5 ವರ್ಷಗಳನ್ನು ಕೋಣೆಯೊಳಗೆ ಕಳೆದ ತಾಯಿ, ಮಗಳು !
ಪತಿಯ ದುಷ್ಕೃತ್ಯ

ಕೋಲ್ಕತಾ, ನ.3: ವ್ಯಕ್ತಿಯೋರ್ವ ತನ್ನ ಪತ್ನಿ ಹಾಗೂ 11 ವರ್ಷದ ಮಗಳನ್ನು ಕೋಣೆಯೊಂದರಲ್ಲಿ ಕಳೆದ ಐದು ವರ್ಷದಿಂದ ಕೂಡಿಹಾಕಿದ್ದ ಅಮಾನವೀಯ ಘಟನೆ ಪಶ್ಚಿಮ ಬಂಗಾಲದ ಮುರ್ಷಿದಾಬಾದ್ ಜಿಲ್ಲೆಯಲ್ಲಿ ಬೆಳಕಿಗೆ ಬಂದಿದೆ. ಬಂಧಿಗಳಾಗಿದ್ದ ಮಹಿಳೆ ಮತ್ತು ಬಾಲಕಿಯನ್ನು ಪೊಲೀಸರು ರಕ್ಷಿಸಿದ್ದಾರೆ.
ನಾದಿಯಾ ಜಿಲ್ಲೆಯ ನಿವಾಸಿಯಾದ ಮಂಜು ಮೊಂಡಲ್ ಎಂಬ ಮಹಿಳೆಯ ವಿವಾಹ ಮನೋಬೆಂದ್ರ ಮೊಂಡಲ್ ಎಂಬ ವ್ಯಕ್ತಿಯೊಂದಿಗೆ ನೆರವೇರಿತ್ತು. ಈ ದಂಪತಿಗೆ ತೋತಾ ಎಂಬ ಹೆಸರಿನ ಮಗಳಿದ್ದಾಳೆ. ಬಡಗಿ ಕೆಲಸ ನಿರ್ವಹಿಸುವ ಮನೋಬೆಂದ್ರ ಮತ್ತೊಬ್ಬ ಮಹಿಳೆಯನ್ನು ವಿವಾಹವಾಗಿದ್ದು ಮಂಜು ಮತ್ತು ಮಗಳು ತೋತಾಳನ್ನು ಮನೆಯ ಕೋಣೆಯಲ್ಲಿ ಕೂಡಿಹಾಕಿದ್ದ ಎಂದು ಆರೋಪಿಸಲಾಗಿದೆ.
ಕಳೆದ ಐದು ವರ್ಷದಿಂದಲೂ ನಾವು ಮಂಜುವನ್ನು ಭೇಟಿಯಾಗಲು ಬಂದಾಗ ಮನೋಬೆಂದ್ರನ ಎರಡನೇ ಪತ್ನಿ, ತಾನೇ ಮಂಜು ಎಂಬಂತೆ ತಮ್ಮಿಡನೆ ಮಾತನಾಡುತ್ತಿದ್ದಳು. ಆದರೆ ಮನೆಯ ಬಾಗಿಲು ತೆರೆಯುತ್ತಿರಲಿಲ್ಲ. ನಮಗೆ ಅನುಮಾನ ಬಂದರೂ ಸುಮ್ಮನಿದ್ದೆವು ಎಂದು ಮಂಜು ಸೋದರ ನಿಖಿಲ್ ಸರ್ಕಾರ್ ತಿಳಿಸಿದ್ದಾರೆ. ಸೋದರಿ ಮಾನಸಿಕ ಅಸ್ವಸ್ಥಳಲ್ಲ. ಆಕೆ ಪದವೀಧರೆ. ಆದರೂ ಆಕೆಯನ್ನು ಕೋಣೆಯಲ್ಲಿ ಕೂಡಿಹಾಕಿದ್ದಾರೆ ಎಂದವರು ದೂರಿದ್ದಾರೆ. ಕಳೆದ ವಾರ ಮಂಜುವಿನ ಸಂಬಂಧಿಕರೊಬ್ಬರು ಮನೆಗೆ ಬಂದಿದ್ದಾಗ ಬಾಗಿಲು ಮುಚ್ಚಿದ ಕೋಣೆಯೊಳಗೆ ಅಸಹಜ ಸದ್ದು ಕೇಳಿ ಬರುತ್ತಿರುವುದರ ಬಗ್ಗೆ ಪೊಲೀಸರಿಗೆ ದೂರು ನೀಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.
ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೋಣೆಯ ಕಿಟಕಿಯನ್ನು ಒಡೆದು ನೋಡಿದಾಗ ಕೊಳಕಾದ ಇಕ್ಕಟ್ಟಿನ ಕೋಣೆಯಲ್ಲಿ 36ರ ಹರೆಯದ ಮಹಿಳೆ ಮತ್ತಾಕೆಯ ಮಗಳನ್ನು ಕೂಡಿ ಹಾಕಿರುವುದು ತಿಳಿದು ಬಂದಿದೆ. ತಕ್ಷಣ ಅವರಿಬ್ಬರನ್ನು ರಕ್ಷಿಸಲಾಗಿದೆ. ಈಮಧ್ಯೆ, ಮನೊಬೆಂದ್ರ ಮೊಂಡಲ್ ತಲೆಮರೆಸಿಕೊಂಡಿದ್ದು ಆತನ ಪತ್ತೆ ಕಾರ್ಯ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.







