ಚಿಕ್ಕಮಗಳೂರು: ಟಿಪ್ಪು ಜಯಂತಿ ಪೂರ್ವ ಸಿದ್ಧತಾ ಸಭೆ

ಚಿಕ್ಕಮಗಳೂರು, ನ.3: ಜಿಲ್ಲಾಡಳಿತದ ವತಿಯಿಂದ ನ.10ರಂದು ಟಿಪ್ಪು ಸುಲ್ತಾನ್ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಜಿಲ್ಲಾಧಿಕಾರಿ ಎಂ.ಕೆ.ಶ್ರೀರಂಗಯ್ಯ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಶುಕ್ರವಾರ ತಮ್ಮ ಕಚೇರಿ ಸಭಾಂಗಣದಲ್ಲಿ ಟಿಪ್ಪುಸುಲ್ತಾನ್ ಜನ್ಮದಿನಾಚರಣೆ ಕುರಿತು ನಡೆದ ಪೂರ್ವಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಟಿಪ್ಪು ಸುಲ್ತಾನ್ ದಿನಾಚರಣೆಯನ್ನು ಜಿಲ್ಲಾಡಳಿತ ಹಾಗೂ ತಾಲೂಕು ಆಡಳಿತದ ಮೂಲಕ ನಡೆಸುವಂತೆ ಸರಕಾರ ಆದೇಶಿಸಿದೆ. ಅದರಂತೆ ಟಿಪು ಸುಲ್ತಾನ್ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಆಚರಿಸಲಾಗುವುದು ಎಂದರು.
ಸಭಾ ಕಾರ್ಯಕ್ರಮವು ನ.10ರಂದು ನಗರದ ಕುವೆಂಪು ಕಲಾಮಂದಿರದಲ್ಲಿ ಮಧ್ಯಾಹ್ನ 3 ಗಂಟೆಗೆ ನಡೆಯಲಿದೆ. ಸಭಾ ಕಾರ್ಯಕ್ರಮಕ್ಕೆ ಶಿಷ್ಟಾಚಾರದಂತೆ ಎಲ್ಲ ಜನಪ್ರತಿನಿಧಿಗಳು, ಗಣ್ಯರನ್ನು ಆಹ್ವಾನಿಸಲಾಗುವುದು ಎಂದು ಮಾಹಿತಿ ನೀಡಿದರು.
ಟಿಪ್ಪುಸುಲ್ತಾನ್ ಕುರಿತು ಉಪನ್ಯಾಸ ನೀಡಲು ಉತ್ತಮ ಉಪನ್ಯಾಸಕರನ್ನು ಆಹ್ವಾನಿಸುವಂತೆ ಜಿಲ್ಲಾಧಿಕಾರಿ ಅಧಿಕಾರಿಗಳಿಗೆ ತಿಳಿಸಿದರು.
ಎಸ್ಪಿ ಕೆ.ಅಣ್ಣಾಮಲೈ ಮಾತನಾಡಿ, ಸಾರ್ವಜನಿಕ ಸ್ಥಳಗಳಲ್ಲಿ ಬ್ಯಾನರ್ಸ್, ಬಟ್ಟಿಂಗ್ಸ್‌ಗಳನ್ನು ಹಾಕಬಾರದು. ಕಾರ್ಯಕ್ರಮ ಶಾಂತಿಯುತವಾಗಿ ನಡೆಯಬೇಕು. ಇದಕ್ಕೆ ಜನಾಂಗದ ಎಲ್ಲ ನಾಯಕರು ಸಹಕಾರ ನೀಡಬೇಕು. ಟಿಪ್ಪು ಜಯಂತಿಗೆ ಎಲ್ಲ ಜನಾಂಗದ ಜನರು ಆಗಮಿಸುವಂತೆ ಹೆಚ್ಚಿನ ಪ್ರಚಾರ ನೀಡಬೇಕು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಿದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಎಂ.ಎಲ್.ವೈಶಾಲಿ, ಪೊಲೀಸ್ ಉಪ ಅಧೀಕ್ಷಕ ಜಗದೀಶ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಮೇಶ್, ಹಿಂದುಳಿದ ವರ್ಗಗಳ ಇಲಾಖೆಯ ಅಧಿಕಾರಿ ಮಂಜುನಾಥ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸಂಘ ಸಂಸ್ಥೆಗಳ ಅಧ್ಯಕ್ಷರು, ಪದಾಧಿಕಾರಿಗಳು ಉಪಸ್ಥಿತರಿದ್ದರು.







