ಬೆಂಗಳೂರು: ಪೊಲೀಸ್ ಠಾಣೆಗಳಿಗೆ ಗೃಹ ಸಚಿವ ದಿಢೀರ್ ಭೇಟಿ, ಪರಿಶೀಲನೆ
ಬೆಂಗಳೂರು, ನ.3: ಕಾನೂನು ಸುವ್ಯವಸ್ಥೆ ಸಂಬಂಧ ನಿನ್ನೆಯಷ್ಟೇ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದಲ್ಲಿ ನಡೆದ ಹಿರಿಯ ಪೊಲೀಸ್ ಅಧಿಕಾರಿಗಳ ಸಭೆ ಬೆನ್ನಲ್ಲೇ, ಗೃಹ ಸಚಿವ ರಾಮಲಿಂಗಾರೆಡ್ಡಿ, ಶುಕ್ರವಾರ ಮಧ್ಯಾಹ್ನ ನಗರದ ವ್ಯಾಪ್ತಿಯ ಕೆಲ ಪೊಲೀಸ್ ಠಾಣೆಗಳಿಗೆ ದಿಢೀರ್ ಭೇಟಿ ನೀಡಿದರು.
ಈ ಭೇಟಿ ಕುರಿತು ಯಾರಿಗೂ ಮಾಹಿತಿ ನೀಡದ ಸಚಿವರು, ಮಧ್ಯಾಹ್ನ 4 ಗಂಟೆ ಸುಮಾರಿಗೆ ದಿಢೀರನೆ ನಗರದ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಗೆ ಬಂದಿದ್ದರಿಂದ ಅಲ್ಲಿದ್ದ ಸಿಬ್ಬಂದಿ ಸಚಿವರನ್ನು ಕಂಡು ದಂಗಾದರು.
ಈ ವೇಳೆ ಸೂಕ್ತ ರೀತಿಯಲ್ಲಿ ಪೊಲೀಸ್ ಠಾಣೆ ಆವರಣದಲ್ಲಿ ವಾಹನ ನಿಲ್ಲಿಸದ ಬಗ್ಗೆ ಅಶಿಸ್ತು ಸಹಿಸುವುದಿಲ್ಲ ಎಂದು ಬಿಸಿ ಮುಟ್ಟಿಸಿದರು. ಬಳಿಕ ಮುಖ್ಯರಸ್ತೆಗಳ ಬಗ್ಗೆ ಮಾಹಿತಿ ನೀಡುವ ಸಿಸಿಟಿವಿಗಳನ್ನು ಪರಿಶೀಲಿಸಿ, ಅವುಗಳ ಕಾರ್ಯವೈಖರಿ ಬಗ್ಗೆ ಸಿಬ್ಬಂದಿಗೆ ಪ್ರಶ್ನಿಸಿದರು.
ನೋಟಿಸ್ ನೀಡಿ: ಬಳಿಕ ಹಲಸೂರು ಪೊಲೀಸ್ ಠಾಣೆಗೆ ಭೇಟಿ ನೀಡಿದ ಗೃಹ ಸಚಿವರು, ಅಲ್ಲಿದ್ದ ಕಸ ಕಂಡು ಸಿಬ್ಬಂದಿ ಹಾಗೂ ಠಾಣಾ ಇನ್ ಸ್ಪೆಪೆಕ್ಟರ್ ಸುಬ್ರಹ್ಮಣ್ಯ ಅವರನ್ನು ತರಾಟೆಗೆ ತೆಗೆದುಕೊಂಡರು. ಸ್ವಚ್ಛತೆ ಕಾಪಾಡುವಲ್ಲಿ ವಿಫಲ ಎಂದು ಎಸಿಪಿ, ಎಸ್ಸೈಗೆ ನೋಟಿಸ್ ನೀಡಿ ಎಂದು ಪೂರ್ವ ವಿಭಾಗದ ಡಿಸಿಪಿ ಅಜಯ್ ಹಿಲೋರಿ ಅವರಿಗೆ ಸೂಚಿಸಿದರು.
ಅದೇ ರೀತಿ, ಅಶೋಕ ನಗರ ಪೊಲೀಸ್ ಠಾಣೆ ಸೇರಿದಂತೆ ಒಟ್ಟು 4 ಗಂಟೆಗೂ ಅಧಿಕ ತಾಸು ಠಾಣೆಯಲ್ಲಿದ್ದ ಸಚಿವರು, ಅಪರಾಧ ದಾಖಲೆ ಪುಸ್ತಕ, ವಾಕಿಟಾಕಿ ನಿರ್ವಹಣೆ, ಪಾಳಿ ಪುಸ್ತಕ, ರೌಡಿ ಪಟ್ಟಿ, ಅಪರಾಧ ಅಂಕಿ-ಅಂಶದ ಬೋರ್ಡ್, ಠಾಣೆಯಲ್ಲಿದ್ದ ಬಂದೂಕುಗಳು, ಲೈಫ್‌ಜಾಕೆಟ್, ಆವರಣದಲ್ಲಿ ವಾಹನಗಳು ಸೇರಿ ಇನ್ನಿತರೆ ವ್ಯವಸ್ಥೆಗಳ ಬಗ್ಗೆ ಪರಿಶೀಲನೆ ನಡೆಸಿದರು.
ದೂರು ಪೆಟ್ಟಿಗೆ: ಸಚಿವರು ಭೇಟಿ ನೀಡಿದ ಎರಡು ಪೊಲೀಸ್ ಠಾಣೆಗಳಲ್ಲಿ ಸಾರ್ವಜನಿಕರ ದೂರು ಪೆಟ್ಟಿಗೆಯನ್ನು ಠಾಣೆಯೊಳಗೆ ಇಡಲಾಗಿತ್ತು. ಇದನ್ನು ನೋಡಿ ಸಿಬ್ಬಂದಿಗೆ ಪ್ರಶ್ನಿಸಿದ ಅವರು, ದೂರು ಪೆಟ್ಟಿಗೆ ಹೊರಗಡೆ ಇಟ್ಟು ಜನಸ್ನೇಹಿಯಾಗಿ ಕಾರ್ಯನಿರ್ವಹಿಸಬೇಕೆಂದು ಕಿವಿಮಾತು ಹೇಳಿದರು.
ಕೆಳಹಂತದ ಸಿಬ್ಬಂದಿ ಜತೆ ಚರ್ಚಿಸಿ ಅವರ ಸಮಸ್ಯೆಗಳನ್ನು ಕೇಳಿದ ಸಚಿವರು, ಠಾಣೆಯ ಹಿರಿಯ ಅಧಿಕಾರಿಗಳ ಗೈರು ಹಾಜರಿ ಕುರಿತು ಮಾಹಿತಿ ಪಡೆದು, ಇಲಾಖೆಯ ಸಣ್ಣಪುಟ್ಟ ಸಮಸ್ಯೆಗಳಿಗೆ ಶೀಘ್ರದಲ್ಲಿಯೇ ಬಗೆಹರಿಸಲಾಗುವುದೆಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ವೇಳೆ ನಗರ ಪೊಲೀಸ್ ಆಯುಕ್ತ ಟಿ.ಸುನೀಲ್ ಕುಮಾರ್ ಸೇರಿ ಹಿರಿಯ ಪೊಲೀಸ್ ಅಧಿಕಾರಿಗಳು ಉಪಸ್ಥಿತರಿದ್ದರು.
‘ಸ್ವಚ್ಛತೆ ಕಾಪಾಡಲು ಸೂಚನೆ’
ಇಂದು ಭೇಟಿ ನೀಡಿದ ಸಮಯದಲ್ಲಿ ಎರಡು ಪೊಲೀಸ್ ಠಾಣೆಗಳಲ್ಲಿ ಸ್ವಚ್ಛತೆ ಕಾಪಾಡಿಲ್ಲ. ಅಂತಹ ಪೊಲೀಸ್ ಠಾಣಾಧಿಕಾರಿ ಮತ್ತು ಎಸಿಪಿಗೆ ನೋಟಿಸ್ ನೀಡುವಂತೆ ಸೂಚಿಸಲಾಗಿದೆ. ರಾಜ್ಯದ ಹಲವು ಪೊಲೀಸ್ ಠಾಣೆಗಳಿಗೆ ಈಗಾಗಲೇ ಭೇಟಿ ಮಾಡಿದ್ದೇನೆ. ಅದೇ ರೀತಿಯಲ್ಲಿ, ನಗರದ ಠಾಣೆಗಳಿಗೂ ಭೇಟಿ ನೀಡಿ ಪೊಲೀಸ್ ಅಧಿಕಾರಿಗಳು ಯಾವ ರೀತಿ ಕಾನೂನು ಸುವವ್ಯಸ್ಥೆ ಕಾಪಾಡಿದ್ದಾರೆ ಎಂದು ಪರಿಶೀಲನೆ ಮಾಡಿದ್ದೇನೆ. ಅಪರಾಧ ಕೃತ್ಯಗಳನ್ನು ತಡೆಯುವುದಕ್ಕೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದೇನೆ. ಆತ್ಮರಕ್ಷಣೆಗಾಗಿ ಪೊಲೀಸರು ಆರೋಪಿಗಳ ಮೇಲೆ ಇತ್ತೀಚೆಗೆ ಗುಂಡು ಹಾರಿಸುತ್ತಿದ್ದಾರೆ. ಅಲ್ಲದೆ, ರಕ್ಷಣೆಗಾಗಿ ಪೊಲೀಸರು ಹೀಗೇ ಮಾಡಬೇಕಾಗಿದೆ.- ರಾಮಲಿಂಗಾರೆಡ್ಡಿ, ಗೃಹ ಸಚಿವ







