ಕಮಲ್ ಹಾಸನ್ ರನ್ನು ಗುಂಡಿಕ್ಕಿ ಸಾಯಿಸಬೇಕು: ಅಖಿಲ ಭಾರತೀಯ ಹಿಂದೂ ಮಹಾಸಭಾ

ಮೀರತ್, ನ.4: ನಟ ಕಮಲ್ ಹಾಸನ್ ಮತ್ತು ಅವರಂತಹ ಜನರನ್ನು 'ಗುಂಡಿಕ್ಕಿ ಸಾಯಿಸಬೇಕು' ಎಂದು ಅಖಿಲ ಭಾರತೀಯ ಹಿಂದೂ ಮಹಾಸಭಾ ಹೇಳಿದೆ. ಕೇಸರಿ ಪಡೆಗಳು ಚರ್ಚೆಯನ್ನು ನಡೆಸುವ ಬದಲು ಉಗ್ರವಾದ ನೀತಿಯನ್ನು ಅನುಸರಿಸುತ್ತಿವೆ. ಆದ್ದರಿಂದ ಹಿಂದೂ ಭಯೋತ್ಪಾದನೆ ಇಲ್ಲ ಎನ್ನಲಾಗದು ಎಂದು ಕಮಲ್ ಹಾಸನ್ ಹೇಳಿದ ದಿನಗಳ ನಂತರ ಈ ಬೆದರಿಕೆ ಬಂದಿದೆ.
"ಕಮಲ್ ಹಾಸನ್ ಮತ್ತು ಅವರಂತಹವರನ್ನು ಒಂದೋ ಗುಂಡಿಕ್ಕಿ ಸಾಯಿಸಬೇಕು ಇಲ್ಲವೇ ನೇಣಿಗೇರಿಸಿ ಅವರಿಗೆ ಪಾಠ ಕಲಿಸಬೇಕು. ಹಿಂದೂ ಧರ್ಮಕ್ಕೆ ಸೇರಿದ ಜನರ ವಿರುದ್ಧ ನಿಂದನಾತ್ಮಕ ಭಾಷೆಯನ್ನು ಉಪಯೋಗಿಸುವವರಿಗೆ ಈ ಪವಿತ್ರ ಭೂಮಿಯಲ್ಲಿ ಜೀವಿಸುವ ಹಕ್ಕಿಲ್ಲ, ಅವರ ಹೇಳಿಕೆಗಳಿಗೆ ಅವರಿಗೆ ಸಾವು ದೊರೆಯಬೇಕು'' ಎಂದು ಮಹಾಸಭಾದ ರಾಷ್ಟ್ರೀಯ ಉಪಾಧ್ಯಕ್ಷ ಪಂಡಿತ್ ಅಶೋಕ್ ಶರ್ಮ ಹೇಳಿದ್ದಾರೆ.
ಅತ್ತ ಮಹಾಸಭಾದ ಮೀರತ್ ಘಟಕದ ಅಧ್ಯಕ್ಷ ಅಭಿಷೇಕ್ ಅಗರ್ವಾಲ್ ಮಾತನಾಡುತ್ತಾ "ಕಮಲ್ ಮತ್ತವರ ಕುಟುಂಬ ಸದಸ್ಯರ ಚಲನಚಿತ್ರಗಳನ್ನು ಬಹಿಷ್ಕರಿಸಬೇಕೆಂದು ಎಲ್ಲಾ ಸದಸ್ಯರು ಪ್ರಮಾಣ ಮಾಡಿದ್ದಾರೆ. ಎಲ್ಲಾ ಭಾರತೀಯರೂ ಹೀಗೆಯೇ ಪ್ರಮಾಣ ಮಾಡಬೇಕು. ಹಿಂದೂಗಳು ಮತ್ತವರ ಧರ್ಮವನ್ನು ಅವಮಾನಿಸುವ ಜನರನ್ನು ಕ್ಷಮಿಸಬಾರದು'' ಎಂದು ಹೇಳಿದ್ದಾರೆ.





