ಇಂಗ್ಲೆಂಡ್‌ನಲ್ಲಿ ಹಫೀಝ್ ಬೌಲಿಂಗ್ ಶೈಲಿಯ ಪರೀಕ್ಷೆ

ಕರಾಚಿ, ನ.2: ಪಾಕಿಸ್ತಾನದ ಹಿರಿಯ ಆಲ್‌ರೌಂಡರ್ ಮುಹಮ್ಮದ್ ಹಫೀಝ್ ಇಂಗ್ಲೆಂಡ್‌ನಲ್ಲಿ ಬಯೋಮೆಕಾನಿಕ್ಸ್ ಬೌಲಿಂಗ್ ಪರೀಕ್ಷೆಗೆ ಒಳಗಾಗಲಿದ್ದಾರೆ.
ಹಫೀಝ್ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮುಂದುವರಿಸಬಹುದೋ ಅಥವಾ ಮತ್ತೊಮ್ಮೆ ನಿಷೇಧ ಎದುರಿಸಬೇಕಾಗುತ್ತದೋ ಎನ್ನುವುದು ಇನ್ನೆರಡು ವಾರಗಳಲ್ಲಿ ಗೊತ್ತಾಗಲಿದೆ.
37ರ ಹರೆಯದ ಪಾಕ್ ಆಫ್ ಸ್ಪಿನ್ನರ್ ಹಫೀಝ್ ಇತ್ತೀಚೆಗೆ ಯುಎಇನಲ್ಲಿ ನಡೆದಿದ್ದ ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯ ವೇಳೆ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಒಳಗಾಗಿದ್ದರು.
ಹಫೀಝ್ ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿಜೀವನದಲ್ಲಿ ಮೂರನೆ ಬಾರಿ ಶಂಕಾಸ್ಪದ ಬೌಲಿಂಗ್ ಶೈಲಿಯ ಆರೋಪಕ್ಕೆ ಗುರಿಯಾಗಿದ್ದಾರೆ.
ಪಾಕ್‌ನ ಮಾಜಿ ನಾಯಕ ಹಫೀಝ್ 12 ತಿಂಗಳ ನಿಷೇಧದ ಬಳಿಕ ಕಳೆದ ಡಿಸೆಂಬರ್‌ನಲ್ಲಿ ಬ್ರಿಸ್ಬೇನ್‌ನಲ್ಲಿ ನಡೆದ ಬೌಲಿಂಗ್ ಪರೀಕ್ಷೆಯಲ್ಲಿ ಪಾಸಾಗಿ ಮತ್ತೊಮ್ಮೆ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದರು.
ಐಸಿಸಿ ಈ ಹಿಂದೆ ಹಫೀಝ್‌ಗೆ 2014ರ ಡಿಸೆಂಬರ್ ಹಾಗೂ 2015ರ ಜುಲೈನಲ್ಲಿ ಬೌಲಿಂಗ್ ಮಾಡಲು ನಿಷೇಧ ಹೇರಿತ್ತು.
‘‘ಇಂಗ್ಲೆಂಡ್‌ನಲ್ಲಿ ನಡೆಯಲಿರುವ ಬೌಲಿಂಗ್ ಶೈಲಿಯ ಪರೀಕ್ಷೆಯಲ್ಲಿ ಉತ್ತೀರ್ಣರಾಗುವ ವಿಶ್ವಾಸ ನನಗಿದೆ. ನಾನು 4 ಓವರ್ ಬೌಲಿಂಗ್ ಮಾಡುವೆ. ಮತ್ತೊಮ್ಮೆ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆಯುವ ಖಚಿತತೆ ನನಗಿದೆ. ಪಾಕ್ ತಂಡಕ್ಕೆ ಆಲ್‌ರೌಂಡ್ ಆಗಿ ಕಾಣಿಕೆ ನೀಡುವ ಬಯಕೆ ನನಗಿದೆ’’ ಎಂದು ಹಫೀಝ್ ಹೇಳಿದ್ದಾರೆ.







