'ಟಿಪ್ಪು ಜಯಂತಿ ಆಚರಣೆ ತಡೆಹಿಡಿಯಲು ಯಾವ ಕಾನೂನಿನಲ್ಲಿ ಅವಕಾಶವಿದೆ'
ಅರ್ಜಿದಾರರ ಪರ ವಕೀಲರನ್ನು ಪ್ರಶ್ನಿಸಿದ ಹೈಕೋರ್ಟ್

ಬೆಂಗಳೂರು, ನ.3: ರಾಜ್ಯ ಸರಕಾರದ ಉದ್ದೇಶಿತ ಟಿಪ್ಪು ಜಯಂತಿ ಆಚರಣೆ ತಡೆಹಿಡಿಯಲು ಯಾವ ಕಾನೂನಿನಲ್ಲಿ ಅವಕಾಶವಿದೆ. ಸುಪ್ರೀಂ ಕೋರ್ಟ್ ಅಥವಾ ಯಾವುದಾದರೂ ಹೈಕೋರ್ಟ್ ಆದೇಶವಿದೆಯೇ. ಪೂರ್ವ ನಿದರ್ಶನಗಳಿಲ್ಲದಿದ್ದರೆ ಜಯಂತಿಗಳ ಆಚರಣೆಯನ್ನು ನ್ಯಾಯಾಂಗ ವಿಮರ್ಶೆಗೆ ಒಳಪಡಿಸಲಾಗದು. ಸಂವಿಧಾನ ಇಡೀ ದೇಶದ ಜನತೆಯ ಇಚ್ಛೆ ಪ್ರತಿಬಿಂಬಿಸಿದರೆ, ಇಂದಿನ ಸರಕಾರವು ಜನರ ಜನಾದೇಶವನ್ನು ಪ್ರತಿನಿಧಿಸುತ್ತದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಟಿಪ್ಪು ಜಯಂತಿ ಆಚರಣೆಗೆ ಬಜೆಟ್‌ನಲ್ಲಿ ಹಣ ಮೀಸಲಿಡಲಾಗಿದೆ, ಸಾರ್ವಜನಿಕರ ಹಣ ಜಯಂತಿ ಕಾರ್ಯಗಳಿಗೆ ವ್ಯಯಿಸಲು ಕಾನೂನಿನಲ್ಲಿರುವ ಅವಕಾಶಗಳೇನು ಎಂಬುದನ್ನು ವಿವರಿಸುವಂತೆ ರಾಜ್ಯ ಅಡ್ವೋಕೇಟ್ ಜನರಲ್‌ಗೆ ನಿರ್ದೇಶಿಸಿದೆ.
ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮಾಡಲು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ನಿರ್ದೇಶಕರು 2017ರ ಅ.24ರಂದು ಹೊರಡಿಸಿರುವ ಸುತ್ತೋಲೆ ರದ್ದುಪಡಿಸಬೇಕು. ಅಲ್ಲದೆ, ಕೊಡಗಿನಲ್ಲಿ ಟಿಪ್ಪು ಜಯಂತಿ ಆಚರಣೆ ಮಾಡದಂತೆ ಸರಕಾರಕ್ಕೆ ನಿರ್ದೇಶಿಸುವಂತೆ ಕೋರಿ ಕೆ.ಪಿ. ಮಂಜುನಾಥ್ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್.ಜಿ. ರಮೇಶ್ ಮತ್ತು ನ್ಯಾಯಮೂರ್ತಿ ಪಿ.ಎಸ್. ದಿನೇಶ್ ಕುಮಾರ್ ಅವರಿರುವ ವಿಭಾಗೀಯ ಪೀಠ ಈ ಸೂಚನೆ ನೀಡಿ ವಿಚಾರಣೆಯನ್ನು ನ.7ಕ್ಕೆ ಮುಂದೂಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಟಿಪ್ಪು ಸುಲ್ತಾನ್ ಕೊಡಗಿನಲ್ಲಿ ಕೊಡವರನ್ನು ಮತ್ತು ದಕ್ಷಿಣ ಕನ್ನಡದಲ್ಲಿ ಕ್ರಿಶ್ಚಿಯರನ್ನು ಬಲವಂತವಾಗಿ ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡಿದ್ದಾರೆ. ಕೊಡವರ ಮೇಲೆ ದೌರ್ಜನ್ಯ ಎಸಗಿದ್ದಾರೆ. ಕನಕ ಜಯಂತಿ ಆಚರಣೆಗೆ ನಮ್ಮ ವಿರೋಧವಿಲ್ಲ. ಆದರೆ, ಕೊಡಗು ಹಾಗೂ ಮಡಿಕೇರಿಯಲ್ಲಿ ಟಿಪ್ಪು ಜಯಂತಿ ಆಚರಣೆಗೆ ನಮ್ಮ ವಿರೋಧವಿದೆ. 2015ರಲ್ಲಿ ಟಿಪ್ಪು ಜಯಂತಿ ನಡೆಸಿದಾಗ ಕೊಡಗಿನಲ್ಲಿ ಕೋಮು ಗಲಭೆಯಾಗಿ ಹಿಂಸಾಚಾರ ನಡೆದಿತ್ತು. 2016ರಲ್ಲಿ ಸರಕಾರ ನಿಷೇಧಾಜ್ಞೆ ವಿಧಿಸಿ ಆಚರಿಸಿತ್ತು. ಇದೀಗ ಮತ್ತೆ ಜನರ ಭಾವನೆ ನಿರ್ಲಕ್ಷಿಸಿ ಟಿಪ್ಪು ಜಯಂತಿ ಆಚರಣೆಗೆ ಹೊರಟಿದೆ ಎಂದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕನಕ ಜಯಂತಿ(ನ.6) ಆಚರಣೆ ಮಾಡುವುದಕ್ಕೆ ನಿಮ್ಮ ವಿರೋಧವಿಲ್ಲ. ಕೇವಲ ಟಿಪ್ಪು ಸುಲ್ತಾನ್ ಜಯಂತಿ ಆಚರಣೆಗಷ್ಟೇ ನಿಮ್ಮ ವಿರೋಧವಿದೆಯೇ, ಹಾಗಾದರೆ ಜಯಂತಿ ಆಚರಣೆ ಮಾಡದಂತೆ ಸರಕಾರಕ್ಕೆ ನ್ಯಾಯಾಲಯ ನಿರ್ದೇಶಿಸಲು ಯಾವುದಾದರೂ ಕಾನೂನು, ಸುಪ್ರೀಂ ಕೋರ್ಟ್ ಅಥವಾ ಹೈಕೋರ್ಟ್ ತೀರ್ಪು ಇದೆಯೇ, ಯಾವ ಮಾನದಂಡ ಆಧರಿಸಿ ಜಯಂತಿ ವಿಚಾರದ ಮೇಲೆ ನ್ಯಾಯಾಂಗ ವಿಮರ್ಶೆಗೊಳಪಡಿಸಬಹುದು ಮತ್ತು ದೃಷ್ಟಿಕೋನ ವ್ಯಕ್ತಪಡಿಸಬಹುದು. ಜಯಂತಿ ಆಚರಣೆ ಮಾಡಲು ಯಾರು ನಿರ್ಧಾರ ಮಾಡುತ್ತಾರೆ ಎಂದು ಪ್ರಶ್ನೆ ಮಾಡಿದರು.
ಅರ್ಜಿದಾರರ ಪರ ವಕೀಲರು ಉತ್ತರಿಸಿ, ನಿರ್ದಿಷ್ಟ ವ್ಯಕ್ತಿಯ ಜಯಂತಿ ಆಚರಣೆ ಮಾಡಲು ಸರಕಾರ ನಿರ್ಧರಿಸುತ್ತದೆ. ಕೊಡಗಿನವರ ಭಾವನೆಗಳಿಗೆ ಧಕ್ಕೆಯಾಗುವುದರಿಂದ ಟಿಪ್ಪು ಸುಲ್ತಾನ್ ಜಯಂತಿ ಆಚರಿಸದಂತೆ ಕೋರುತ್ತವೆ. ಅದರಲ್ಲೂ ಮಡಿಕೇರಿ ಹಾಗೂ ದಕ್ಷಿಣ ಕನ್ನಡದ ಜಿಲ್ಲೆಯಲ್ಲಿ. ಇನ್ನು ಸಾರ್ವಜನಿಕರ ಹಣವನ್ನು ಅಭಿವೃದ್ಧಿಗೆ ಬಳಸಬೇಕು ಹೊರತು ಈ ರೀತಿ ಜಯಂತಿ ಆಚರಣೆಗೆ ಪೋಲು ಮಾಡಬಾರದು. ಒಂದೊಮ್ಮೆ ಆಚರಿಸಿದರೆ ಮತ್ತೆ ಕೋಮು ಸೌಹಾರ್ದತೆಗೆ ಧಕ್ಕೆಯಾಗಲಿದೆ ಎಂದು ತಿಳಿಸಿದರು.
ನ್ಯಾಯಪೀಠ ಪ್ರತಿಕ್ರಿಯಿಸಿ, ಕಾನೂನಿನ ಅನುಪಸ್ಥಿತಿಯಲ್ಲಿ ಜಯಂತಿ ಆಚರಣೆಯನ್ನು ತಡೆಹಿಡಿಯಲಾಗದು. ವಿವಾದಿತ ಜಯಂತಿಯನ್ನು ನಡೆಸಲು ಸರಕಾರ ತೀರ್ಮಾನಿಸಿದಾಗ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಅಗತ್ಯ ಕ್ರಮ ಜರಗಿಸಲು ಸರಕಾರದ ಕೆಲಸ ಮತ್ತು ಆ ಬಗ್ಗೆ ಕಾಳಜಿ ವಹಿಸುತ್ತದೆ. ಆದರೆ, ಜಯಂತಿ ಆಚರಣೆಯು ಕಾನೂನಿಗೆ ವಿರುದ್ಧವಾಗಿದ್ದು, ಸಾರ್ವಜನಿಕತ ಹಿತಕ್ಕೆ ದುಷ್ಪರಿಣಾಮ ಬೀರಲಿದೆ ಎಂದು ಸಾಬೀತುಪಡಿಸಿ, ಈ ಕ್ಷಣವೇ ಜಯಂತಿ ಆಚರಣೆಗೆ ಹೊರಡಿಸಿರುವ ಆದೇಶ ರದ್ದುಪಡಿಸಲಾಗುವುದು ಎಂದು ತೀಕ್ಷ್ಣವಾಗಿ ನುಡಿಯಿತು.
ಟಿಪ್ಪು ಜಯಂತಿ ಆಚರಣೆಗೆ ಸಾರ್ವಜನಿಕರ ಖರ್ಚು ಮಾಡುತ್ತಿರುವ ಹಣವನ್ನು ಬಜೆಟ್‌ನಲ್ಲಿ ಮೀಸಲಿಡಲಾಗಿತ್ತೇ, ಯಾವ ಕಾನೂನಿನಲ್ಲಿ ಹಣ ಖರ್ಚು ಮಾಡಲು ಅವಕಾಶವಿದೆ ಎಂದು ರಾಜ್ಯ ಅಡ್ವೋಕೇಟ್ ಜನರಲ್ ಅವರನ್ನು ನ್ಯಾಯಪೀಠ ಪ್ರಶ್ನಿಸಿತು.
ಅಡ್ವೋಕೇಟ್ ಜನರಲ್ ಮಧು ಸೂದನ್ ನಾಯಕ್ ಉತ್ತರಿಸಿ, ಅರ್ಜಿದಾರರು ಕೇವಲ ಪ್ರಚಾರ ಪಡೆದುಕೊಳ್ಳಲು ಅರ್ಜಿ ಹಾಕಿದ್ದಾರೆ. ಒಂದು ವರ್ಷದಿಂದ ಸುಮ್ಮನಿದ್ದು, ಜಯಂತಿ ಆಚರಣೆಗೆ ಕೆಲ ದಿನಗಳ ಮುನ್ನ ಹೈಕೋರ್ಟ್‌ಗೆ ಅರ್ಜಿ ದಾಖಲಿಸಲಿದ್ದಾರೆ. ಅವರ ಆರ್ಜಿ ದುರುದ್ದೇಶಪೂರ್ವಕವಾಗಿದ್ದು, ಜಯಂತಿ ಆಚರಣೆ ತಡೆ ನೀಡಬಾರದು ಎಂದು ಕೋರಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಟಿಪ್ಪು ಜಯಂತಿ ಆಚರಣೆಗೆ ಯಾವ ಕಾನೂನಿನಡಿಯಲ್ಲಿ ಹಣ ಖರ್ಚು ಮಾಡಲಾಗುತ್ತಿದೆ, ಹಣ ಬಿಡುಗಡೆಗೆ ಅನುಮೋದನೆ ಸಿಕ್ಕಿದೆಯೇ ಎಂಬುದರ ಕುರಿತು ವಿವರಿಸುವಂತೆ ಅಡ್ವೋಕೇಟ್ ಜನರಲ್‌ಗೆ ಸೂಚಿಸಿ ವಿಚಾರಣೆ ಮುಂದೂಡಿತು.







