ಅಂತರ್ ನಿಗಮ ವರ್ಗಾವಣೆಗೆ ಸಿಐಟಿಯು ಆಗ್ರಹ
ಧರಣಿ ನಿರತ ಸಾರಿಗೆ ನೌಕರರ ಬಂಧನ; ಬಿಡುಗಡೆ
ಬೆಂಗಳೂರು, ನ.3: ಅಂತರ್ ನಿಗಮ ವರ್ಗಾವಣೆಯನ್ನು ಪೂರ್ಣ ಪ್ರಮಾಣದಲ್ಲಿ ಮಾಡಬೇಕು ಸೇರಿದಂತೆ ಸಾರಿಗೆ ಸಿಬ್ಬಂದಿಗಳ ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಶಾಂತಿನಗರದ ಕೆಎಸ್ಸಾರ್ಟಿಸಿ ಬಳಿ ನಡೆಸುತ್ತಿದ್ದ ಧರಣಿ ನಿರತರನ್ನು ಪೊಲೀಸರು ಬಂಧಿಸಿದ್ದಾರೆ.
ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಬಳಿ ಶಾಂತಿಯುತವಾಗಿ ಪ್ರತಿಭಟನೆ ನಡೆಲಾಗುತ್ತಿತ್ತು. ಇದರಿಂದ ಸಾರ್ವಜನಿಕರಿಗೆ ಯಾವುದೇ ರೀತಿಯಲ್ಲಿ ತೊಂದರೆಯಾಗುತ್ತಿರಲಿಲ್ಲ. ಆದರೂ ನಮ್ಮನ್ನು ಬಂಧಿಸುವ ಮೂಲಕ ಪೊಲೀಸರು ಉದ್ಧಟತನವನ್ನು ತೋರಿದ್ದಾರೆ ಎಂದು ಬಂಧನಕ್ಕೊಳಗಾದ ಸಾರಿಗೆ ನೌಕರರು ಆಕ್ರೋಶ ವ್ಯಕ್ತಪಡಿಸಿದರು.
ಈ ವೇಳೆ ಸಿಐಟಿಯು ಉಪಾಧ್ಯಕ್ಷ ಕೆ.ಪ್ರಕಾಶ್ ಮಾತನಾಡಿ, ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಮಾಡುವುದು ಸಂವಿಧಾನ ಬದ್ಧ ಹಕ್ಕು. ಆದರೆ, ಶಾಂತಿಯುತವಾಗಿ ಪ್ರತಿಭಟನೆ ಮಾಡುತ್ತಿದ್ದ ಸಾರಿಗೆ ನೌಕರರನ್ನು ಬಂಧಿಸುವ ಮೂಲಕ ಸಾರಿಗೆ ಇಲಾಖೆ ಹಾಗೂ ಗೃಹ ಇಲಾಖೆ ಜನತೆಗೆ ತಪ್ಪು ಸಂದೇಶವನ್ನು ರವಾನಿಸುತ್ತಿದೆ ಎಂದು ಅವರು ಕಿಡಿಕಾರಿದರು.
ಸಾರಿಗೆ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಇಂದು ಸಾರಿಗೆ ನೌಕರರು ರಸ್ತೆ ಬದಿಯಲ್ಲಿ ಧರಣಿ ನಡೆಸುವಂತಾಗಿದೆ. ಹಾಗೂ ವಿನಾಕರಣ ಪೊಲೀಸರ ಬಂಧನಕ್ಕೆ ಒಳಗಾಗಬೇಕಾಗಿದೆ. ಆದರೂ, ನೌಕರರ ಸಮಸ್ಯೆಯನ್ನು ಪರಿಹರಿಸುವ ನಿಟ್ಟಿನಲ್ಲಿ ಇಂದಿಗೂ ಪ್ರಾಮಾಣಿಕ ಪ್ರಯತ್ನ ಮಾಡಿಲ್ಲ. ಹೀಗಾಗಿ ಸಾರಿಗೆ ನೌಕರರು ತಮ್ಮ ಪ್ರತಿಭಟನೆಯನ್ನು ನಿಲ್ಲಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಸಾರಿಗೆ ನೌಕರರ ಬೇಡಿಕೆಗಳಾವುವು ಹೊಸದಲ್ಲ. ಕೆಳದ ಹಲವು ವರ್ಷಗಳಿಂದ ಇದೇ ಬೇಡಿಕೆಗಳನ್ನು ಆಗ್ರಹಿಸಿ ಪ್ರತಿಭಟನೆ ಮಾಡಲಾಗುತ್ತಿದೆ. ಆದರೆ, ಸಾರಿಗೆ ಅಧಿಕಾರಿಗಳು ಹಾಗೂ ಸಾರಿಗೆ ಸಚಿವರು ಮಾತ್ರ ಉದಾಸೀನತೆಯನ್ನು ಪ್ರದರ್ಶಿಸುತ್ತಲೇ ಬರುತ್ತಿದೆ. ಹೀಗಾಗಿ ಅನಿರ್ದಿಷ್ಟಾವಧಿ ಮುಷ್ಕರ ನಡೆಸಲಾಗುತ್ತಿದೆ. ಇದನ್ನು ಸಹಿಸದ ಸಾರಿಗೆ ಅಧಿಕಾರಿಗಳು ಪೊಲೀಸರ ಮೂಲಕ ಕಿರುಕುಳ ನೀಡುತ್ತಿದ್ದಾರೆ ಎಂದು ಅವರು ಆರೋಪಿಸಿದರು.
'ಪ್ರತಿಭಟನೆ ನಿಲ್ಲಲ್ಲ'
ಸಾರಿಗೆ ಇಲಾಖೆಯ ಅಧಿಕಾರಿಗಳು ತಮ್ಮದೇ ಸಿಬ್ಬಂದಿಗಳನ್ನು ಪೊಲೀಸರ ಮೂಲಕ ಬಂಧಿಸಿ ಕಿರುಕುಳ ನೀಡುತ್ತಿದ್ದಾರೆ. ಇನ್ನು ಸಾರಿಗೆ ಸಚಿವರು ಧರಣಿ ನಿರತರ ಬಳಿಗೆ ಬಂದು ತಮ್ಮ ಸಮಸ್ಯೆಗಳನ್ನು ಆಲಿಸದೆ ಮಾಧ್ಯಮಗಳಿಗೆ ಇಷ್ಟಬಂದಂತೆ ಹೇಳಿಕೆ ನೀಡುತ್ತಿದ್ದಾರೆ. ಹೀಗಾಗಿ ನಮ್ಮ ಪ್ರತಿಭಟನೆಯನ್ನು ಕೆಎಸ್ಸಾರ್ಟಿಸಿ ನಿಗಮದಿಂದ ಫ್ರೀಡಂ ಪಾರ್ಕ್‌ಗೆ ಬದಲಿಸಿಕೊಂಡು, ನ್ಯಾಯ ಸಿಗುವವರೆಗೆ ಹೋರಾಟ ನಡೆಸುತ್ತೇವೆ.
-ಕೆ.ಪ್ರಕಾಶ್, ಪ್ರಧಾನ ಕಾರ್ಯದರ್ಶಿ ಸಿಐಟಿಯು







