‘ಸಿಟ್’ ತನಿಖೆಗೆ ರಾಜ್ಯ ಸರಕಾರ ನಿರ್ಧಾರ: ಸಚಿವ ಎಚ್.ಕೆ.ಪಾಟೀಲ್
ಬೇಲಿಕೇರಿ ಅದಿರು ಅಕ್ರಮ ರಫ್ತು ಪ್ರಕರಣ
ಬೆಂಗಳೂರು, ನ.3: ಲೋಕಾಯುಕ್ತ ನ್ಯಾ.ಎನ್.ಸಂತೋಷ್ ಹೆಗ್ಡೆ ವರದಿ ಆಧರಿಸಿ ಕಬ್ಬಿಣದ ಅದಿರು ಅಕ್ರಮ ರಫ್ತು ಹಗರಣ ಸಂಬಂಧ ‘ಸಿಟ್’ ತನಿಖೆ ನಡೆಸಲು ಸರಕಾರ ನಿರ್ಧರಿಸಿದೆ ಎಂದು ಸಂಪುಟ ಉಪ ಸಮಿತಿ ಸದಸ್ಯರೂ ಆಗಿರುವ ಗ್ರಾಮೀಣಾಭಿವೃದ್ಧಿ ಸಚಿವ ಎಚ್.ಕೆ.ಪಾಟೀಲ್ ಹೇಳಿದ್ದಾರೆ.
ಶುಕ್ರವಾರ ವಿಧಾನಸೌಧದಲ್ಲಿ ಸಂಪುಟ ಉಪ ಸಮಿತಿ ಸಭೆಯ ಬಳಿಕ ಮಾತನಾಡಿದ ಅವರು, ಕಾರವಾರದ ಬೇಲಿಕೇರಿ ಬಂದರಿನಿಂದ 54 ಕಂಪೆನಿಗಳು 79 ಲಕ್ಷ ಮೆಟ್ರಿಕ್ ಟನ್ ಹಾಗೂ ನವ ಮಂಗಳೂರು ಬಂದರಿನಿಂದ 76 ಕಂಪೆನಿಗಳು 2.85 ಕೋಟಿ ಮೆಟ್ರಿಕ್ ಟನ್ ಕಬ್ಬಿಣದ ಅದಿರು ರಫ್ತು ಮಾಡಿರುವ ಬಗ್ಗೆ ಸಿಟ್ ತನಿಖೆ ನಡೆಯಲಿದೆ ಎಂದು ತಿಳಿಸಿದರು.
ಒಟ್ಟಾರೆ 4ರಿಂದ 5 ಸಾವಿರ ಕೋಟಿ ರೂಪಾಯಿಗಳಿಗೂ ಅಧಿಕ ಮೊತ್ತದ ಕಬ್ಬಿಣದ ಅದಿರಿನ್ನು ವಿದೇಶಗಳಿಗೆ ರಫ್ತು ಮಾಡಲಾಗಿತ್ತು. ಈ ಬಗ್ಗೆ ರಾಜ್ಯ ಸರಕಾರ ಸಿಬಿಐ ತನಿಖೆಗೆ ಒಪ್ಪಿಸಿತ್ತು. ಕೆಲ ಪ್ರಕರಣಗಳಲ್ಲಿ ಕಂಪೆನಿಗಳ ಆಸ್ತಿಪಾಸ್ತಿ ಮುಟ್ಟುಗೋಲು ಹಾಕಿಕೊಳ್ಳಬೇಕೆಂದು ಕೋರಲಾಗಿತ್ತು. ಆದರೆ, ಸಿಬಿಐ ಇದಕ್ಕೆ ಕಾನೂನಿನ ತೊಡಕಿದೆ ಎಂದು ತಿಳಿಸಿದೆ.
ಹೀಗಾಗಿ ಮುಂದಿನ ಕ್ರಮದ ಬಗ್ಗೆ ಕಾನೂನು ಇಲಾಖೆ ಅಭಿಪ್ರಾಯ ಕೋರಿದ್ದು, ಕಾನೂನು ಇಲಾಖೆ ಅಭಿಪ್ರಾಯದ ಬಳಿಕ ಮುಂದಿನ ನಿರ್ಧಾರ ಕೈಗೊಳ್ಳಲಿದ್ದೇವೆ ಎಂದ ಅವರು, ತಮಿಳುನಾಡಿನ ಚನ್ನೈ ಬಂದರಿನಿಂದಲೂ ವಿದೇಶಕ್ಕೆ ರಫ್ತು ಮಾಡಿರುವ ಬಗ್ಗೆಯೂ ‘ಸಿಟ್’ ನಿಖೆ ನಡೆಸಲಾಗುವುದು ಎಂದರು.
ಬಿಜೆಪಿ ಅಧಿಕಾರಾವಧಿಯಲ್ಲಿ ನಡೆದಿದ್ದ ಈ ಅಕ್ರಮದ ತನಿಖೆ ಸಿಬಿಐಗೆ ವಹಿಸಿತ್ತು. ಆದರೆ, ಸೂಕ್ತ ಸಾಕ್ಷಾಧಾರ ಕೊರತೆ ನೆಪದಲ್ಲಿ ಯಾರ ವಿರುದ್ಧವೂ ಪ್ರಕರಣ ದಾಖಲಿಸಲು ಸಾಧ್ಯವಿಲ್ಲ ಎಂದು ಸಿಬಿಐ ತನಿಖೆ ಕೈಬಿಟ್ಟಿತ್ತು. ಆದುದರಿಂದ ರಾಜ್ಯ ಸರಕಾರ ಸಿಟ್ ತನಿಖೆ ನಡೆಸಲು ತೀರ್ಮಾನಿಸಿದೆ ಎಂದು ಅವರು ವಿವರಿಸಿದರು.
‘ಸಿಟ್’ಗೆ ವಹಿಸುವ ರಾಜ್ಯ ಸರಕಾರದ ಈ ನಿರ್ಧಾರದ ಹಿಂದೆ ಯಾವುದೇ ರಾಜಕೀಯ ದುರುದ್ದೇಶ ಇಲ್ಲ. ಸಿಬಿಐ ತನಿಖೆ ವಿಳಂಬ ಮಾಡಿ, ನಂತರ ನಿರಾಕರಣೆ ಮಾಡಿದೆ. ಹೀಗಾಗಿ ರಾಜ್ಯದ ಜನರಿಗೆ ವ್ಯವಸ್ಥೆ ಬಗ್ಗೆ ಹೇಗೆ ವಿಶ್ವಾಸ ಮೂಡಿಸುವ ದೃಷ್ಟಿಯಿಂದ ಸಿಟ್ ತನಿಖೆಗೆ ಕ್ರಮ ವಹಿಸಲಾಗಿದೆ ಎಂದು ಅವರು ಸ್ಪಷ್ಟಪಡಿಸಿದರು.
ಪ್ರಕರಣದ ಹಿನ್ನೆಲೆ: ಕಾರವಾರದ ಬೇಲಿಕೇರಿ ಹಾಗೂ ನವ ಮಂಗಳೂರು ಬಂದರಿನಲ್ಲಿ ಶೇಖರಿಸಿದ್ದ ಕೋಟ್ಯಂತರ ರೂ. ಮೌಲ್ಯದ ಕಬ್ಬಿಣದ ಅದಿರನ್ನು ಅಕ್ರಮವಾಗಿ ವಿದೇಶಕ್ಕೆ ರಫ್ತು ಮಾಡಲಾಗಿತ್ತು. ಈ ಸಂಬಂಧ ತನಿಖೆ ನಡೆಸಿದ ಲೋಕಾಯುಕ್ತ ನ್ಯಾ.ಸಂತೋಷ್ ಹೆಗ್ಡೆ ರಾಜ್ಯ ಸರಕಾರಕ್ಕೆ ವರದಿ ಸಲ್ಲಿಸಿದ್ದರು. ಈ ಪ್ರಕರಣವನ್ನು ಸಿಬಿಐ ತನಿಖೆಗೆ ಒಪ್ಪಿಸಲಾಗಿತ್ತು.
ನಾಲ್ಕೂವರೆ ವರ್ಷಗಳ ಹಿಂದೆ ತನಿಖೆ ಕೈಗೆತ್ತಿಕೊಂಡಿದ್ದ ಸಿಬಿಐ ಮೊಕದ್ದಮೆ ದಾಖಲಿಸಲು ಕಾನೂನಿನ ತೊಡಕುಗಳಿವೆ ಎಂದು ಪ್ರಕರಣ ಕೈಬಿಟ್ಟಿತ್ತು. ಇದೀಗ ರಾಜ್ಯ ಸರಕಾರ ಆ ಪ್ರಕರಣವನ್ನು ಸಿಟ್ ತನಿಖೆಗೆ ಒಪ್ಪಿಸಲು ತೀರ್ಮಾನಿಸಿದೆ ಎಂದು ಗೊತ್ತಾಗಿದೆ.







