ನಾಳೆ ರಾಜ್‌ಕೋಟ್‌ನಲ್ಲಿ ದ್ವಿತೀಯ ಟ್ವೆಂಟಿ-20
► ಭಾರತಕ್ಕೆ ಸರಣಿ ಗೆಲುವಿನ ಕನಸು ► ಕಿವೀಸ್ ತಿರುಗೇಟು ನೀಡುವ ಸಂಕಲ್ಪ

ರಾಜ್‌ಕೋಟ್, ನ.3: ಭಾರತ ಮತ್ತು ನ್ಯೂಝಿಲೆಂಡ್ ತಂಡಗಳ ನಡುವೆ ಎರಡನೆ ಟ್ವೆಂಟಿ-20 ಅಂತಾರಾಷ್ಟ್ರೀಯ ಪಂದ್ಯ ರಾಜ್‌ಕೋಟ್‌ನಲ್ಲಿ ಶನಿವಾರ ನಡೆಯಲಿದೆ. ಮೊದಲ ಪಂದ್ಯದಲ್ಲಿ 53 ರನ್‌ಗಳ ಭರ್ಜರಿ ಜಯ ಗಳಿಸಿರುವ ಭಾರತ ಎರಡನೆ ಟ್ವೆಂಟಿ-20 ಪಂದ್ಯದಲ್ಲಿ ಗೆಲುವಿನ ಕನಸು ಕಾಣುತ್ತಿದೆ. ಆದರೆ ನ್ಯೂಝಿಲೆಂಡ್ ತಿರುಗೇಟು ನೋಡುವ ಯತ್ನದಲ್ಲಿದೆ. ಸೌರಾಷ್ಟ್ರ ಕ್ರಿಕೆಟ್ ಅಸೋಸಿಯೇಶನ್ ಸ್ಟೇಡಿಯಂನಲ್ಲಿ ನಡೆಯುವ ಪಂದ್ಯದಲ್ಲಿ ಭಾರತ ಗೆದ್ದರೆ ಮೂರು ಪಂದ್ಯಗಳ ಸರಣಿಯನ್ನು 2-0 ಅಂತರದಲ್ಲಿ ವಶಪಡಿಸಿಕೊಳ್ಳಲು ಸಾಧ್ಯವಾಗುತ್ತದೆ. ಕೊನೆಯ ಪಂದ್ಯ ನ.7ರಂದು ತಿರುವನಂತಪುರದಲ್ಲಿ ನಡೆಯಲಿದೆ.
ಉಪನಾಯಕ ರೋಹಿತ್ ಶರ್ಮ ಜೊತೆ ಶಿಖರ್ ಧವನ್ ಭಾರತದ ಇನಿಂಗ್ಸ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ. ಭುವನೇಶ್ವರ ಕುಮಾರ್ ಮತ್ತು ಜಸ್‌ಪ್ರೀತ್ ಬುಮ್ರಾ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಲಿದ್ದಾರೆ. ಶಿಖರ್ ಧವನ್, ರೋಹಿತ್ ಶರ್ಮ ಮತ್ತು ವಿರಾಟ್ ಕೊಹ್ಲಿ ಬ್ಯಾಟಿಂಗ್‌ನಲ್ಲಿ ದೊಡ್ಡ ಮೊತ್ತದ ಕೊಡುಗೆ ನೀಡಿದರೆ ಐಸಿಸಿ ಟ್ವೆಂಟಿ-20ಯಲ್ಲಿ ನಂ.1 ತಂಡವಾಗಿರುವ ನ್ಯೂಝಿಲೆಂಡ್ಗೆ ತಿರುಗೇಟು ನೀಡಲು ಕಷ್ಟ ಸಾಧ್ಯ.
ಧವನ್ ಮತ್ತು ಶರ್ಮ ಕಳೆದ ಪಂದ್ಯದಲ್ಲಿ 16 ಓವರ್‌ಗಳಲ್ಲಿ 158 ರನ್‌ಗಳ ಜೊತೆಯಾಟ ನೀಡಿದ್ದರು. ಇದರಿಂದಾಗಿ ಭಾರತ ನಿಗದಿತ 20 ಓವರ್‌ಗಳಲ್ಲಿ 203 ರನ್ ಗಳಿಸಿತ್ತು.
ಹೊಸ ಚೆಂಡಿನೊಂದಿಗೆ ದಾಳಿ ಆರಂಭಿಸಿದ್ದ ಟ್ರೆಂಟ್ ಬೌಲ್ಟ್ ಮತ್ತು ಟಿಮ್ ಸೌಥಿ ದಿಲ್ಲಿಯಲ್ಲಿ ಕೈ ಸುಟ್ಟುಕೊಂಡಿದ್ದರು. ಆದರೆ ಭಾರತದ ಬುಮ್ರಾ ಮತ್ತು ಭುವನೇಶ್ವರ ಕುಮಾರ್ ಯಶಸ್ಸು ಗಳಿಸಿದ್ದರು.ವಿರಾಟ್ ಕೊಹ್ಲಿ ತಂಡವನ್ನು ಯಶಸ್ವಿಯಾಗಿ ಮುನ್ನಡೆಸುತ್ತಿದ್ದಾರೆ. ಉತ್ತಮ ಫಾರ್ಮ್‌ನಲ್ಲಿರುವ ವೇಗವಾಗಿ ಟ್ವೆಂಟಿ-20 ಕ್ರಿಕೆಟ್‌ನಲ್ಲಿ 2,000 ರನ್‌ಗಳ ಮೈಲುಗಲ್ಲನ್ನು ಮುಟ್ಟಲು ನೋಡುತ್ತಿದ್ದಾರೆ. ಇನ್ನು ಅವರಿಗೆ ಈ ಸಾಧನೆಗೆ ಅವರಿಗೆ 122 ರನ್‌ಗಳ ಆವಶ್ಯಕತೆ ಇದೆ.
ಭಾರತದ ಅಗ್ರ ಸರದಿ ವಿಫಲಗೊಂಡರೆ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಂಡವನ್ನು ಆಧರಿಸುತ್ತಾರೆ. ನಿಧಾನಗತಿಯ ಬೌಲಿಂಗ್‌ನಲ್ಲಿ ಯಜುವೇಂದ್ರ ಚಹಾಲ್ ನ್ಯೂಝಿಲೆಂಡ್ ತಂಡವನ್ನು ಕಾಡುತ್ತಾರೆ.
ನೂಝಿಲೆಂಡ್‌ನ ದಾಂಡಿಗರು ಚಹಾಲ್ ದಾಳಿಯನ್ನು ಎದುರಿಸಲು ಪರದಾಡುತ್ತಿದ್ದಾರೆ.
ಎಡಗೈ ದಾಂಡಿಗ ಟಿಮ್ ಲಥಾಮ್ ಅವರು ಸ್ಪಿನ್ ದಾಳಿಯನ್ನು ಎದುರಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುಣೆಯಲ್ಲಿ ಈ ತನಕ ಎರಡು ಟ್ವೆಂಟಿ-20 ಪಂದ್ಯ ನಡೆದಿದೆ. ಇದು ಗುಜರಾತ್ ಲಯನ್ಸ್ ತಂಡದ ತವರಿನ ಕ್ರೀಡಾಂಗಣವಾಗಿದೆ. ಇಲ್ಲಿ ಅಕ್ಟೋಬರ್ 2013ರಲ್ಲಿ ನಡೆದ ಪಂದ್ಯದಲ್ಲಿ ಆಸ್ಟ್ರೇಲಿಯ ವಿರುದ್ಧ ಭಾರತ ಜಯ ಗಳಿಸಿತ್ತು. ಇದು ಇಲ್ಲಿ ಮೊದಲ ಟ್ವೆಂಟಿ -20 ಪಂದ್ಯವಾಗಿತ್ತು. ಇಲ್ಲಿ ಈ ವರೆಗೆ ನಡೆದ ಎರಡು ಏಕದಿನ ಪಂದ್ಯಗಳಲ್ಲಿ ಭಾರತ ಸೋಲು ಅನುಭವಿಸಿತ್ತು. 2013ರಲ್ಲಿ ಇಂಗ್ಲೆಂಡ್ ವಿರುದ್ಧ ಹಾಗೂ 2015ರಲ್ಲಿ ದಕ್ಷಿಣ ಆಫ್ರಿಕ ವಿರುದ್ಧ ಭಾರತ ಸೋಲು ಅನುಭವಿಸಿತ್ತು.







