ರಣಜಿ: ಕರ್ನಾಟಕಕ್ಕೆ ಮೊದಲ ಇನಿಂಗ್ಸ್ ಮುನ್ನಡೆ
► ಮಾಯಾಂಕ್ ಚೊಚ್ಚಲ ► ತ್ರಿಶತಕ ಕರುಣ್ ನಾಯರ್ ಶತಕ

ಪುಣೆ, ನ.3: ಆರಂಭಿಕ ಬ್ಯಾಟ್ಸ್‌ಮನ್ ಮಾಯಾಂಕ್ ಅಗರವಾಲ್ ಚೊಚ್ಚಲ ತ್ರಿಶತಕ (ಅಜೇಯ 304) ಹಾಗೂ ಕರುಣ್ ನಾಯರ್ ಶತಕದ(116) ನೆರವಿನಿಂದ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ ರಣಜಿ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಸಾಧಿಸಿದೆ.
ಕರ್ನಾಟಕ ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ನಷ್ಟಕ್ಕೆ 628 ರನ್ ಗಳಿಸಿ ಇನಿಂಗ್ಸ್ ಡಿಕ್ಲೇರ್ ಮಾಡಿಕೊಂಡಿತು. ಮೊದಲ ಇನಿಂಗ್ಸ್ ನಲ್ಲಿ ಒಟ್ಟು 383 ರನ್ ಮುನ್ನಡೆ ಪಡೆಯಿತು.
ಎಂಸಿಎ ಸ್ಟೇಡಿಯಂನಲ್ಲಿ ಶುಕ್ರವಾರ ಕರ್ನಾಟಕ 2 ವಿಕೆಟ್‌ಗೆ 461 ರನ್‌ನಿಂದ ಇನಿಂಗ್ಸ್ ಮುಂದುವರಿಸಿತು. 219 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಮಾಯಾಂಕ್ 494 ಎಸೆತಗಳನ್ನು ಎದುರಿಸಿ 28 ಬೌಂಡರಿ ಹಾಗೂ 4 ಸಿಕ್ಸರ್‌ಗಳ ಸಹಿತ ಅಜೇಯ 304 ರನ್ ಗಳಿಸಿ ತಂಡದ ಬೃಹತ್ ಮೊತ್ತಕ್ಕೆ ಕಾರಣರಾದರು.
ಗುರುವಾರ ಆರ್.ಸಮರ್ಥ್(129) ಅವರೊಂದಿಗೆ ಮೊದಲ ವಿಕೆಟ್‌ಗೆ 259 ರನ್ ಜೊತೆಯಾಟ ನಡೆಸಿದ್ದ ಮಾಯಾಂಕ್ ಇಂದು 56 ರನ್‌ನಿಂದ ಬ್ಯಾಟಿಂಗ್ ಆರಂಭಿಸಿದ ಕರುಣ್ ನಾಯರ್(116ರನ್, 256 ಎಸೆತ, 13 ಬೌಂಡರಿ)ಅವರೊಂದಿಗೆ 3ನೆ ವಿಕೆಟ್‌ಗೆ 279 ರನ್ ಜೊತೆಯಾಟದಲ್ಲಿ ಭಾಗಿಯಾದರು. ಈ ಜೋಡಿ ಬೇರ್ಪಟ್ಟ ತಕ್ಷಣ ಕರ್ನಾಟಕ ಮೊದಲ ಇನಿಂಗ್ಸ್‌ನ್ನು ಡಿಕ್ಲೇರ್ ಮಾಡಿಕೊಂಡಿತು. ಮಹಾರಾಷ್ಟ್ರದ ಪರ ಚಿರಾಗ್ ಖುರಾನ ಯಶಸ್ವಿ ಬೌಲರ್(3-147) ಎನಿಸಿಕೊಂಡರು. ಸ್ವಪ್ನಿಲ್ ಹಾಗೂ ನೌಶಾದ್ ತಲಾ ಒಂದು ವಿಕೆಟ್ ಪಡೆದರು. ಕರ್ನಾಟಕ ತಂಡಕ್ಕೆ ಮೊದಲ ಇನಿಂಗ್ಸ್‌ನಲ್ಲಿ ಭಾರೀ ಮುನ್ನಡೆ ಬಿಟ್ಟುಕೊಟ್ಟಿರುವ ಮಹಾರಾಷ್ಟ್ರ 2ನೆ ಇನಿಂಗ್ಸ್ ಆರಂಭಿಸಿದ್ದು, 37 ಓವರ್‌ಗಳಲ್ಲಿ 4 ವಿಕೆಟ್‌ಗಳ ನಷ್ಟಕ್ಕೆ 135 ರನ್ ಗಳಿಸಿದೆ. ಕರ್ನಾಟಕದ ಮಧ್ಯಮ ವೇಗದ ಬೌಲರ್ ಮಿಥುನ್ ಮಹಾರಾಷ್ಟ್ರದ ಆರಂಭಿಕ ಆಟಗಾರರಾದ ಸ್ವಪ್ನಿಲ್(0) ಹಾಗೂ ಹರ್ಷದ್(19)ರನ್ನು ಪೆವಿಲಿಯನ್‌ಗೆ ಅಟ್ಟಿದರು. ಋತುರಾಜ್ ಗಾಯಕ್ವಾಡ್(ಅಜೇಯ 61) ಹಾಗೂ ಮೊದಲ ಇನಿಂಗ್ಸ್‌ನಲ್ಲಿ ಶತಕ ಸಿಡಿಸಿರುವ ರಾಹುಲ್ ತ್ರಿಪಾಠಿ(ಅಜೇಯ 33)5ನೆ ವಿಕೆಟ್‌ಗೆ 49 ರನ್ ಜೊತೆಯಾಟ ನಡೆಸಿ ತಂಡವನ್ನು ಆಧರಿಸಿದರು.







