ಮೂಡುಬಿದಿರೆಯಲ್ಲಿ ಕೇಂದ್ರ ಸಚಿವ ಜಿಗಜಿಣಗಿ: ಒಳಚರಂಡಿ ಯೋಜನೆ, ಹೈವೇ ವಿಚಾರ ಪರಿಶೀಲನೆಯ ಭರವಸೆ

ಮೂಡುಬಿದಿರೆ, ನ. 3: ಸುದೀರ್ಘ ಕಾಲದಿಂದ ನೆನೆಗುದಿಗೆ ಬಿದ್ದಿರುವ ಮೂಡುಬಿದಿರೆ ಒಳಚರಂಡಿ ಯೋಜನೆ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಅನುದಾನ ದೊರಕಿಸಿಕೊಡಲು ಹಾಗೂ ಮೂಡಬಿದಿರೆಯನ್ನು ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ (169) ನಿರ್ಮಾಣ ಯೋಜನೆಯನ್ನು ಅಂತಿಮಗೊಳಿಸುವ ಬಗ್ಗೆ ತಾವು ಕೂಡಲೇ ಪರಿಶೀಲನೆ ನಡೆಸುವುದಾಗಿ ಕೇಂದ್ರ ಕುಡಿಯುವ ನೀರು ಪೂರೈಕೆ ಮತ್ತು ಒಳಚರಂಡಿ ಖಾತೆಯ ರಾಜ್ಯ ಸಚಿವ ರಮೇಶ ಜಿಗಜಿಣಗಿ ಅವರು ಭರವಸೆ ನೀಡಿದರು.
ಉಡುಪಿ ಶ್ರೀ ಕೃಷ್ಣ ಮಠಕ್ಕೆ ಶುಕ್ರವಾರ ಭೇಟಿ ನೀಡಿದ್ದ ಅವರು ಸಂಜೆ ವೇಳೆಗೆ ಖಾಸಗಿ ಭೇಟಿಯಲ್ಲಿ ಮೂಡುಬಿದಿರೆಗೆ ಆಗಮಿಸಿ ರಾಜ್ಯದ ಮಾಜಿ ಸಚಿವ ಕೆ. ಅಮರನಾಥ ಶೆಟ್ಟಿ ಅವರನ್ನು ಗಾಂಧೀನಗರದಲ್ಲಿನ ‘ಆಶ್ರಿತಾ’ ನಿವಾಸದಲ್ಲಿ ಭೇಟಿಯಾದರು. ಈ ಸಂದರ್ಭದಲ್ಲಿ ಅಮರನಾಥ ಶೆಟ್ಟಿಯವರು ಮೂಡುಬಿದಿರೆಯ ಒಳಚರಂಡಿ ಸಮಸ್ಯೆ ಹಾಗೂ ರಾ.ಹೆ. ನಿರ್ಮಾಣದ ಬಗ್ಗೆ ಜಿಗಜಿಣಗಿ ಗಮನ ಸೆಳೆದರು. ಈ ಬಗ್ಗೆ ಪೂರ್ಣ ಮಾಹಿತಿಯುಳ್ಳ ಕಡತಗಳನ್ನು ತಾವು ಪರಿಶೀಲಿಸುವುದಾಗಿ ಜಿಗಜಿಣಗಿ ಹೇಳಿದರು.
ರಾಮಕೃಷ್ಣ ಹೆಗಡೆ ಸರಕಾರದಲ್ಲಿ ಅಮರನಾಥ ಶೆಟ್ಟಿ ಧಾರ್ಮಿಕ ದತ್ತಿ ಸಚಿವರಾಗಿದ್ದ ವೇಳಗೆ ರಮೇಶ ಜಿಗಜಿಣಗಿ ಕಂದಾಯ ಸಚಿವರಾಗಿದ್ದು ಸ್ನೇಹಿತರಾಗಿರುವ ನೆಲೆಯಲ್ಲಿ ಪರಸ್ಪರ ಕುಶಲೋಪರಿ ನಡೆಸಿದರು. ಸಚಿವರು ಬಳಿಕ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ, ಅಮರನಾಥ ಶೆಟ್ಟಿ ಅವರು ಅಧ್ಯಕ್ಷರಾಗಿರುವ, 102ನೇ ವರ್ಷದಲ್ಲಿ ಮುನ್ನಡೆಯುತ್ತಿರುವ ಮೂಡಬಿದಿರೆ ಕೋಆಪರೇಟಿವ್ ಬ್ಯಾಂಕ್‌ಗೆ ಭೇಟಿ ನೀಡಿ ಬ್ಯಾಂಕಿನ ಬೆಳವಣಿಗೆಗಳ ಬಗ್ಗೆ ಶ್ಲಾಘನೆ ವ್ಯಕ್ತಪಡಿಸಿದರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಕೆ.ಪಿ. ಜಗದೀಶ ಅಧಿಕಾರಿ, ಜೆಡಿಎಸ್ ಕ್ಷೇತ್ರಾಧ್ಯಕ್ಷ ಅಶ್ವಿನ್ ಜೆ. ಪಿರೇರಾ, ಪ್ರಮುಖರಾದ ದಿವಾಕರ ಶೆಟ್ಟಿ ತೋಡಾರು, ಪ್ರಥ್ವೀರಾಜ್ ಶೆಟ್ಟಿ ಮೊದಲಾದವರು ಉಪಸ್ಥಿತರಿದ್ದರು.







