2 ಸಿಕ್ಸರ್) ಹಾಗೂ ಆರ್.ಸಮರ್ಥ್(129 ರನ್, 219 ಎಸೆತ, 17 ಬೌಂಡರಿ) ಕರ್ನಾಟಕ ಇನಿಂಗ್ಸ್‌ಗೆ ಭದ್ರಬುನಾದಿ ಹಾಕಿಕೊಟ್ಟರು.
ಮೂರು ಪಂದ್ಯಗಳಲ್ಲಿ ಎರಡನೆ ಶತಕ ಸಿಡಿಸಿದ ಸಮರ್ಥ್ ಅವರು ಸ್ವಪ್ನಿಲ್ ಗುಗಾಲೆಗೆ ವಿಕೆಟ್ ಒಪ್ಪಿಸಿದರು. ದೇಗಾ ನಿಶ್ಚಲ್(16) ಬೇಗನೆ ಔಟಾದರು. ಆಗ ಕರುಣ್ ನಾಯರ್(ಅಜೇಯ 56,121 ಎಸೆತ, 6 ಬೌಂಡರಿ) ಅವರೊಂದಿಗೆ ಕೈಜೋಡಿಸಿದ ಅಗರವಾಲ್ 3ನೆ ವಿಕೆಟ್‌ಗೆ ಮುರಿಯದ ಜೊತೆಯಾಟದಲ್ಲಿ 142 ರನ್ ಜೊತೆಯಾಟ ನಡೆಸಿದರು. ಕರ್ನಾಟಕವನ್ನು ಬೃಹತ್ ಮುನ್ನಡೆಯತ್ತ ಮುನ್ನಡೆಸಿದರು.
ಕರ್ನಾಟಕದ ಆರಂಭಿಕ ಜೋಡಿ ಸಮರ್ಥ್-ಅಗರವಾಲ್‌ರನ್ನು ಬೇರ್ಪಡಿಸಲು ಮಹಾರಾಷ್ಟ್ರ ಶತ ಪ್ರಯತ್ನ ನಡೆಸಿದ್ದು ಏಳು ಬೌಲರ್‌ಗಳನ್ನು ದಾಳಿಗಿಳಿಸಿತ್ತು. 67ನೆ ಓವರ್‌ನಲ್ಲಿ ಸ್ವಪ್ನಿಲ್ ಈ ಜೋಡಿಯನ್ನು ಬೇರ್ಪಡಿಸಿದರು.
ಮೊದಲ ದಿನವಾದ ಬುಧವಾರ ಮಹಾರಾಷ್ಟ್ರ ತಂಡ ಕರ್ನಾಟಕದ ನಾಯಕ ವಿನಯಕುಮಾರ್ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ 245 ರನ್ ಗಳಿಸಿ ಆಲೌಟಾಗಿತ್ತು.
ಸಂಕ್ಷಿಪ್ತ ಸ್ಕೋರ್
►ಮಹಾರಾಷ್ಟ್ರ ಮೊದಲ ಇನಿಂಗ್ಸ್: 55 ಓವರ್‌ಗಳಲ್ಲಿ 245/10
►ಕರ್ನಾಟಕ ಮೊದಲ ಇನಿಂಗ್ಸ್: 125 ಓವರ್‌ಗಳಲ್ಲಿ 461/2
(ಮಾಯಾಂಕ್ ಅಗರವಾಲ್ ಅಜೇಯ 219, ಆರ್.ಸಮರ್ಥ್ 129, ಕರುಣ್ ನಾಯರ್ ಅಜೇಯ 56,ಸ್ವಪ್ನಿಲ್ 1-32, ಚಿರಾಗ್ ಖುರಾನ 1-104)







