ಸುಲಿಗೆ ತಪ್ಪಿಸಲು ವಿಧೇಯಕ ಅನಿವಾರ್ಯ: ಸಚಿವ ರಮೇಶ್

ಕೋಲಾರ, ನ.3: ಖಾಸಗಿ ವೈದ್ಯರು ರೋಗಿಗಳನ್ನು ಸುಲಿಗೆ ಮಾಡುತ್ತಿದ್ದಾರೆ. ರೋಗಿಗಳ ಸುಲಿಗೆಯನ್ನು ತಪ್ಪಿಸಲು ಸರಕಾರ ಖಾಸಗಿ ವೈದ್ಯರ ವಿಧೇಯಕಕ್ಕೆ ತಿದ್ದುಪಡಿ ತಂದಿದೆ. ತಿದ್ದುಪಡಿ ತರುವ ಮೊದಲು ಖಾಸಗಿ ವೈದ್ಯರೊಂದಿಗೆ ಚರ್ಚೆ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ರಮೇಶ್‌ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ವಿಧೆಯಕದ ಬಗ್ಗೆ ಚರ್ಚೆ ನಡೆಸಲು ಎರಡು ವಾರಗಳ ಗಡವು ನೀಡುವ ಅವಕಾಶವಿದೆ. ಆದರೆ 12 ತಿಂಗಳ ಕಾಲ ಗಡವು ನೀಡಲಾಗಿತ್ತು. ವೈದ್ಯರೊಂದಿಗೆ ಚರ್ಚೆ ಮಾಡಿದ ನಂತರವೆ ವಿಧೇಯಕ ಮಂಡಿಸಲಾಯಿತು. ಮುಖ್ಯಮಂತ್ರಿಯೂ ವೈದ್ಯರೊಂದಿಗೆ ಚರ್ಚೆ ನಡೆಸಿದ್ದು, ಖಾಸಗಿ ವೈದ್ಯರು ಮುಷ್ಕರ ಮಾಡುತ್ತಿರುವುದರ ಹಿಂದೆ ಸಾರ್ವಜನಿಕ ಹಿತಾಸಕ್ತಿಯಿಲ್ಲ ಎಂದರು.
ಅವರ ಕೆಲಸ ಅವರದ್ದು, ನಮ್ಮ ಕೆಲಸ ನಮ್ಮದು, ಮುಷ್ಕರ ಮಾಡುವುದು ಅವರ ಸಂಘಟನೆಯ ತೀರ್ಮಾನವಾಗಿದೆ.ಪ್ರಜಾಪ್ರಭುತ್ವದಲ್ಲಿ ಯಾರೂ ಬೇಕಾದರು ಪ್ರತಿಭಟನೆ ಮಾಡಬಹುದು. ಖಾಸಗಿ ವೈದ್ಯರು ಬಂಡವಾಳ ಹಾಕಿದ್ದಾರೆ, ಇದರಿಂದ ಮುಷ್ಕರ ನಡೆಸುತ್ತಿದ್ದಾರೆ. ಜನರ ಆರೋಗ್ಯದ ಕಡೆ ಸರಕಾರ ಗಮನ ಹರಿಸಬೇಕಿದೆ. ವೈದ್ಯಕೀಯ ಸೇವೆ ಬೇಕು ಎನ್ನುವವರು ಲಕ್ಷಾಂತರ ಮಂದಿ ಇದ್ದಾರೆ. ಆದರೆ ಅವರ್ಯಾರು ಮುಷ್ಕರ ಮಾಡುವುದಿಲ್ಲ. ಎಲ್ಲದಕ್ಕೂ ವಿಧಾನಸಭೆಯಲ್ಲಿ ಉತ್ತರಿಸಲಾಗುವುದು ಮುಷ್ಕರ ಕೈಗೊಂಡಿರುವ ಖಾಸಗಿ ಆಸ್ಪತ್ರೆಗಳ ವೈದ್ಯರಿಗೆ ಪರೋಕ್ಷವಾಗಿ ಸಚಿವರು ಎಚ್ಚರಿಕೆ ನೀಡಿದ್ದಾರೆ.







