ತ್ಯಾಜ್ಯ ವಿಲೇವಾರಿ ವಾಹನದಲ್ಲಿ ವಿದ್ಯಾರ್ಥಿಗಳ ಜಾಥಾ: ಆರೋಪ

ಉಳ್ಳಾಲ, ನ. 3: ಉಳ್ಳಾಲ ನಗರಸಭೆ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಯುಕ್ತ ಆಯೋಜಿಸಲಾಗಿದ್ದ ಜಾಥಾದಲ್ಲಿ ವೀರ ಮಹಿಳೆಯರ ವೇಷ ಧರಿಸಿದ್ದ ವಿದ್ಯಾರ್ಥಿಗಳನ್ನು ಕಸ ಸಾಗಿಸುವ ವಾಹನದಲ್ಲಿ ಮೆರವಣಿಗೆ ನಡೆಸಲಾಗಿದೆ ಎಂದು ಬಿಜೆಪಿ ಮಂಗಳೂರು ವಿಧಾಸಭಾ ಕ್ಷೇತ್ರ ತೀವ್ರವಾಗಿ ಖಂಡಿಸಿದೆ.
ಮುಖ್ಯಮಂತ್ರಿ ಸಿದ್ಧರಾಮಯ್ಯ ಮೀನು, ಕೋಳಿ ತಿಂದು ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ತೆರಳುವ ಮೂಲಕ ಆಸ್ತಿಕರ ಭಾವನೆಗಳಿಗೆ ಅಪಚಾರ ಎಸಗಿದರೆ, ಇದೀಗ ರಾಜ್ಯದ ಮಂತ್ರಿ ಯು.ಟಿ.ಖಾದರ್ ಅವರ ಉಪಸ್ಥಿತಿಯಲ್ಲಿ ಉಳ್ಳಾಲ ನಗರಸಭೆ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವೀರಮಹಿಳೆ ರಾಣಿ ಅಬ್ಬಕ್ಕ ಮತ್ತು ಒನಕೆ ಓಬವ್ವರ ವೇಷ ಧರಿಸಿದ್ದ ವಿದ್ಯಾರ್ಥಿನಿಯರನ್ನು ಕಸ ಸಾಗಿಸುವ ವಾಹನದಲ್ಲಿ ಮೆರವಣಿಗೆ ನಡೆಸಿರುವುದು ನಾಡಿನ ಹೋರಾಟಗಾರರಿಗೆ ಹಾಗೂ ಕನ್ನಡಿಗರಿಗೆ ಮಾಡಿದ ಅವಮಾನವಾಗಿದೆ ಎಂದು ಆರೋಪಿಸಿರುವ ಬಿಜೆಪಿ ಈ ಬಗ್ಗೆ ಸಚಿವರು ಕ್ಷಮೆಯಾಚಿಸಬೇಕಿದೆ ಎಂದು ಮಂಗಳೂರು ಕ್ಷೇತ್ರ ಅಧ್ಯಕ್ಷ ಸಂತೋಷ್ ರೈ ಬೋಳಿಯಾರ್ ಹೇಳಿರುವುದಾಗಿ ಕ್ಷೇತ್ರ ಮಾಧ್ಯಮ ಸಂಚಾಲಕ ಜೀವನ್ ಕುಮಾರ್ ತೊಕ್ಕೊಟ್ಟು ಪತ್ರಿಕಾ ಹೇಳಿಕೆ ನೀಡಿದ್ದಾರೆ.





