ಟೀಮ್ ಇಂಡಿಯಾ ಕ್ರಿಕೆಟಿಗರ ಬಗ್ಗೆ ಹೊಸ “ಫಿಕ್ಸಿಂಗ್ ಬಾಂಬ್” ಸಿಡಿಸಿದ ಶ್ರೀಶಾಂತ್

ಹೊಸದಿಲ್ಲಿ, ನ.3: ಇಂಡಿಯನ್ ಪ್ರೀಮಿಯರ್ ಲೀಗ್(ಐಪಿಎಲ್)ನಲ್ಲಿ ಸ್ಪಾಟ್ ಫಿಕ್ಸಿಂಗ್ ನಡೆಸಿದ ಹಲವು ಮಂದಿ ಆಟಗಾರರು ಇನ್ನೂ ಐಪಿಎಲ್‌ನಲ್ಲಿ ಮತ್ತು ಟೀಮ್ ಇಂಡಿಯಾದ ಪರ ಆಡುತ್ತಿದ್ದಾರೆ ಎಂದು ಸ್ಪಾಟ್ ಫಿಕ್ಸಿಂಗ್ ಆರೋಪದಲ್ಲಿ ಕ್ರಿಕೆಟ್‌ನಿಂದ ಆಜೀವ ನಿಷೇಧಕ್ಕೊಳಗಾಗಿರುವ ಕೇರಳದ ವೇಗಿ ಎಸ್.ಶ್ರೀಶಾಂತ್ ಆರೋಪಿಸಿದ್ದಾರೆ.
ರಿಪಬ್ಲಿಕ್ ಚಾನಲ್‌ಗೆ ನೀಡಿದ ಸಂದರ್ಶನದಲ್ಲಿ ಶ್ರೀಶಾಂತ್ ಅವರು ‘‘ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಭಾಗಿಯಾದ ಕೆಲವು ಆಟಗಾರರ ವಿರುದ್ಧ ಬಿಸಿಸಿಐ ಯಾವುದೇ ಕ್ರಮ ಕೈಗೊಳ್ಳದೆ ಅವರಿಗೆ ರಕ್ಷಣೆ ನೀಡಿದೆ’’ ಎಂದು ಬಿಸಿಸಿಐ ವಿರುದ್ಧ ಶ್ರೀಶಾಂತ್ ಹರಿಹಾಯ್ದರು.
‘‘ ಬಿಸಿಸಿಐ ಸ್ಪಾಟ್ ಫಿಕ್ಸಿಂಗ್‌ನಲ್ಲಿ ಹಲವು ಮಂದಿ ಕ್ರಿಕೆಟಿಗರು ಶಾಮೀಲಾಗಿದ್ದರೂ, ಅವರ ಬಗ್ಗೆ ಬಿಸಿಸಿಐ ಯಾವುದೇ ಕ್ರಮ ಕೈಗೊಳ್ಳದೆ ನನ್ನ ಕ್ರಿಕೆಟ್ ಬದುಕನ್ನು ಮುಗಿಸು ಹಠಕ್ಕೆ ಬಿದ್ದಿದೆ ಮತ್ತು ನನ್ನ
ನ್ನು ಬಲಿಪಶು ಮಾಡಿದೆ’’ ಎಂದರು. ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ದಿಲ್ಲಿ ಪೊಲೀಸರ ತಯಾರಿಸಿದ ವರದಿಯಲ್ಲಿ ಆನೇಕ ಮಂದಿ ಕ್ರಿಕೆಟಿಗರ ಹೆಸರಿದೆ. ಆದರೆ ಅಂಥವರು ಇನ್ನೂ ಅಂತಾರಾಷ್ಟ್ರೀಯ ಕ್ರಿಕೆಟ್ ಆಡುತ್ತಿದ್ದಾರೆ.
ಸ್ಪಾಟ್ ಫಿಕ್ಸಿಂಗ್ ಹಗರಣದಲ್ಲಿ ಐಪಿಎಲ್‌ನಿಂದ ರಾಜಸ್ಥಾನ ರಾಯಲ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡವನ್ನು ಎರಡು ವರ್ಷಗಳಿಗೆ ಐಪಿಎಲ್ ನಿಷೇಧಿಸಿತ್ತು. ಈ ಸಂಬಂಧ ರಾಜಸ್ಥಾನ ರಾಯಲ್ಸ್ ತಂಡದ ಆಟಗಾರರನ್ನು ಮಾತ್ರ ಪೊಲೀಸರು ವಿಚಾರಣೆಗೊಳಪಡಿಸಿದ್ದರು.ಆದರೆ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಆಟಗಾರರನ್ನು ಯಾಕೆ ವಿಚಾರಣೆಗೊಳಪಡಿಸಿಲ್ಲ’’ ಎಂದು ಶ್ರೀಶಾಂತ್ ಪ್ರಶ್ನಿಸಿದ್ದಾರೆ.
ತನ್ನ ವಿರುದ್ಧ ಬಿಸಿಸಿಐ ವಿಧಿಸಿದ್ದ ಆಜೀವ ನಿಷೇಧ ಆದೇಶವನ್ನು ಶ್ರೀಶಾಂತ್ ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಆಗಸ್ಟ್ 7ರಂದು ಹೈಕೋರ್ಟ್‌ನ ಏಕಸದಸ್ಯ ಪೀಠ ಅವರ ವಿರುದ್ಧದ ನಿಷೇಧವನ್ನು ತೆರವುಗೊಳಿಸಿತ್ತು. ಮುಖ್ಯ ನ್ಯಾಯಮೂರ್ತಿ ನವನೀತಿ ಪ್ರಸಾದ್ ನೇತೃತ್ವದ ವಿಭಾಗೀಯ ಪೀಠವು ಬಿಸಿಸಿಐನ ಮೇಲ್ಮನವಿಯನ್ನು ಪುರಸ್ಕರಿಸಿತ್ತು. ಇದರಿಂದಾಗಿ ಶ್ರೀಶಾಂತ್ ಅವರಿಗೆ ಆಜೀವ ನಿಷೇಧದಿಂದ ಹೊರಬರಲು ಸಾಧ್ಯವಾಗಲಿಲ್ಲ.
‘‘ ನನಗೆ ಬಿಸಿಸಿಐ ಮಾತ್ರ ಆಜೀವ ನಿಷೇಧ ವಿಧಿಸಿದೆ. ಐಸಿಸಿ ನಿಷೇಧ ಹೇರಿಲ್ಲ. ಇದರಿಂದಾಗಿ ಇನ್ನೊಂದು ದೇಶದ ಪರ ಆಡಲು ಸಾಧ್ಯವಿದೆ ’’ ಎಂದು ಶ್ರೀಶಾಂತ್ ದುಬೈನಲ್ಲಿ ವಿವಾದಾತ್ಮಕ ಹೇಳಿಕೆ ನೀಡಿದ್ದರು.
ಶ್ರೀಶಾಂತ್ ಹೇಳಿಕೆಗೆ ಖನ್ನಾ ಪ್ರತಿಕ್ರಿಯೆ ನೀಡಿ ‘‘ಐಪಿಎಲ್ ಸ್ಪಾಟ್ ಫಿಕ್ಸಿಂಗ್ ಹಗರಣಕ್ಕೆ ಸಂಬಂಧಿಸಿ ಕ್ರಿಕೆಟ್‌ನಿಂದ ಆಜೀವ ನಿಷೇಧಕ್ಕೆ ಒಳಗಾಗಿರುವ ಮಾಜಿ ವೇಗಿ ಎಸ್.ಶ್ರೀಶಾಂತ್ ಐಸಿಸಿ ನಿಯಮ ಪ್ರಕಾರ ಇನ್ನೊಂದು ದೇಶದ ಪರ ಆಡುವಂತಿಲ್ಲ ’’ಎಂದು ಬಿಸಿಸಿಐ ಹಂಗಾಮಿ ಅಧ್ಯಕ್ಷ ಬಿ.ಸಿ.ಖನ್ನಾ ಸ್ಪಷ್ಟಪಡಿಸಿದ್ದರು.







