ರಾಜ್ಯದಲ್ಲಿ ಕಾನೂನು-ಸುವ್ಯವಸ್ಥೆ ಹದಗೆಟ್ಟಿದೆ: ಈಶ್ವರಪ್ಪ

ತುಮಕೂರು, ನ.3: ರಾಜ್ಯದಲ್ಲಿ ಕಾನೂನನ್ನು ಕೈಗೆತ್ತಿಕೊಳ್ಳುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿಕೆ ನೀಡಿದ್ದಾರೆ. ಆದರೆ, ರಾಜ್ಯದಲ್ಲಿ ಕಾನೂನು ಇದೇಯೇ ಎಂಬ ಪ್ರಶ್ನೆಯನ್ನು ನಾನು ಮುಖ್ಯಮಂತ್ರಿಗಳನ್ನು ಕೇಳುತ್ತಿದ್ದೇನೆ ಎಂದು ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜಿಲ್ಲೆಯ ತುರುವೇಕೆರೆ ಪಟ್ಟಣದಲ್ಲಿ ಬಿಜೆಪಿ ಆಯೋಜಿಸಿದ್ದ ಪರಿವರ್ತನಾ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡುತಿದ್ದ ಅವರು, ರಾಜ್ಯದಲ್ಲಿ ಸಾವಿರಾರು ಅಕ್ರಮ ಕಸಾಯಿಖಾನೆಗಳು ಯಾವ ಕಾನೂನಿನ ಭಯವಿಲ್ಲದೆ ನಡೆಯುತ್ತಿದೆ. ಪತ್ರಕರ್ತರಾದ ಗೌರಿಲಂಕೇಶ್ ಅವರ ಹತ್ಯೆ ನಡೆದು ಎರಡು ತಿಂಗಳು ನಡೆದರೂ ಆರೋಪಿಗಳನ್ನು ಪತ್ತೆ ಹಚ್ಚಿಲ್ಲ. ಸಿಬಿಐ ದೋಷಾರೋಪಣ ಪಟ್ಟಿಯಲ್ಲಿ ಸಚಿವ ಜಾರ್ಜ್ ಹೆಸರಿದ್ದರೂ ಅವರಿಂದ ರಾಜೀನಾಮೆ ಪಡೆದಿಲ್ಲ.ರಾಜ್ಯದಲ್ಲಿ ಕಾನೂನು, ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಇದಕ್ಕಿಂತ ಉದಾಹರಣೆಗಳು ಬೇಕೆ ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಸೋಕ್ಕಿನಿಂದ ಪ್ರಧಾನಿಗೆ ನನ್ನನ್ನು ಕಂಡರೆ ಭಯ ಎಂದು ಹೇಳುತ್ತಾರೆ. ಇರುವೇ ಕಂಡು ಎಂದಾದರೂ ಆನೆ ಭಯಪಟ್ಟಿದ್ದು ಉಂಟೇ ಎಂದ ಅವರು, ಎರಡು ಸಾವಿರ ಪಾಕಿಸ್ತಾನ ಸೈನಿಕರ ಹುಟ್ಟು ಹಡಗಿಸಿದ ಕೀರ್ತೀ ಪ್ರಧಾನಿಯವರಿಗೆ ಸಲ್ಲಸಬೇಕು. ರಾಜ್ಯದಲ್ಲಿ ಲಿಂಗಾಯತರು, ವೀರಶೈವರ ನಡುವೆ ಜಗಳ ತಂದಿಟ್ಟು ಅದರ ಲಾಭ ಪಡೆಯಲು ನೋಡುತ್ತಿದ್ದಾರೆ. ಇದಕ್ಕೆ ಎಂದಿಗೂ ಬಿಜೆಪಿ ಅವಕಾಶ ನೀಡದು ಎಂದು ನುಡಿದರು.
ಬಳ್ಳಾರಿ ಗ್ರಾಮಾಂತರ ಸಂಸದ ಶ್ರೀರಾಮುಲು ಮಾತನಾಡಿ, ರಾಜ್ಯದಲ್ಲಿ ಅಧಿಕಾರದಲ್ಲಿರುವ ಕಾಂಗ್ರೆಸ್ ಸರಕಾರದಿಂದ ಜನರಿಗೆ ಯಾವುದೇ ಪ್ರಯೋಜನವಾಗಿಲ್ಲ. ಮಳೆಯಾಗದಿದ್ದರೆ ಇಷ್ಟು ಹೊತ್ತಿಗೆ ಜನರು ದಂಗೆ ಏಳುತ್ತಿದ್ದರು. ಸಚಿವರು, ಶಾಸಕರು ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡು ಅಕ್ರಮ ಮರಳು ದಂಧೆಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದರು.
ಸಂಸದೆ ಹಾಗೂ ಪರಿವರ್ತನಾ ರ್ಯಾಲಿಯ ಸಂಚಾಲಕಿ ಶೋಭಾ ಕರಂದ್ಲಾಜೆ ಮಾತನಾಡಿ, ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಸಾಧ್ಯವಾಗದೆ ಜೆಡಿಎಸ್ ಕಾಂಗ್ರೆಸ್‍ನೊಂದಿಗೆ ಮೈತ್ರಿ ಮಾಡಿಕೊಂಡು ಬಿಬಿಎಂಪಿಯಲ್ಲಿ ಅಧಿಕಾರ ಹಿಡಿದಂತೆ ರಾಜ್ಯದಲ್ಲಿಯೂ ಅಧಿಕಾರ ಹಿಡಿಯುವ ಕನಸು ಕಾಣುತ್ತಿದೆ. ಪರಿವರ್ತನಾ ರ್ಯಾಲಿ ಹೊರಡುತ್ತಿದ್ದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಕುರ್ಚಿಯ ಭಯ ಎದುರಾಗಿದೆ. ಕೆಲ ಕಡೆಗಳಲ್ಲಿ ರ್ಯಾಲಿಗೆ ಅನುಮತಿ ನೀಡಲು ನಿರಾಕರಿಸುವ ಮೂಲಕ ತೊಂದರೆ ನೀಡುತ್ತಿದ್ದಾರೆ. ಮುಖ್ಯಮಂತ್ರಿಗೆ ನಿಜಕ್ಕೂ ಪ್ರಜಾಪ್ರಭುತ್ವದ ಮೇಲೆ ನಂಬಿಕೆ ಇದ್ದರೆ ಕೂಡಲೇ ಪ್ರಜಾತಂತ್ರವಾಗಿ ನಡೆದುಕೊಳ್ಳಲಿ ಎಂದರು.
ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಮಾತನಾಡಿ, ಜೆಡಿಎಸ್‍ಗೆ ಇದು ಕೊನೆಯ ಚುನಾವಣೆ,ಇವರಲ್ಲಿ ಒಳಒಪ್ಪಂದ ಹೆಚ್ಚು. ಇನ್ನೂ ಕಾಂಗ್ರೆಸ್ ಮುಳುಗುವ ಹಡಗು ಇವರನ್ನು ನಂಬಿಕೆ ಜೆಡಿಎಸ್ ಅಧಿಕಾರಕ್ಕೆ ಬರಲು ಸಾಧ್ಯವಿಲ್ಲ.ಕಾಂಗ್ರೆಸ್ ಪಕ್ಷದಲ್ಲಿ ಅಧಿಕಾರಕ್ಕಾಗಿ ಹಲವು ಗುಂಪುಗಳ ನಡುವೆ ಕಿತ್ತಾಟವಿದೆ.ಇದನ್ನು ಸರಿ ಮಾಡುವುದರಲ್ಲಿಯೇ ಕಾಲ ಕಳೆದು ಹೋಗಲಿದೆ. ಹಾಗಾಗಿ ಜನರು ಬಿಜೆಪಿಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮಾನಸಿಕ ಸ್ಥಿಮಿತತೆ ಕಳೆದು ಕೊಂಡವರಂತೆ ಮಾತನಾಡುತ್ತಿದ್ದಾರೆ. ಅವರಿಗೆ ಅಧಿಕಾರ ನೆತ್ತಿಗೆ ಹತ್ತಿದೆ.ಹಿಂದುತ್ವದ ಹೆಸರಿನಲ್ಲಿ ಬಿಜೆಪಿ ಸಮಾಜದ ಸ್ವಾಸ್ಥ್ಯ ಹಾಳು ಮಾಡುತ್ತಿದ್ದಾರೆ ಎನ್ನುವ ಸಿದ್ದರಾಮಯ್ಯ ಲಿಂಗಾಯತರು ಮತ್ತು ವೀರಶೈವರ ನಡುವೆ ಪ್ರತ್ಯೇಕ ಧರ್ಮದ ಜಗಳ ತಂದಿಟ್ಟಿದ್ದಾದರೂ ಏಕೆ ಎಂದು ಪ್ರಶ್ನಿಸಿದ ಅವರು, ಪರಿವರ್ತನೆ ಆಗಬೇಕಿರುವುದು ಬಿಜೆಪಿಯಲ್ಲ, ಕಾಂಗ್ರೆಸ್ ಎಂದರು.
ಕಾರ್ಯಕ್ರಮದಲ್ಲಿ ನಟ ಜಗ್ಗೇಶ್, ಮುಖಂಡರಾದ ಮಸಾಲೆ ಜಯರಾಂ, ಬಿ.ಸಿ.ನಾಗೇಶ್ ಸೇರಿದಂತೆ ಹಲವರು ಪರಿವರ್ತನಾ ರ್ಯಾಲಿಯಲ್ಲಿ ಪಾಲ್ಗೊಂಡಿದ್ದರು.







