ಅಪಾಯಕಾರಿ ಸ್ಥಳದಲ್ಲಿ ಮೋಜು: ಆತ್ಮಹತ್ಯೆ ಯತ್ನ; ಪ್ರಕರಣ ದಾಖಲು
ಫೋನ್ ಇನ್ ಕಾರ್ಯಕ್ರಮದಲ್ಲಿ ಎಸ್ಪಿ ಡಾ.ಪಾಟೀಲ್ ಎಚ್ಚರಿಕೆ

ಉಡುಪಿ, ನ.3: ಅಪಾಯಕಾರಿ ಸ್ಥಳಗಳಾದ ಸೇತುವೆಗಳ ಅಡಿಯಲ್ಲಿ ಮದ್ಯ ಸೇವಿಸಿಕೊಂಡು ಮೋಜು ಮಸ್ತಿ ಮಾಡುವವರ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಡಾ. ಸಂಜೀವ ಎಂ.ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಉಡುಪಿ ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಶುಕ್ರವಾರ ನಡೆದ ಎಸ್ಪಿ ಫೋನ್ ಇನ್ ಕಾರ್ಯಕ್ರಮದಲ್ಲಿ ಇತ್ತೀಚೆಗೆ ಪೆರಂಪಳ್ಳಿ ರೈಲ್ವೆ ಸೇತುವೆಯ ಅಡಿಯಿಂದ ಯುವಕ ನದಿಗೆ ಹಾರಿ ಮೃತಪಟ್ಟ ಪ್ರಕರಣವನ್ನು ಉಲ್ಲೇಖಿಸಿ ಅವರು ಮಾತನಾಡುತ್ತಿದ್ದರು.
ಅಪಾಯಕಾರಿಯಾಗಿರುವ ಪೆರಂಪಳ್ಳಿ ರೈಲ್ವೆ ಸೇತುವೆ ಕೆಳ ಭಾಗವು ಜನ ಹೋಗಿ ಕುಳಿತುಕೊಳ್ಳುವ ಸ್ಥಳ ಅಲ್ಲ. ಯುವಕರು ಇಲ್ಲಿ ಹೋಗಿ ಮೋಜು ಮಸ್ತಿ ಮಾಡುವುದರಿಂದ ಇಲ್ಲಿನ ನೆರೆಹೊರೆ ಮನೆಯವರಿಗೂ ತೀರಾ ತೊಂದರೆ ಯಾಗುತ್ತಿದೆ. ಈ ನಿಟ್ಟಿನಲ್ಲಿ ಈ ಪ್ರದೇಶದಲ್ಲಿ ಸದ್ಯಕ್ಕೆ ತಾತ್ಕಾಲಿಕ, ನಂತರ ಶಾಶ್ವತ ಎಚ್ಚರಿಕೆ ಬೋರ್ಡ್ ಹಾಕಲಾಗುವುದು. ಅದನ್ನು ಉಲ್ಲಂಘಿಸಿ ಹೋದವರ ವಿರುದ್ಧ ಆತ್ಮಹತ್ಯೆ ಯತ್ನ ಪ್ರಕರಣ ದಾಖಲಿಸಲಾಗುವುದು ಎಂದರು.
ಉಡುಪಿ ಜಿಲ್ಲೆಯಲ್ಲಿ 2015ರಲ್ಲಿ 708 (ಪುರುಷರು-568, ಮಹಿಳೆಯರು- 141), 2016ರಲ್ಲಿ 843(ಪುರುಷರು-660, ಮಹಿಳೆಯರು-186), 2017ರ ಅ.31ರವರೆಗೆ 619(ಪುರುಷರು-493, ಮಹಿಳೆಯರು-128) ಮಂದಿ ಆತ್ಮಹತ್ಯೆ, ಬೆಂಕಿ ಅಕಸ್ಮಿಕ, ಹಾವು ಕಡಿತ ಸೇರಿದಂತೆ ಅಸ್ವಾಭಾವಿಕವಾಗಿ ಮೃತಪಟ್ಟಿ ದ್ದಾರೆ. 2017ರಲ್ಲಿ ಒಟ್ಟು 105 ಮಂದಿ ಅಸ್ವಾಭಾವಿಕವಾಗಿ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದು, ಅದರಲ್ಲಿ 66 ಮಂದಿ ಆಕಸ್ಮಿಕ ಕಾಲು ಜಾರಿ ಬಿದ್ದು ಮತ್ತು 39 ಮಂದಿ ಮೀನುಗಾರಿಕೆ ವೇಳೆ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ಎಸ್ಪಿ ಮಾಹಿತಿ ನೀಡಿದರು.
ಈ ಕಾಲು ಜಾರಿ ಬಿದ್ದ 66 ಪ್ರಕರಣಗಳ ಕುರಿತು ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಲಿದ್ದು, ಆ ಸ್ಥಳ ಪ್ರವಾಸಿ ತಾಣವಾಗಿದ್ದೂ ಅಪಾಯಕಾರಿಯಾಗಿದ್ದಲ್ಲಿ ಮುಂದಿನ 10 ದಿನಗಳಲ್ಲಿ ಆ ಪ್ರದೇಶದಲ್ಲಿ ಎಚ್ಚರಿಕೆ ಬೋರ್ಡ್ ಹಾಕಲಾಗುವುದು ಎಂದು ಎಸ್ಪಿ ಡಾ.ಸಂಜೀವ ಪಾಟೀಲ್ ಹೇಳಿದರು.
10ಸಾವಿರ ನಗದು ಬಹುಮಾನ: ಮಟ್ಕಾ ವಿರುದ್ಧ ಕಾರ್ಯಾಚರಣೆ ಮುಂದುವರೆಸಲಾಗಿದ್ದು, ಪ್ರಮುಖ ಆರೋಪಿ ಲಿಯೋ ಕರ್ನೆಲಿಯೋ ಈವರೆಗೆ ಪತ್ತೆಯಾಗದೆ ತಲೆಮರೆಸಿಕೊಂಡಿದ್ದಾನೆ. ಆತನ ಬಗ್ಗೆ ಮಾಹಿತಿ ನೀಡಿದ ಸಾರ್ವಜನಿಕರಿಗೆ 10ಸಾವಿರ ರೂ. ನಗದು ಬಹುಮಾನ ನೀಡಲಾಗುವುದು ಎಂದು ಎಸ್ಪಿ ಈ ಸಂದರ್ಭದಲ್ಲಿ ಘೋಷಿಸಿದರು.
ಇತ್ತೀಚೆಗೆ ಅಲೆವೂರು ಅಪಹರಣ ಪ್ರಕರಣದ ಬಗ್ಗೆ ಸುಳಿವು ನೀಡಿದ ಸಾರ್ವಜನಿಕರಿಗೆ ಮರುದಿನವೇ ನಗದು ಬಹುಮಾನ ಮತ್ತು ಪ್ರಶಂಸನಾ ಪತ್ರವನ್ನು ಹಸ್ತಾಂತರಿಸಲಾ ಗಿದೆ ಎಂದರು. ಮಣಿಪಾಲ ಮರ್ಣೆ ಪರಿಸರದಲ್ಲಿ ಸಂಜೆ ವೇಳೆ ಯುವಕರ ತಂಡ ಗುಂಪುಗಾರಿಕೆ ಮಾಡುತ್ತಿರುವ ದೂರಿಗೆ ಸ್ಪಂದಿಸಿದ ಎಸ್ಪಿ, ಈ ರೀತಿ ರಾತ್ರಿ ವೇಳೆ ಗುಂಪು ಸೇರುವ ಯುವಕರ ವಿರುದ್ಧ ಕ್ರಮ ಜರಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಬಸ್‌ಗಳು ಉಡುಪಿ ಅಂಬಲಪಾಡಿ ಜಂಕ್ಷನ್‌ನಿಂದ ರಾ.ಹೆ.ಗೆ ಪ್ರವೇಶಿಸುವಾಗ ಕರ್ಕಶ ಹಾರ್ನ್ ಹಾಕುವ ಕುರಿತ ದೂರಿಗೆ ಪ್ರತಿಕ್ರಿಯಿಸಿದ ಎಸ್ಪಿ, ಅಂತಹ ವಾಹನಗಳನ್ನು ವಶಕ್ಕೆ ತೆಗೆದುಕೊಂಡು ಕೇಸು ಹಾಕಲಾಗುವುದು ಎಂದರು.
ಕುಂದಾಪುರ ಪೇಟೆಯಲ್ಲಿ ಮಂಗಳಮುಖಿಯರ ಹಾವಳಿ ಹೆಚ್ಚಾಗುತ್ತಿದ್ದು, ಹಣ ನೀಡದಿದ್ದರೆ ಅಸಭ್ಯವಾಗಿ ವರ್ತಿಸುತ್ತಿದ್ದಾರೆ. ವಾರದಲ್ಲಿ ಎರಡು ಬಾರಿ ಅಂಗಡಿ ಗಳಿಗೆ ಬಂದು ಬಲತ್ಕಾರವಾಗಿ ಹಣ ತೆಗೆದುಕೊಂಡು ಹೋಗುತ್ತಿದ್ದಾರೆ ಎಂದು ವ್ಯಾಪರಸ್ಥರೊಬ್ಬರು ದೂರಿದರು.
26 ದೂರವಾಣಿ ಕರೆಗಳು: ಶಂಕರನಾರಾಯಣ ಆವರ್ಸೆ ಅಂಚೆ ಕಚೇರಿಯಲ್ಲಿ ಅಧಿಕಾರಿ ಹಾಗೂ ಸಿಬ್ಬಂದಿಗಳು ಕೆಲಸ ಬಿಟ್ಟು ರಾಜಕೀಯ ಮಾತನಾಡುವುದು. ಮಣಿಪಾಲ ಎಂಐಟಿ ಬಳಿ ಬಸ್ ತಿರುಗಿಸುವುದು, ಮಲ್ಪೆಪಡುಕರೆ ಸೇತುವೆ ಬಳಿ ವಾಹನ ಪಾರ್ಕ್ ಮಾಡಿ ಮದ್ಯ ಸೇವಿಸುತ್ತ ಕೀಟಲೆ ಮಾಡು ತ್ತಿರುವ ಕುರಿತು ದೂರುಗಳು ಬಂದವು.
ಪಡುಬಿದ್ರೆ ಪೊಲೀಸ್ ಠಾಣಾ ವ್ಯಾಪ್ತಿಯ ಹೆಜಮಾಡಿ ಪರಿಸರದಲ್ಲಿ ಗಾಂಜಾ ಹಾವಳಿ ಹೆಚ್ಚಾಗಿದ್ದು, ಅದರ ವಿರುದ್ಧ ಕ್ರಮ ಜರಗಿಸುವಂತೆ ಸಾರ್ವ ಜನಿಕರು ದೂರಿದರು. ಬ್ರಹ್ಮಾವರ ಜನ್ನಾಡಿ ಸೇತುವೆಯು ಶಿಥಿಲಾವಸ್ಥೆಯಲ್ಲಿದ್ದು, ಅಧಿಕ ಭಾರದ ವಾಹನ ಸಂಚಾರ ನಿಷೇಧವಿದ್ದರೂ ಸಹ ನಿಯಮ ಉಲ್ಲಂಘನೆ ಮಾಡಿ ವಾಹನ ಗಳು ಸಂಚರಿಸುತ್ತಿದೆ ಎಂದು ಸ್ಥಳೀಯರೊಬ್ಬರು ಕರೆ ಮಾಡಿ ದೂರಿದರು. ಅಧಿಕ ಭಾರದ ವಾಹನಗಳನ್ನು ತಡೆದು ಆರ್‌ಟಿಒ ಮೂಲಕ ಕೇಸು ದಾಖಲಿಸುವ ಕೆಲಸ ಮಾಡಲಾಗುವುದು ಎಂದು ಎಸ್ಪಿ ಹೇಳಿದರು.
ಉಡುಪಿ-ಹೆಂಗವಳ್ಳಿ ಮಾರ್ಗವಾಗಿ ಸಂಚರಿಸುತ್ತಿದ್ದ ಕೆಎಸ್‌ಆರ್‌ಟಿಸಿ ಬಸ್ ಕಳೆದ 20 ದಿನಗಳಿಂದ ಸಂಚರಿಸುತ್ತಿಲ್ಲ ಮತ್ತು ಗಂಗೊಳ್ಳಿಯಿಂದ ಕುಂದಾಪುರಕ್ಕೆ ಮಧ್ಯಾಹ್ನ ಮತ್ತು ಸಂಜೆಯ ಅವಧಿಯಲ್ಲಿ ಯಾವುದೇ ಬಸ್‌ಗಳು ಸಂಚರಿ ಸುತ್ತಿಲ್ಲ ಹಾಗೂ ಬಸ್‌ಗಳಿಗೆ ಶಾಲಾ ಮಕ್ಕಳು ಬಸ್ ಹತ್ತದಂತೆ ನಿರ್ಬಂಧಿಸು ತ್ತಿದ್ದಾರೆ ಎಂಬ ದೂರುಗಳು ಬಂದವು. ಅದೇ ರೀತಿ ಸಂಚಾರ ಸಮಸ್ಯೆ, ಕರ್ಕಶ ಹಾರ್ನ್, ಮೀಟರ್ ಬಡ್ಡಿ, ಮಟ್ಟಾ ದಂಧೆ, ಅಕ್ರಮ ಸಾರಾಯಿ ಮಾರಾಟ ಹಾಗೂ ಅಕ್ರಮ ಗಣಿಗಾರಿಕೆ ವಿರುದ್ಧವೂ ದೂರುಗಳಿದ್ದವು.
ಈ ಸಂದರ್ಭದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಿವೈ ಎಸ್ಪಿ ಕುಮಾರಸ್ವಾಮಿ, ಪೊಲೀಸ್ ನಿರೀಕ್ಷಕರಾದ ಸಂಪತ್ ಕುಮಾರ್, ರತ್ನ ಕುಮಾರ್, ನವೀನ್‌ಚಂದ್ರ ಜೋಗಿ, ಸುದರ್ಶನ್ ಉಪಸ್ಥಿತರಿದ್ದರು.
ಮಹಿಳೆಯರ ಒಳ ಉಡುಪು ನಾಪತ್ತೆ!
ಉಡುಪಿಯ ಇಂದಿರಾ ನಗರ ಪ್ರದೇಶದಲ್ಲಿ ರಾತ್ರಿ ವೇಳೆ ಹೆಂಗಸರ ಒಳ ಉಡುಪುಗಳು ಕಾಣೆಯಾಗುತ್ತಿರುವ ಬಗ್ಗೆ ಮಹಿಳೆಯೊಬ್ಬರು ಎಸ್ಪಿಗೆ ಕರೆ ಮಾಡಿ ದೂರಿದರು. ಈ ಉಡುಪುಗಳು ಸಮೀಪದ ಹಳೆಯ ಮನೆಯೊಂದರಲ್ಲಿ ಪತ್ತೆ ಯಾಗುತ್ತಿದೆ. ಈ ಕೃತ್ಯ ಎಸಗುವ ವ್ಯಕ್ತಿಗಳ ವಿರುದ್ಧ ಕ್ರಮ ಜರಗಿಸುವಂತೆ ಅವರು ಮನವಿ ಮಾಡಿದರು.
ನೀರಿನಲ್ಲಿ ಬಿದ್ದ ಶವಗಳನ್ನು ಮೇಲಕ್ಕೆತ್ತುವಲ್ಲಿ ಪೊಲೀಸರಿಗೆ ಸಹಕರಿಸುವ ಸಾರ್ವಜನಿಕರಿಗೆ ಸೂಕ್ತ ಮನ್ನಣೆ ನೀಡಬೇಕು ಹಾಗೂ ಗೃಹರಕ್ಷಕ ದಳದ ನೇಮಕಕ್ಕೆ ಶಿಫಾರಸ್ಸು ಮಾಡಬೇಕು ಎಂದು ಸಾರ್ವಜನಿಕರೊಬ್ಬರು ತಿಳಿಸಿದರು.
ಎ.2 ರಂದು ನಡೆಯುವ ಪೊಲೀಸ್ ಧ್ವಜ ದಿನಾಚರಣೆಯಲ್ಲಿ ನಿವೃತ್ತ ಪೊಲೀಸರ ಜೊತೆ ಸಾರ್ವಜನಿಕರನ್ನು ಕೂಡ ಸನ್ಮಾನಿಸಲಾಗುವುದು. ಆಸಕ್ತರು ಅರ್ಜಿ ನೀಡಿ ದರೆ ಗೃಹರಕ್ಷಕ ದಳಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದು ಎಸ್ಪಿ ತಿಳಿಸಿದರು.







