ದಲಿತ ನಾಯಕ ಜಿಗ್ನೇಶ್ ಮೆವಾನಿಯನ್ನು ಭೇಟಿಯಾದ ರಾಹುಲ್ ಗಾಂಧಿ: ಶೇ.90ರಷ್ಟು ಬೇಡಿಕೆಗಳಿಗೆ ಒಪ್ಪಿಗೆ

ಹೊಸದಿಲ್ಲಿ,ನ.3: ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿಯವರು ತನ್ನ ಗುಜರಾತ್ ಪ್ರವಾಸದ ಅಂತಿಮ ದಿನವಾದ ಶುಕ್ರವಾರ ನವಸಾರಿಯಲ್ಲಿ ರಾಷ್ಟ್ರೀಯ ದಲಿತ ಅಧಿಕಾರ ಮಂಚ್‌ನ ಸಂಯೋಜಕ ಜಿಗ್ನೇಶ್ ಮೆವಾನಿಯವರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.
ಭೇಟಿಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಮೆವಾನಿ, ರಾಹುಲ್ ನಮ್ಮ ಶೇ.90ರಷ್ಟು ಬೇಡಿಕೆಗಳಿಗೆ ಸಹಮತವನ್ನು ವ್ಯಕ್ತಪಡಿಸಿದ್ದಾರೆ. ನಮ್ಮ ಬೇಡಿಕೆಗಳು ಕೇವಲ ಬೇಡಿಕೆಗಳಲ್ಲ, ಅವು ನಮ್ಮ ಸಾಂವಿಧಾನಿಕ ಅಧಿಕಾರಗಳಾಗಿವೆ ಎಂದಿರುವ ರಾಹುಲ್ ಚುನಾವಣಾ ಪ್ರಣಾಳಿಕೆಯಲ್ಲಿ ಈ ಬೇಡಿಕೆಗಳನ್ನು ಸೇರಿಸುವುದಾಗಿ ಭರವಸೆ ನೀಡಿದ್ದಾರೆ ಎಂದು ತಿಳಿಸಿದರು.
ಇತರ ಪಕ್ಷಗಳನ್ನು ಗುರಿಯಾಗಿಸಿಕೊಂಡು ದಾಳಿ ನಡೆಸಿದ ಅವರು, ರಾಹುಲ್ ಗಾಂಧಿ ಮತ್ತು ಇತರ ಪಕ್ಷಗಳ ಆಲೋಚನೆಗಳಲ್ಲಿ ತುಂಬ ಅಂತರವಿದೆ. ಇತರ ಪಕ್ಷಗಳು ದಲಿತರ ಮಾತುಗಳನ್ನು ಕೇಳಲೂ ಸಿದ್ಧವಿಲ್ಲ ಎಂದರು. ಕಾಂಗ್ರೆಸ್ ನಮ್ಮ ಬೇಡಿಕೆಗಳಿಗೆ ಮಾನ್ಯತೆ ನೀಡಿದರೆ ಅದಕ್ಕೆ ಹೊರಗಿನಿಂದ ಬೆಂಬಲ ನೀಡಲೂ ನಾವು ಸಿದ್ಧರಿದ್ದೇವೆ ಎಂದು ಅವರು ಹೇಳಿದರು.
ಭೇಟಿಯ ಬಳಿಕ ಮೆವಾನಿ ರಾಹುಲ್ ಅವರ ನವಸೃಜನ ಯಾತ್ರಾದಲ್ಲಿಯೂ ಪಾಲ್ಗೊಂಡಿದ್ದರು.





