ಪೊಲೀಸ್ ಲೇನ್‌ನ ಎರಡು ದ್ವಾರಗಳ ಬಂದ್ : ನಿವಾಸಿಗಳ ಆಕ್ಷೇಪ
ಕಳ್ಳರಿಗೆ ಹೆದರಿ ದಾರಿಯನ್ನೇ ಬಂದ್ ಮಾಡಿದ ಪೊಲೀಸರು !

ಮಂಗಳೂರು, ನ. 3: ನಗರದ ಪೊಲೀಸ್ ಲೇನ್‌ಗೆ ಪ್ರವೇಶಿಸುವ ಮೂರು ದ್ವಾರಗಳಲ್ಲಿ ಎರಡು ದ್ವಾರಗಳನ್ನು ಮುಚ್ಚಿರುವ ಪೊಲೀಸ್ ಇಲಾಖೆಯ ಕ್ರಮಕ್ಕೆ ಪೊಲೀಸ್ ವಸತಿಗೃಹದ ನಿವಾಸಿಗಳಿಂದಲೇ ಅಸಮಾಧಾನ ವ್ಯಕ್ತವಾಗಿದೆ. ಪೊಲೀಸ್ ವಸತಿಗೃಹದ ಮನೆಯೊಂದರಲ್ಲಿ ಕಳೆದ ತಿಂಗಳು ನಡೆದ ಕಳ್ಳತನವೇ ಈ ದ್ವಾರಗಳನ್ನು ಮುಚ್ಚಲು ಕಾರಣ ಎಂದು ಹೇಳಲಾಗುತ್ತಿದೆ.
ಪೊಲೀಸ್ ಲೇನ್‌ಗೆ ಪ್ರವೇಶಿಸುವ ಮೂರು ದ್ವಾರಗಳ ಪೈಕಿ ಓಲ್ಡ್ ಕೆಂಟ್ ರಸ್ತೆಯ ಮೂಲಕ ಪೊಲೀಸ್ ಲೇನ್‌ಗೆ ಪ್ರವೇಶಿಸುವ ದ್ವಾರವನ್ನು ಹೊರತುಪಡಿಸಿ, ನೆಹರೂ ಮೈದಾನ ಮುಂದಿರುವ ದ್ವಾರ ಮತ್ತು ಪುರಭವನ ಎದುರಿನ ರೈಲು ನಿಲ್ದಾಣ ರಸ್ತೆಯಲ್ಲಿರುವ ದ್ವಾರಗಳನ್ನು ಮುಚ್ಚಲಾಗಿದೆ. ಈಗ ಪೊಲೀಸ್ ಲೇನ್‌ನಲ್ಲಿರುವ ಸುಮಾರು 400 ಮನೆಗಳ ನಿವಾಸಿಗಳು ಎಲ್ಲಿಗೆ ಹೋಗಬೇಕಾದರೂ ಓಲ್ಡ್ ಕೆಂಟ್ ರಸ್ತೆಯ ಮೂಲಕವೇ ಹಾದು ಹೋಗಬೇಕು. ಪೊಲೀಸ್ ಲೇನ್‌ನ ವಸತಿಗೃಹದಲ್ಲಿರುವ ಕುಟುಂಬಗಳ ಸುರಕ್ಷತೆಗಾಗಿ ಈ ಎರಡು ರಸ್ತೆಗಳನ್ನು ಮುಚ್ಚಲಾಗಿದೆ ಎಂದು ಪೊಲೀಸ್ ಇಲಾಖೆ ಹೇಳುತ್ತಿದೆಯಾದರೂ ರಸ್ತೆಯನ್ನು ಮುಚ್ಚಿರುವ ಇಲಾಖೆಯ ಕ್ರಮಕ್ಕೆ ವಸತಿಗೃಹದ ನಿವಾಸಿಗಳಿಂದಲೇ ಅಸಮಾಧಾನ ವ್ಯಕ್ತವಾಗಿದೆ.
ತಮ್ಮ ದೈನಿಕ ಕಾರ್ಯಗಳಿಗಾಗಿ ಹತ್ತಿರದ ರಸ್ತೆಗಳನ್ನು ಬಿಟ್ಟು ಓಲ್ಡ್ ಕೆಂಟ್ ರಸ್ತೆಯ ಮೂಲಕ ಸುತ್ತು ಬಳಸಿ ಹೋಗಬೇಕು. ಎರಡು ರಸ್ತೆಗಳನ್ನು ಮುಚ್ಚಿರುವುದರಿಂದ ಮಹಿಳಾ ನಿವಾಸಿಗಳು ಹೆಚ್ಚಿನ ತೊಂದರೆ ಅನುಭವಿಸುವಂತಾಗಿದೆ ಎಂದು ನಿವಾಸಿಗಳು ಅಸಮಾಧಾನ ವ್ಯಕ್ತಪಡಿಸುತ್ತಾರೆ.
ನೆಹರೂ ಮೈದಾನ ರಸ್ತೆಯ ದ್ವಾರವನ್ನು ಮುಚ್ಚಿರುವುದರಿಂದ ಮಾರುಕಟ್ಟೆ, ಅಂಗಡಿಗಳು ಸಹಿತ ಇತರ ಅಗತ್ಯಗಳಿಗೆ ಹೋಗಲು ಸುತ್ತು ಬಳಸಿ ಹೋಗಬೇಕು. ರೈಲು ನಿಲ್ದಾಣ ರಸ್ತೆಯಿಂದ ಪೊಲೀಸ್ ಲೇನ್‌ಗೆ ಪ್ರವೇಶಿಸುವ ರಸ್ತೆಯನ್ನು ಮುಚ್ಚಿರುವುದರಿಂದ ರೈಲು ನಿಲ್ದಾಣಕ್ಕೆ ತೆರಳಲು ಓಲ್ಡ್ ಕೆಂಟ್ ರಸ್ತೆಯ ಮೂಲಕವೇ ಹೋಗಬೇಕು. ಇದರಿಂದಾಗಿ ಶಾಲೆಗೆ ಹೋಗುವ ವಿದ್ಯಾರ್ಥಿಗಳು, ಮಕ್ಕಳು ಮತ್ತು ಮಹಿಳೆಯರಿಗೆ ಹೆಚ್ಚು ತೊಂದರೆಯಾಗುತ್ತಿದೆ. ಆದ್ದರಿಂದ ಮುಚ್ಚಿರುವ ಎರಡು ರಸ್ತೆಗಳ ಪೈಕಿ ನೆಹರೂ ಮೈದಾನದ ಮುಂದಿನ ರಸ್ತೆಯಲ್ಲಿ ಸಂಚರಿಸಲು ಅನುವು ಮಾಡಿಕ್ಕೊಟ್ಟರೆ ವಸತಿಗೃಹದ ನಿವಾಸಿಗಳಿಗೆ ಹೆಚ್ಚಿನ ಅನುಕೂಲವಾದೀತು ಎಂಬುದು ನಿವಾಸಿಗಳ ಅಭಿಮತ.
ಕಳ್ಳತನ ಆಗಿದ್ದಕ್ಕೆ ಬಂದ್ ಮಾಡುವುದು ಸರಿಯೇ?
ಕಳೆದ ತಿಂಗಳಲ್ಲಿ ಇಲ್ಲಿನ ಸುಧೀರ್ ಕುಮಾರ್ ಎಂಬವರ ಮನೆಯಿಂದ ಕಳವು ನಡೆದಿದ್ದು, ಈ ಕಳವು ಪ್ರಕರಣದ ಬಳಿಕ ಏಕಾಏಕಿಯಾಗಿ ಪೊಲೀಸ್ ಲೇನ್‌ನ ದ್ವಾರಗಳನ್ನು ಮುಚ್ಚಲಾಗಿದೆ ಎಂದು ಅಲ್ಲಿನ ನಿವಾಸಿಗಳು ಹೇಳುತ್ತಾರೆ. ಆದರೆ ಕಳ್ಳರಿಗೆ ಹೆದರಿ ರಸ್ತೆಯನ್ನೇ ಬಂದ್ ಮಾಡುವುದು ಎಷ್ಟು ಸರಿ ಎಂಬುದು ಜನರ ಪ್ರಶ್ನೆ.
ಪೊಲೀಸ್ ಕ್ರಮಕ್ಕೆ ಸಮರ್ಥನೆ
ಎರಡೂ ರೆಸ್ತೆಗಳನ್ನು ಮುಚ್ಚಿರುವ ಪೊಲೀಸ್ ಇಲಾಖೆಯ ಕ್ರಮವನ್ನು ಪೊಲೀಸ್ ಲೇನ್‌ನ ಕೆಲವು ನಿವಾಸಿಗಳು ಸಮರ್ಥಿಸಿಕೊಂಡಿದ್ದಾರೆ. ಇಲ್ಲಿರುವ ಪೊಲೀಸ್ ವಸತಿ ಗೃಹಗಳಿಗೆ ಯಾವುದೇ ಭದ್ರತೆ ಇಲ್ಲ. ಪೊಲೀಸ್ ಲೇನ್‌ಗೆ ಮೂರು ದ್ವಾರಗಳು ಇರುವುದರಿಂದ ಹೆಚ್ಚಾಗಿ ಹೊರಗಿನವರೇ ಬರುತ್ತಾರೆ. ಯಾರು ಪೊಲೀಸರು, ಯಾರು ಹೊರಗಿನವರು ಎಂದು ಗೊತ್ತಾಗುವುದಿಲ್ಲ. ರೈಲ್ವೆ ನಿಲ್ದಾಣಕ್ಕೆ ಹೋಗುವ ರಸ್ತೆ ಬಂದ್ ಮಾಡಿರುವುದು ಭದ್ರತೆಯ ಹಿತದೃಷ್ಟಿಯಿಂದ ಸರಿಯಾಗಿದೆ. ರೈಲಿನಿಂದ ಇಳಿದು ಈ ಮಾರ್ಗದಲ್ಲಿ ಬರುವವರು ನೇರವಾಗಿ ಪೊಲೀಸ್ ಲೇನ್‌ಗೆ ನುಸುಳುತ್ತಾರೆ. ನೆಹರೂ ಮೈದಾನದಲ್ಲಿ ಮಲಗುವ ಕುಡುಕರು, ಕಳ್ಳರು, ಗಾಂಜಾ ವ್ಯಸನಿಗಳು ಮೈದಾನದ ಮುಂದಿನ ರಸ್ತೆಯ ಮೂಲಕ ಪೊಲೀಸ್ ಲೇನ್‌ಗೆ ಪ್ರವೇಶಿಸುತ್ತಾರೆ. ಈ ಎರಡೂ ಮಾರ್ಗಗಳನ್ನು ಬಂದ್ ಮಾಡಿರುವುದು ಸಮರ್ಥನೀಯ ಎನ್ನುತ್ತಾರೆ ಇಲ್ಲಿನ ಕೆಲವು ನಿವಾಸಿಗಳು.
ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿರುವುದು ಸರಿಯಲ್ಲ
ಪೊಲೀಸ್ ಲೇನ್‌ಗೆ ಪ್ರವೇಶಿಸುವ ಎರಡು ದ್ವಾರಗಳನ್ನು ಕಳೆದ ಎರಡು ವಾರಗಳಿಂದ ಬಂದ್ ಮಾಡಿದ್ದರೂ ಶುಕ್ರವಾರ ಏಕಾಏಕಿಯಾಗಿ ಓಲ್ಡ್ ಕೆಂಟ್ ರಸ್ತೆಯಿಂದ ಪೊಲೀಸ್ ಲೈನ್ ಗೆ ಹೋಗುವ ಪ್ರವೇಶ ದ್ವಾರವನ್ನು ಸುಮಾರು 2 ಗಂಟೆಗಳ ಕಾಲ ಬಂದ್ ಮಾಡಿ ಶುಕ್ರವಾರದ ಪ್ರಾರ್ಥನೆಗೆ ಅಡ್ಡಿಪಡಿಸಿದ್ದಾರೆ ಎಂದು ಪೊಲೀಸರ ಕ್ರಮಕ್ಕೆ ಫೌಜಿ ಜುಮಾ ಮಸೀದಿಯ (ಪೊಲೀಸ್ ಲೇನ್ ಮಸೀದಿ) ಅಧ್ಯಕ್ಷ ಮನ್ಸೂರ್ ಅಹ್ಮದ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಪೊಲೀಸ್ ಲೇನ್‌ನ ಮೂರು ದ್ವಾರಗಳ ಪೈಕಿ ಓಲ್ಡ್ ಕೆಂಟ್ ರಸ್ತೆಯನ್ನು ಪೊಲೀಸರು ಮುಚ್ಚಿರಲಿಲ್ಲ. ಆದರೆ, ಶುಕ್ರವಾರದ ಪ್ರಾರ್ಥನೆಗೆ ಬರುವವರಿಗೆ ರಸ್ತೆ ಬಂದ್ ಮಾಡುವ ಮೂಲಕ ಅಡ್ಡಿ ಪಡಿಸಿದ್ದಾರೆ. ಮಧ್ಯಾಹ 12:20ರಿಂದ 2ರವರೆಗೆ ಮಸೀದಿಗೆ ತೆರಳುವ ಯಾವುದೇ ವಾಹನವನ್ನು ಅವರು ಒಳಗೆ ಬಿಡಲಿಲ್ಲ. ಓಲ್ಡ್ ಕೆಂಟ್ ಮೂಲಕ ಮಸೀದಿಗೆ ಪ್ರವೇಶಿಸುವ ರಸ್ತೆಯು ಸಾರ್ವಜನಿಕ ರಸ್ತೆಯಾಗಿದ್ದು, ಇದನ್ನು ತಡೆಯುವಂತಿಲ್ಲ ಎಂದವರು ತಿಳಿಸಿದ್ದಾರೆ. ಈ ಬಗ್ಗೆ ನಾವು ನಗರ ಪೊಲೀಸ್ ಆಯುಕ್ತರನ್ನು ಭೇಟಿಯಾಗಿ ವಿವರಿಸಿರುವುದಾಗಿ ಅವರು ತಿಳಿಸಿದ್ದಾರೆ.
ಭದ್ರತೆಗಾಗಿ ಬಂದ್ ಮಾಡಿದ್ದೇವೆ: ಪೊಲೀಸ್ ಕಮಿಷನರ್
ಪೊಲೀಸ್ ಲೇನ್ ಕಾಲನಿಯ ಭದ್ರತೆಯ ಹಿತದೃಷ್ಟಿಯಿಂದ ಎರಡು ದ್ವಾರಗಳನ್ನು ಬಂದ್ ಮಾಡಿರುವುದಾಗಿ ನಗರ ಪೊಲೀಸ್ ಆಯುಕ್ತ ಟಿ.ಆರ್. ಸುರೇಶ್ ಹೇಳಿದ್ದಾರೆ.
ವಾರ್ತಾಭಾರತಿಗೆ ಪ್ರತಿಕ್ರಿಯಿಸಿದ ಅವರು, ಪೊಲೀಸ್ ಲೇನ್‌ನಲ್ಲಿ ಸಾರ್ವಜನಿಕರ ಪ್ರವೇಶವಾಗುತ್ತಿದ್ದುದರಿಂದ ಪೊಲೀಸ್ ವಸತಿಗೃಹಗಳ ಭದ್ರತೆಗಾಗಿ ಈ ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ. ಆದರೆ, ಓಲ್ಡ್ ಕೆಂಟ್ ರಸ್ತೆಯ ಮೂಲಕ ಮಸೀದಿಗೆ ಪ್ರವೇಶಿಸುವ ರಸ್ತೆಯನ್ನು ಬಂದ್ ಮಾಡಿಲ್ಲ. ಈ ಬಗ್ಗೆ ಮಸೀದಿಯವರು ತನ್ನ ಬಳಿಗೆ ಬಂದಿದ್ದರು. ಅವರೊಂದಿಗೆ ಮಾತುಕತೆ ನಡೆಸಿ ಕಳುಹಿಸಿದ್ದೇನೆ ಎಂದರು.







