ಬಹುತ್ವ ಗೌರವಿಸುವವರೆಲ್ಲರೂ ಸಿಖ್ಖರೇ: ಚಿರಂಜೀವಿ ಸಿಂಗ್
ಬೆಂಗಳೂರು, ನ.4: ದೇಶದ ಬಹುತ್ವವನ್ನು ಗೌರವಿಸುವವರು ಹಾಗೂ ‘ಗುರುಬಾನಿ’ಯನ್ನು ಓದುವವರೆಲ್ಲರೂ ಸಿಖ್ಖರೇ ಆಗಿದ್ದಾರೆ ಎಂದು ಸಂಸ್ಕೃತಿ ಚಿಂತಕ ಚಿರಂಜೀವಿ ಸಿಂಗ್ ಹೇಳಿದ್ದಾರೆ.
ಶನಿವಾರ ಅಭಿನವ ಪ್ರಕಾಶನ ನಗರದ ಕನ್ನಡ ಸಾಹಿತ್ಯ ಪರಿಷತ್‌ನಲ್ಲಿ ಆಯೋಜಿಸಿದ್ದ ಲೇಖಕ ಎಸ್.ಸೀತಾರಾಮುರವರ ‘ಸದ್ಗುರು ನಾನಕ್ ದೇವ್’ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಅವರು, ‘ಸಿಖ್ಖ್’ ಎಂದರೆ ಗುರುವಿನ ಶಿಷ್ಯ ಎಂದಾರ್ಥ. ಹೀಗಾಗಿ ಗುರುನಾನಕ್ ಚಿಂತನೆಗಳನ್ನು ಒಳಗೊಂಡಿರುವ ‘ಗುರುಬಾನಿ’ ಓದುವವರೆಲ್ಲರೂ ಸಿಖ್ಖರು ಎಂದು ತಿಳಿಸಿದರು.
ಪ್ರಸ್ತುತ ದಿನಗಳಲ್ಲಿ ಸಿಖ್ಖ್ ಧರ್ಮಕ್ಕೆ ಸಂಬಂಧಿಸಿದ ವಿಚಾರಗಳು ಕನ್ನಡ ಜನತೆಗೆ ತಿಳಿಯಬೇಕಾಗಿದೆ. ಮುಖ್ಯವಾಗಿ ಗುರುನಾನಕ್‌ರ ಜೀವನಗಾಥೆ, ಗುರುಬಾನಿ ಹಾಗೂ ಗುರುನಾನಕ್‌ರ ಶಿಷ್ಯರಿಗೆ ಸಂಬಂಧಿಸಿದ ಪುಸ್ತಕಗಳು ಕನ್ನಡಕ್ಕೆ ಅನುವಾದಗೊಳ್ಳಬೇಕಾಗಿದೆ. ಹಂಪಿ ವಿಶ್ವವಿದ್ಯಾನಿಲಯದಿಂದ ಅನುವಾದ ಕಾರ್ಯ ಆಗುತ್ತದೆ ಎಂದು ಬಯಸಿದ್ದೇನೆ ಎಂದು ವಿವರಿಸಿದರು.
ಹಿರಿಯ ವಿಮರ್ಶಕ ಸಿ.ಎನ್.ರಾಮಚಂದ್ರನ್ ಮಾತನಾಡಿ, ಭಾರತ ಬಹು ಧರ್ಮಗಳ, ಬಹು ತತ್ವಗಳ ನಾಡೆಂಬುದು ನಿಜವೇ. ಆದರೆ, ಬಹುತ್ವಕ್ಕೆ ಹೆಚ್ಚಿನ ಅರ್ಥ ಬರುವುದು ಭಿನ್ನ, ಭಿನ್ನ ಧರ್ಮಗಳ, ಸಂಸ್ಕೃತಿಗಳ ಆಚಾರ, ವಿಚಾರಗಳನ್ನು ಪ್ರತಿಯೊಬ್ಬರು ಪರಿಸ್ಪರ ಅರಿತಾಗಲೇ ಎಂದರು.
ಗುರುನಾನಕ್ ಕುರಿತು ಪುಸ್ತಕಗಳು ಕನ್ನಡದಲ್ಲಿ ಬಂದಿವೆ. ಭಕ್ತಿ ಪಂಥದ ಕುರಿತು ಬರೆದಿರುವ ಕೃತಿಕಾರರು ಗುರುನಾನಕ್ ಬಗೆಗೂ ಬೆಳಕು ಚೆಲ್ಲಿದ್ದಾರೆ. ಆದರೆ, ಗುರುನಾನಕ್‌ರ ಬಾಲ್ಯದಿಂದ ಪ್ರಾರಂಭಗೊಂಡು ತಮ್ಮದೇ ತತ್ವಗಳನ್ನೊಳಗೊಂಡ ಧರ್ಮವನ್ನು ಸ್ಥಾಪಿಸಿ ದೇಶ-ವಿದೇಶಗಳಲ್ಲಿ ಪ್ರಚಾರ ಮಾಡಿರುವ ಅನನ್ಯ ಅನುಭವಗಳು ‘ಸದ್ಗುರು ನಾನಕ್ ದೇವ್’ ಕೃತಿಯಲ್ಲಿ ಸವಿವರವಾಗಿ ದಾಖಲಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಕೃತಿಕಾರ ಎಸ್.ಸೀತಾರಾಮು ಉಪಸ್ಥಿತರಿದ್ದರು.
'ಸಿಖ್ಖ್-ವಚನಗಳ ನಡುವೆ ಸಾಮ್ಯತೆ'
ಸಿಖ್ಖ್, ಬೌದ್ಧ ಹಾಗೂ ಲಿಂಗಾಯತ ಧರ್ಮಗಳ ನಡುವೆ ಅನೇಕ ಸಾಮ್ಯತೆಗಳಿವೆ. ಗುರುನಾನಕ್‌ರ ಜೀವನ ವೃತ್ತಾಂತಕ್ಕೂ ಬುದ್ಧನ ಜೀವನಗಾಥೆಗೂ ಹೋಲಿಕೆಗಳಿವೆ. ಹಾಗೆಯೇ ಸಿಖ್ಖ್ ಧರ್ಮದ ಮೂಲ ತತ್ವಗಳಾದ ಪ್ರಾಮಾಣಿಕ ವೃತ್ತಿ, ಸಮಾಜ ಸೇವೆ, ಇಷ್ಟಲಿಂಗಾ ಪೂಜೆ ಲಿಂಗಾಯತ ಧರ್ಮದ ಮೂಲ ತತ್ವಗಳೇ ಆಗಿವೆ.
-ಸಿ.ಎನ್.ರಾಮಚಂದ್ರ, ಹಿರಿಯ ವಿಮರ್ಶಕ







