4 ದಿನದೊಳಗೆ ಕ್ರಮ ಕೈಗೊಳ್ಳಲು ರಾಜ್ಯ ಸರಕಾರದ ಹೆಚ್ಚುವರಿ ಕಾರ್ಯದರ್ಶಿಗೆ ಹೈಕೋರ್ಟ್ ಆದೇಶ
ಸರಕಾರಿ ನೌಕರರ ಭಡ್ತಿ ಮೀಸಲಾತಿ ವಿಚಾರ
ಬೆಂಗಳೂರು, ನ.3: ಬೆಂಗಳೂರು ಅರಮನೆ ಮೈದಾನದಲ್ಲಿ ನ.10ರಂದು ಸಭೆ ನಡೆಸಲು ಅನುಮತಿ ಕೋರಿ ಅಹಿಂಸಾ ಒಕ್ಕೂಟ ಸಲ್ಲಿಸಿರುವ ಮನವಿಯನ್ನು 4 ದಿನಗಳೊಳಗೆ ಪರಿಗಣಿಸಿ ಸೂಕ್ತ ಕ್ರಮ ಕೈಗೊಳ್ಳುವಂತೆ ರಾಜ್ಯ ಸರಕಾರದ ಹೆಚ್ಚುವರಿ ಕಾರ್ಯದರ್ಶಿಗೆ ಹೈಕೋರ್ಟ್ ಶುಕ್ರವಾರ ನಿರ್ದೇಶಿಸಿದೆ.
ಅರಮನೆ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ನೀಡಲು ನಿರಾಕರಿಸಿದ್ದ ರಾಜ್ಯ ಸರಕಾರದ ಕ್ರಮ ಪ್ರಶ್ನಿಸಿ ಅಲ್ಪಸಂಖ್ಯಾತ, ಹಿಂದುಳಿದ ಹಾಗೂ ಸಾಮಾನ್ಯ ವರ್ಗದ ಕರ್ನಾಟಕ ಸರಕಾರದ ವಿವಿಧ ಇಲಾಖೆಗಳು, ನಿಗಮ ಮಂಡಳಿ ಕಾರ್ಪೊರೇಷನ್‌ಗಳಲ್ಲಿನ ನಿವೃತ್ತ, ಸೇವಾನಿರತ ನೌಕರರ ಹಿತರಕ್ಷಣಾ ಒಕ್ಕೂಟ (ಅಹಿಂಸಾ) ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎ.ಎಸ್.ಬೋಪಣ್ಣ ಅವರಿದ್ದ ಪೀಠ, ಈ ನಿರ್ದೇಶನ ನೀಡಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು ವಾದಿಸಿ, ಸರಕಾರಿ ನೌಕರರ ಭಡ್ತಿ ಮೀಸಲಾತಿಯ ಸಂಬಂಧ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪು ಶೀಘ್ರ ಅನುಷ್ಠಾನಗೊಳಿಸುವಂತೆ ರಾಜ್ಯ ಸರಕಾರಕ್ಕೆ ಆಗ್ರಹಿಸಿ ಕಳೆದ ಅ.31ರಂದು ಅರಮನೆ ಮೈದಾನದಲ್ಲಿ ಸಭೆ ನಡೆಸಲು ಅನುಮತಿ ಕೋರಲಾಗಿತ್ತು. ಆದರೆ ಈ ಮನವಿಯನ್ನು ಸರಕಾರ ವಜಾಗೊಳಿಸಿತ್ತು. ಇದೀಗ ನ.10ರಂದು ಸಭೆ ನಡೆಸಲು ನಿರ್ಧರಿಸಿದ್ದು, ಅದಕ್ಕಾಗಿ ಅನುಮತಿ ನೀಡುವಂತೆ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಮತ್ತೊಂದು ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಇದರಿಂದಾಗಿ ನ್ಯಾಯಪೀಠ, ಅರ್ಜಿದಾರರು ಮುಖ್ಯ ಕಾರ್ಯದರ್ಶಿಗೆ ಸಲ್ಲಿಸಿರುವ ಮನವಿಯನ್ನೇ ಮೇಲ್ಮನವಿ ಎಂದು ಪರಿಗಣಿಸಬೇಕು. ಈ ಮೇಲ್ಮನವಿಯನ್ನು ಸರಕಾರದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ನ.7ರ ಒಳಗೆ ಪರಿಶೀಲಿಸಿ ಸೂಕ್ತ ನಿರ್ಧಾರ ಕೈಗೊಳ್ಳಬೇಕು ಎಂದು ಸೂಚಿಸಿ ಅರ್ಜಿ ಇತ್ಯರ್ಥಪಡಿಸಿತು.







