ಖಾಸಗಿ ಬಸ್‌ಗಳ ಆನ್‌ಲೈನ್ ಟಿಕೆಟ್ ಬುಕಿಂಗ್ ರದ್ದತಿಯಿಲ್ಲ: ಸಚಿವ ರೇವಣ್ಣ
ಬಸ್‌ಮಿತ್ರ ವಾಹನಗಳಿಗೆ ಚಾಲನಾ ಕಾರ್ಯಕ್ರಮ
ಬೆಂಗಳೂರು, ನ.3: ಖಾಸಗಿ ಬಸ್‌ಗಳ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ರದ್ದುಗೊಳಿಸುವಂತಹ ಯಾವುದೇ ಪ್ರಸ್ತಾಪ ಸರಕಾರದ ಮುಂದಿಲ್ಲ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಸ್ಪಷ್ಟಪಡಿಸಿದ್ದಾರೆ.
ಶುಕ್ರವಾರ ಕೆಎಸ್ಸಾರ್ಟಿಸಿ ವತಿಯಿಂದ ನಗರದ ಶಾಂತಿನಗರ ಡಿಪೋ 4ರಲ್ಲಿ ಕೆಎರ್ಸ್ಸಾಟಿಸಿಯ ‘ಬಸ್‌ಮಿತ್ರ ವಾಹನಗಳಿಗೆ ಚಾಲನೆ’ ನೀಡಿ ಮಾತನಾಡಿದ ಅವರು, ಖಾಸಗಿ ಬಸ್‌ಗಳ ಆನ್‌ಲೈನ್ ಟಿಕೆಟ್ ಬುಕಿಂಗ್ ವ್ಯವಸ್ಥೆಯನ್ನು ಸರಕಾರ ರದ್ದುಗೊಳಿಸಲಿದೆ ಎಂಬುದು ಕೇವಲ ವದಂತಿಯಷ್ಟೆ ಎಂದು ತಿಳಿಸಿದರು.
ಕೆಎಸ್ಸಾರ್ಟಿಸಿ ಬಸ್ ಅಪಘಾತದ ವೇಳೆ ಸಿಬ್ಬಂದಿ ಸ್ಥಳಕ್ಕೆ ತೆರಳಲು ಅಗತ್ಯ ವಾಹನ ಸೌಲಭ್ಯ ಇರದೆ ತೊಂದರೆಯಾಗುತ್ತಿತ್ತು. ಈ ಸಮಸ್ಯೆಯನ್ನು ನಿವಾರಿಸುವ ನಿಟ್ಟಿನಲ್ಲಿ ಬಸ್‌ಮಿತ್ರ ಹೆಸರಿನಲ್ಲಿ ಸುಮಾರು 45 ಮಹೇಂದ್ರ ಬುಲೋರಾ ವಾಹನಗಳಿಗೆ ಚಾಲನೆ ನೀಡಲಾಗಿದೆ. ಮುಂದಿನ ದಿನಗಳಲ್ಲಿ ಅಪಘಾತಗಳಲ್ಲಿ ಸಂಭವಿಸುವ ಸಾವುಗಳ ಪ್ರಮಾಣ ತಗ್ಗಲಿದೆ ಎಂದು ಹೇಳಿದರು.
ಅಪಘಾತ ಸಂದರ್ಭದಲ್ಲಿ ತುರ್ತು ಚಿಕಿತ್ಸೆ ನೀಡಲು ಗೋಲ್ಡನ್ ಅವರ್ ಆರ್ಗನೈಸೇಶನ್ ಮತ್ತು ರೆಡ್‌ಕ್ರಾಸ್ ಸಂಸ್ಥೆ ನಮಗೆ ಸಹಕಾರ ನೀಡಲಿವೆ. ಬಸ್‌ಮಿತ್ರ ಚಾಲಕರಿಗೆ ರೆಡ್‌ಕ್ರಾಸ್ ಸಂಸ್ಥೆ ತರಬೇತಿ ನೀಡಲಿದೆ. ರಾಜ್ಯದ ಎಲ್ಲಿಯೇ ಅಪಘಾತ ಸಂದರ್ಭದಲ್ಲಿ ಕೆಎಸ್ಸಾರ್ಟಿಸಿ ಸಹಾಯವಾಣಿಯನ್ನು ಬಳಸಿ ಅಪಘಾತದ ಮಾಹಿತಿ ನೀಡಿ ತುರ್ತು ಸೇವೆ ಪಡೆಯಬಹುದಾಗಿದೆ ಎಂದರು.
ಸ್ಪೀಡ್ ಗವರ್ನರ್ ಕಡ್ಡಾಯವನ್ನು ರಾಜ್ಯ ಸರಕಾರ ಮಾಡಿಲ್ಲ. ನ್ಯಾಯಾಲಯದ ಆದೇಶ ಪಾಲನೆ ಮಾಡುತ್ತಿದ್ದೇವೆ. ಆದರೆ, ಬೇರೆ ರಾಜ್ಯದಲ್ಲಿ ಸ್ಪೀಡ್ ಗವರ್ನರ್ ದರ ಕಡಿಮೆ ಇದೆ. ಇಲ್ಲಿ ದುಬಾರಿ ಎನ್ನುವ ಆರೋಪ ಕೇಳಿಬಂದಿದ್ದು, ಇಲ್ಲಿಯೂ ದರ ಕಡಿತಕ್ಕೆ ಪ್ರಯತ್ನ ನಡೆಸುತ್ತೇವೆ ಎಂದು ಅವರು ಆಶ್ವಾಸನೆ ನೀಡಿದರು.
ವರ್ಗಾವಣೆ, ಬೋನಸ್, ತಿಂಗಳಿಗೆ ನಾಲ್ಕು ಕಡ್ಡಾಯ ರಜೆ ಸೇರಿದಂತೆ ಕೆಎಸ್ಸಾರ್ಟಿಸಿ ಸಿಬ್ಬಂದಿಗಳು ನಡೆಸುತ್ತಿರುವ ಧರಣಿ ನನ್ನ ಗಮನಕ್ಕೆ ಬಂದಿದೆ. ಸಿಬ್ಬಂದಿಗಳ ಮುಖಂಡರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆದರೆ, ಎಲ್ಲ ಸಮಸ್ಯೆಗಳನ್ನು ಒಂದೇ ದಿನದಲ್ಲಿ ಬಗೆಹರಿಸಲು ಸಾಧ್ಯವಿಲ್ಲ. ಹಂತ, ಹಂತವಾಗಿ ಎಲ್ಲ ಸಮಸ್ಯೆಗಳನ್ನು ಬಗೆ ಹರಿಸಲಾಗುವುದು.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ







