ದ್ವೇಷ ಭಾವನೆಯಿಂದ ನನ್ನ ಮೇಲೆ ಪ್ರಕರಣ ದಾಖಲು: ಪತ್ರಕರ್ತ ಶಂಸುದ್ದೀನ್
ಠಾಣಾಧಿಕಾರಿ ವಿರುದ್ಧ ಮೇಲಾಧಿಕಾರಿಗೆ ದೂರು
ಕುಶಾಲನಗರ, ನ.3: ಅಕ್ರಮ ಮರಳುಗಾರಿಕೆಯ ವಿರುದ್ಧ ಸುದ್ದಿ ಮಾಡಿದ್ದಕ್ಕೆ ಪೂರ್ವಾಗ್ರಹ ಪೀಡಿತರಾಗಿ ದ್ವೇಷ ಭಾವನೆಯಿಂದ ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣೆಯ ಠಾಣಾಧಿಕಾರಿ ಮಹೇಶ್ ತನ್ನ ವಿರುದ್ಧ ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎಂದು ಪತ್ರಕರ್ತ ಶಂಸುದ್ದೀನ್ ಸ್ಪಷ್ಟನೆ ನೀಡಿದ್ದಾರೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಕುಶಾಲನಗರದಲ್ಲಿ ಆಂದೋಲನ ಪತ್ರಿಕಾ ವರದಿಗಾರನಾಗಿ ಕರ್ತವ್ಯ ನಿರ್ವಹಿಸುತ್ತಿದ್ದೇನೆ. ಇತ್ತೀಚೆಗೆ ಅಕ್ರಮ ಮರಳು ದಂಧೆಯ ಸಂಬಂಧ ನಾನು ಬರೆದ ಲೇಖನ ಬರೆದಿದ್ದು, ಅದರಲ್ಲಿ ಮರಳು ದಂಧೆ ಕೋರರು ಮತ್ತು ಸ್ಥಳೀಯ ಪೊಲೀಸರ ನಂಟಿನ ಬಗ್ಗೆ ವಿಮರ್ಶಿಸಿದ್ದೆ. ಇದರಿಂದ ಆಕ್ರೋಶಿತರಾದ ಕುಶಾಲನಗರ ಗ್ರಾಮಾಂತರ ಪೋಲೀಸ್ ಠಾಣೆಯ ಠಾಣಾಧಿಕಾರಿ ಮಹೇಶ್, ಯಾವುದೋ ಪರ್ತಕರ್ತರ ಬೆದರಿಕೆ ಹಾಗೂ ಬ್ಲಾಕ್ ಮೇಲ್ ಮಾಡಿದ್ದಾರೆ ಎಂಬ ದೂರಿನ ಹಿನ್ನೆಲೆಯಲ್ಲಿ ಪ್ರಕರಣದಲ್ಲಿ ನನ್ನ ಹೆಸರನ್ನು ಸೇರಿಸಿದ್ದಾರೆ ಎಂದು ದೂರಿದ್ದಾರೆ.
ಘಟನೆಯ ವೇಳೆ ನಾನು ತಮಿಳುನಾಡಿನ ತೂತುಕ್ಕುಡಿಯಲ್ಲಿ ನನ್ನ ಸ್ನೇಹಿತನ ವಿವಾಹ ಸಮಾರಭದಲ್ಲಿದ್ದೆ. ಈ ವಿಚಾರ ಠಾಣಾಧಿಕಾರಿಗೆ ತಿಳಿದಿದ್ದೂ ಅನಾವಶ್ಯಕವಾಗಿ ಸೇಡಿನಿಂದ ಆರೋಪಿ ಪಟ್ಟಿಯನ್ನು ನನ್ನ ಹೆಸರು ಸೇರಿಸಿ ನನ್ನ ಚಾರಿತ್ಯವಧೆ ಮಾಡಿ, ಸಮಾಜದಲ್ಲಿ ಗೌರವಯುತವಾಗಿ ಬದುಕಲು ಧಕ್ಕೆ ತಂದಿದ್ದಾರೆ ಎಂದು ದೂರಿದ್ದಾರೆ.
ಇದರಿಂದಾಗಿ ನನ್ನ ಕುಟುಂಬ ಮಾನಸಿಕ ಕ್ಷೋಭೆಗೊಳಗಾಗಿದ್ದು, ನಾನು ಆರ್ಥಿಕ ಮುಗ್ಗಟ್ಟಿನಿಂದಾಗಿ ಮೊಟಕುಗೊಳಿಸಿದ್ದ ಇಂಜಿನಿಯರಿಂಗ್ ಶಿಕ್ಷಣವನ್ನು ಮುಂದುವರಿಸುವ ಇರಾದೆ ಹೊಂದಿದ್ದು, ಇಂತಹ ಸುಳ್ಳು ಪ್ರಕರಣದಿಂದ ಅನಾವಶ್ಯಕವಾಗಿ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿ ನನ್ನ ಭವಿಷ್ಯವನ್ನು ಆಳು ಮಾಡಿದ್ದಾರೆ ಎಂದು ಹೇಳಿದ್ದಾರೆ.
ಠಾಣಾಧಿಕಾರಿಯ ಕಾರ್ಯವೈಖರಿಯನ್ನು ವಿಮರ್ಷೆ ಮಾಡುವ ಪರ್ತಕರ್ತರ ಬಗ್ಗೆ ಅನಾವಶ್ಯಕ ಮೊಕದ್ದಮೆಗಳಲ್ಲಿ ಸಿಲುಕಿಸಿ ಕಿರುಕುಳ ಕೊಡುವ ಸ್ವಭಾವ ಹೊಂದಿದ್ದಾರೆ. ಈ ಮೊದಲು ನನ್ನನ್ನು ಮತ್ತೊಂದು ಮೊಕದ್ದಮೆಯಲ್ಲಿ ಹೆಸರಿಸಿ, ನಂತರ ವಾಸ್ತವಾಂಶದ ಹಿನ್ನೆಲೆಯಲ್ಲಿ ಮೇಲಾಧಿಕಾರಿಗಳ ತನಿಖೆಯಿಂದ ದೋಷಾಪಟ್ಟಿ ಸಲ್ಲಿಸುವ ವೇಳೆ ನನ್ನ ಹೆಸರನ್ನು ಕೈಬಿಟ್ಟಿದ್ದಾರೆ. ಠಾಣಾಧಿಕಾರಿಯ ಇಂತಹ ಪ್ರವೃತಿಯಿಂದ ಅನೇಕ ಅಮಾಯಕರು, ಅವರ ಅಶ್ಲೀಲ ಪದಗಳ ಬೈಗುಳ, ದರ್ಪದ ವರ್ತನೆ ಹಾಗೂ ಅನಾವಶ್ಯಕ ಮೊಕದ್ದಮೆ ಹೂಡುವ ಕಿರುಕುಳಕ್ಕೆ ಸಿಲುಕಿ ತತ್ತರಿಸಿ ಹೋಗಿದ್ದಾರೆ ಎಂದು ದೂರಿದ್ದಾರೆ.
ಈ ಸಂಬಂಧ ನನ್ನ ಮೇಲೆ ಹೂಡಿರುವ ಮೊಕದ್ದಮೆ ಸುಳ್ಳೆಂದು ಹಾಗೂ ಘಟನೆ ನಡೆದ ದಿನದಂದು ನಾನು ತಮಿಳುನಾಡಿನಲ್ಲಿದ ಬಗ್ಗೆ ಮೇಲಾಧಿಕಾರಿಗೆ ಸಾಕ್ಷ್ಯ ಒದಗಿಸಿ ದೂರು ನೀಡಿದ್ದೇನೆ. ಪ್ರತೀಕಾರದ ಮನೋಭಾ ವನೆಯಿಂದ ನನ್ನನ್ನು ಬಂಧಿಸುವ ಅಪಾಯವಿರುವುದರಿಂದ ನಾನು ಪೋಲೀಸ್ ವರಿಷ್ಠಾಧಿ ಕಾರಿಯಲ್ಲಿ ರಕ್ಷಣೆಗೆ ನೀಡುವಂತೆ ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಒಂದು ತಿಂಗಳ ಒಳಗಾಗಿ ಸತ್ಯಾಸತ್ಯತೆಯನ್ನು ತನಿಖೆಯ ಮೂಲಕ ಅರಿತು, ದೋಷಾರೋಪ ಪಟ್ಟಿಯಿಂದ ನನ್ನ ಹೆಸರು ಕೈಬಿಡದಿದದ್ದಲ್ಲಿ ಸಮಾನ ಮನಸ್ಕರೊಡನೆ ಒಗ್ಗೂಡಿ ಪ್ರತಿಭಟನಾ ಧರಣಿಯನ್ನು ನಡೆಸುವುದಾಗಿ ಎಚ್ಚರಿಸಿದ್ದಾರೆ.







