ಚುನಾವಣೆಯಲ್ಲಿ ಸ್ಪರ್ಧಿಸಲು ರಾಜಕೀಯ ಪಕ್ಷವಾದ ಪ್ರಿಸ್ಮ್

ಐಜ್ವಾಲ್,ನ.4: ಇಲ್ಲಿಯ ‘ಪೀಪಲ್ಸ್ ರೈಟ್ ಟು ಇನ್‌ಫಾರ್ಮೇಷನ್ ಆ್ಯಂಡ್ ಡೆವಲಪ್‌ಮೆಂಟ್ ಇಂಪ್ಲಿಮೆಂಟೇಷನ್ ಸೊಸೈಟಿ ಆಫ್ ಮಿಜೋರಾಮ್(ಪ್ರಿಸ್ಮ್)’ ಸಂಘಟನೆಯನ್ನು ಶನಿವಾರ ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸಲಾಗಿದೆ.
ರಾಜಕೀಯ ಪಕ್ಷವಾಗಿ ಪರಿವರ್ತನೆಗೊಂಡ ಬಳಿಕ ಸಂಘಟನೆಗೆ ‘ಪೀಪಲ್ಸ್ ರೆಪ್ರೆಸೆಂಟೇಷನ್ ಫಾರ್ ಐಡೆಂಟಿಟಿ ಆ್ಯಂಡ್ ಸ್ಟೇಟಸ್ ಆಫ್ ಮಿಜೋರಾಮ್’ ಎಂದು ಮರುನಾಮಕರಣ ಮಾಡಲಾಗಿದ್ದು, ಪ್ರಿಸ್ಮ್ ಎಂಬ ಸಂಕ್ಷಿಪ್ತ ಹೆಸರನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ ಎಂದು ನೂತನ ಪಕ್ಷದ ಅಧ್ಯಕ್ಷ ವನ್ಲಾಲ್ರುತಾ ತಿಳಿಸಿದರು.
ಮಿಜೋರಾಮ್‌ನಲ್ಲಿಯ ರಾಜಕೀಯ ವ್ಯವಸ್ಥೆಯಲ್ಲಿ ಬದಲಾವಣೆ, ಭ್ರಷ್ಟಾಚಾರದ ಮೂಲೋಚ್ಚಾಟನೆ ಮತ್ತು ದಕ್ಷ ಆಡಳಿತ ಭರವಸೆ ಪ್ರಿಸ್ಮ್‌ನ ಮುಖ್ಯ ಗುರಿಯಾಗಿವೆ ಎಂದು ಹೇಳಿದ ಅವರು, ವ್ಯವಸ್ಥೆಯನ್ನು ಬದಲಿಸಲು ಮತ್ತು ಭ್ರಷ್ಟಾಚಾರವನ್ನು ತೊಲಗಿಸಲು ನಾವು ರಾಜಕೀಯ ಶಕ್ತಿಯನ್ನು ಗಳಿಸಿಕೊಳ್ಳಬೇಕಾಗಿದೆ ಎಂದು ಹೇಳುವ ಮೂಲಕ ಪ್ರಿಸ್ಮ್‌ನ್ನು ರಾಜಕೀಯ ಪಕ್ಷವನ್ನಾಗಿ ಪರಿವರ್ತಿಸುವ ನಿರ್ಧಾರವನ್ನು ಸಮರ್ಥಿಸಿ ಕೊಂಡರು.
40 ಸದಸ್ಯಬಲದ ಮಿಜೋರಾಮ್ ವಿಧಾನಸಭೆಗೆ ಮುಂದಿನ ವರ್ಷ ನಡೆಯಲಿರುವ ಚುನಾವಣೆಯಲ್ಲಿ ಪ್ರಿಸ್ಮ್ ಸ್ಪರ್ಧಿಸಲಿದೆ ಎಂದು ಅವರು ತಿಳಿಸಿದರು.







