ಬೇರೆಯವರಿಂದ ಕನ್ನಡಾಭಿಮಾನ ಕಲಿಯುವ ಅಗತ್ಯವಿಲ್ಲ: ಸಿಎಂ ಸಿದ್ದರಾಮಯ್ಯ
ಅಮಿತ್ ಶಾಗೆ ಸಿಎಂ ತಿರುಗೇಟು

ಬೆಂಗಳೂರು, ನ.3: ಕನ್ನಡ ರಾಜ್ಯೋತ್ಸವ ಆಚರಣೆಗಿಂತಲೂ ಟಿಪ್ಪು ಸುಲ್ತಾನ್ ಜಯಂತಿಗೆ ಮುಖ್ಯಮಂತ್ರಿ ಹೆಚ್ಚಿನ ಆದ್ಯತೆ ನೀಡುತ್ತಿದ್ದಾರೆ ಎಂಬ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಟೀಕೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ತಾನು ಕನ್ನಡಾಭಿಮಾನವನ್ನು ಯಾರಿಂದಲೂ ಕಲಿಯಬೇಕಾಗಿಲ್ಲ ಎಂದು ಅಮಿತ್ ಶಾ ಅವರಿಗೆ ತಿರುಗೇಟು ನೀಡಿದ್ದಾರೆ.
ಶುಕ್ರವಾರ ಗೃಹ ಕಚೇರಿ ಕೃಷ್ಣಾದಲ್ಲಿ ವಾರ್ತಾಭಾರತಿ ಪತ್ರಿಕೆಯ 15ನೆ ವಿಶೇಷಾಂಕ ಬಿಡುಗಡೆಗೊಳಿಸಿದ ಬಳಿಕ ಮಾತನಾಡಿದ ಅವರು, ಕನ್ನಡದ ಮೇಲಿನ ಅಭಿಮಾನವನ್ನು ಅಮಿತ್ ಶಾ ಅವರಿಂದ ನಾನು ಕಲಿಯಬೇಕೇ? ನನ್ನ ಮಾತೃ ಭಾಷೆ, ಈ ರಾಜ್ಯದ, ನೆಲದ ಭಾಷೆಯ ಬಗ್ಗೆ ಗುಜರಾತ್‌ನಿಂದ ಬಂದವರ ಬಳಿ ಕಲಿಯುವ ಅಗತ್ಯವಿಲ್ಲ ಎಂದರು.
ಬಿಜೆಪಿಯವರು ಗೋಸುಂಬೆಗಳು. ಅಧಿಕಾರದಲ್ಲಿದ್ದಾಗ ಒಂದು ನಿಲುವು, ಅಧಿಕಾರ ಇಲ್ಲದಿದ್ದಾಗ ಒಂದು ನಿಲುವು ಹೊಂದಿರುತ್ತಾರೆ. ಕೆಜೆಪಿಯನ್ನು ಕಟ್ಟಿದಾಗ ಯಡಿಯೂರಪ್ಪ ಟಿಪ್ಪು ವೇಷ ಹಾಕಿಕೊಂಡು 'ಅಲ್ಲಾಹನ ಮೇಲೆ ಆಣೆ ನಾನು ಬಿಜೆಪಿ ಸೇರಲ್ಲ' ಎಂದು ಮುಸ್ಲಿಮರನ್ನು ಖುಷಿಪಡಿಸಲು ಹೇಳಿಕೆ ನೀಡಿದ್ದರು ಎಂದು ತಿಳಿಸಿದರು.
ಜಗದೀಶ್ ಶೆಟ್ಟರ್ ಮುಖ್ಯಮಂತ್ರಿಯಾಗಿದ್ದಾಗ ಪ್ರೊ.ಶೇಖ್ ಅಲಿ ಟಿಪ್ಪು ಸುಲ್ತಾನ್ ಬಗ್ಗೆ ಬರೆದಿರುವ ಪುಸ್ತಕಕ್ಕೆ ಮುನ್ನಡಿ ಬರೆದು, ಟಿಪ್ಪುವನ್ನು ಹೊಗಳಿದ್ದಾರೆ. ಈಗ ಟಿಪ್ಪು ಮತಾಂಧ, ಕನ್ನಡ ವಿರೋಧಿ, ಕೊಡವರನ್ನು ಕೊಂದ, ಒನಕೆ ಓಬವ್ವರನ್ನು ಕೊಂದ ಎಂದು ಹೇಳಿಕೆಗಳನ್ನು ನೀಡುತ್ತಿದ್ದಾರೆ ಎಂದು ಹೇಳಿದರು.
ಒಬ್ಬ ರಾಜ, ಮತ್ತೊಬ್ಬ ರಾಜನ ಮೇಲೆ ದಂಡೆತ್ತಿ ಹೋಗುವುದು, ಯುದ್ಧ ಮಾಡುವುದು ಆಗಿನ ಕಾಲಕ್ಕೆ ಸಾಮಾನ್ಯ ಸಂಗತಿಯಾಗಿತ್ತು. ಯುದ್ಧದಲ್ಲಿ ಹಿಂದೂಗಳು, ಮುಸ್ಲಿಮರು ಸೇರಿದಂತೆ ಎಲ್ಲರೂ ಸಾಯುತ್ತಿದ್ದರು. ಟಿಪ್ಪುಸುಲ್ತಾನ್ ಕೇವಲ ಹಿಂದೂಗಳನ್ನೆ ಗುರಿಯನ್ನಾಗಿಸಿಕೊಂಡು ದಾಳಿ ಮಾಡಿದ ನಿದರ್ಶನ ಇಲ್ಲ ಎಂದರು.
ಟಿಪ್ಪು ಸುಲ್ತಾನ್ ಕನ್ನಡ ವಿರೋಧಿ ಎನ್ನುವುದು ಶುದ್ಧ ಸುಳ್ಳು. ಕನ್ನಡ ಭಾಷೆಯಲ್ಲಿ ಪ್ರಪ್ರಥಮ ರಾಜ್ಯ ಪತ್ರವನ್ನು ಪ್ರಕಟಿಸಿದ ಟಿಪ್ಪು ಸುಲ್ತಾನ್, ಕನ್ನಡ ವಿರೋಧಿಯಾಗಲು ಹೇಗೆ ಸಾಧ್ಯ? ದಿವಾನರ ಸ್ಥಾನದಲ್ಲಿ ಪೂರ್ಣಯ್ಯ ಅವರನ್ನು ನೇಮಕ ಮಾಡಿಕೊಂಡಿದ್ದ ಟಿಪ್ಪು ಹಿಂದೂ ವಿರೋಧಿಯಾಗಿದ್ದರು ಎಂಬುದನ್ನು ನಂಬಲು ಸಾಧ್ಯವೇ? ಭಾರತದ ಸ್ವಾತಂತ್ರ್ಯ ಸಂಗ್ರಾಮದ ಮುನ್ನವೇ, ನಾಲ್ಕು ಬಾರಿ ಬ್ರಿಟಿಷರ ವಿರುದ್ಧ ಯುದ್ಧ ಮಾಡಿ ಹೋರಾಡಿ ವೀರ ಮರಣವನ್ನಪ್ಪಿದ ಟಿಪ್ಪು ಸುಲ್ತಾನ್ ಅವರನ್ನು ದೇಶಪ್ರೇಮಿ ಅಲ್ಲ ಎಂದು ಬಣ್ಣಿಸುವುದು ನ್ಯಾಯ ಸಮ್ಮತವೇ ಎಂದು ಪ್ರಶ್ನಿಸಿದರು.
ಹೈದರಾಬಾದ್ ನಿಝಾಮರು, ಮರಾಠರು, ಫ್ರೆಂಚರು ಟಿಪ್ಪು ಸುಲ್ತಾನ್ ನೆರವಿಗೆ ಬಂದಿದ್ದರೆ ಮೂರನೆ ಆಂಗ್ಲೊ ಮೈಸೂರು ಯುದ್ಧದಲ್ಲಿ ಅವರು ಪರಾಭವ ಗೊಳ್ಳುತ್ತಿರಲಿಲ್ಲ. ಯುದ್ಧದ ಖರ್ಚು ಭರಿಸಲು ಬ್ರಿಟಿಷರ ಬಳಿ ತಮ್ಮ ಮಕ್ಕಳನ್ನು ಒತ್ತೆ ಇಡಬೇಕಾದ ಪರಿಸ್ಥಿತಿ ನಿರ್ಮಾಣವಾಗುತ್ತಿರಲಿಲ್ಲ. ನಾಲ್ಕನೆ ಯುದ್ಧದಲ್ಲಿ ಅವರು ಸಾವನ್ನಪ್ಪುತ್ತಿರಲ್ಲಿಲ್ಲ ಎಂದು ಅಭಿಪ್ರಾಯಪಟ್ಟರು.
ಇತಿಹಾಸವನ್ನು ತಿರುಚುವ ಕೆಲಸವನ್ನು ಬಿಜೆಪಿಯವರು ಮಾಡುತ್ತಿದ್ದಾರೆ. ಆದರೆ, ರಾಷ್ಟ್ರಪತಿಯವರು ತಮ್ಮ ಭಾಷಣದಲ್ಲಿ ಟಿಪ್ಪು ಸುಲ್ತಾನ್ ಅವರ ಬಗ್ಗೆ ಸತ್ಯ ಹೇಳಿದ ನಂತರ ಬಿಜೆಪಿಯವರ ಬಾಯಿ ಮುಚ್ಚಿಹೋಗಿದೆ ಎಂದು ಅವರು, ಬಿಜೆಪಿ, ಆರೆಸ್ಸೆಸ್, ಬಜರಂಗ ದಳ, ಹಿಂದುತ್ವದ ಪ್ರತಿಪಾದನೆ ಮಾಡುವವರು ಮೊದಲು ಬದಲಾಗಬೇಕು. ಇಲ್ಲದಿದ್ದರೆ, ಪರಿವರ್ತನಾ ರ್ಯಾಲಿಯ ಹೆಸರಿನಲ್ಲಿ ಜನರ ಬಳಿ ಹೋಗುವ ಯಾವ ನೈತಿಕತೆಯೂ ಅವರಿಗಿಲ್ಲ ಎಂದು ಟೀಕಿಸಿದರು.
ಐದು ವರ್ಷ ಅಧಿಕಾರದಲ್ಲಿದ್ದ ಬಿಜೆಪಿಯವರು, ಸಮಾಜದಲ್ಲಿ ಒಡೆದು ಆಳುವ, ಬೆಂಕಿ ಹಚ್ಚುವ, ಸಮಾಜದಲ್ಲಿ ಸಾಮರಸ್ಯ ಹಾಳು ಮಾಡುವ ಪ್ರಯತ್ನ ಮಾಡಿದರು. ಈಗ ಚುನಾವಣೆ ಸಮೀಪಿಸುತ್ತಿರುವುದರಿಂದ ಕೋಮುಸೌಹಾರ್ದತೆ ಹಾಳು ಮಾಡಲು ಪ್ರಯತ್ನ ಮಾಡುತ್ತಿದ್ದಾರೆ. ಆದರೆ, ನಾವು ಅದಕ್ಕೆ ಅವಕಾಶ ನೀಡಲ್ಲ ಎಂದರು.
ಪ್ರಚೋದನಕಾರಿ ಭಾಷಣಗಳನ್ನು ಮಾಡುವ ಮೂಲಕ ಕೋಮುಸೌಹಾರ್ದತೆಗೆ ಭಂಗ ತರುವ, ಸಮಾಜದಲ್ಲಿ ಶಾಂತಿಯನ್ನು ಕದಡಲು ಪ್ರಯತ್ನಿಸಿದರೆ ಅಂತಹವರ ವಿರುದ್ಧ ಕಾನೂನು ರೀತಿ ಕಠಿಣ ಕ್ರಮ ಕೈಗೊಳ್ಳುವಂತೆ ಪೊಲೀಸರಿಗೆ ಸೂಚನೆ ನೀಡಿದ್ದೇನೆ ಎಂದು ಮುಖ್ಯಮಂತ್ರಿ ತಿಳಿಸಿದರು.







