ಎಸ್‌ಐಟಿ ತನಿಖೆಗೆ ವಹಿಸಿರುವುದು ಸ್ವಾಗತಾರ್ಹ: ವೈಎಸ್‌ವಿ ದತ್ತ
ಅಕ್ರಮ ಅದಿರು ಸಾಗಣೆ ಪ್ರಕರಣ
ಬೆಂಗಳೂರು, ನ.4: ಬೇಲೆಕೇರಿ ಅಕ್ರಮ ಅದಿರು ಪ್ರಕರಣದ ತನಿಖೆಯನ್ನು ರಾಜ್ಯ ಸರಕಾರ ಎಸ್‌ಇಟಿ ತನಿಖಾ ಸಂಸ್ಥೆಗೆ ವಹಿಸಿರುವುದನ್ನು ಜೆಡಿಎಸ್ ಸ್ವಾಗತಿಸಲಿದೆ ಎಂದು ಶಾಸಕ ವೈ.ಎಸ್.ವಿ.ದತ್ತ ತಿಳಿಸಿದ್ದಾರೆ.
ಶನಿವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನ್ಯಾ.ಸಂತೋಷ್ ಹೆಗ್ಡೆ ಲೋಕಾಯುಕ್ತರಾಗಿದ್ದಾಗ ಅಕ್ರಮ ಅದಿರು ರಫ್ತಿಗೆ ಸಂಬಂಧಿಸಿದಂತೆ ವರದಿ ನೀಡಿದ್ದರು. ಈ ವರದಿ ರಾಜ್ಯ ವಿಧಾನಮಂಡಲದ ಉಭಯ ಸದನಗಳಲ್ಲೂ ಸಾಕಷ್ಟು ಚರ್ಚೆಯಾಗಿತ್ತು. ಸಮಗ್ರ ಸಾಕ್ಷ್ಯಾಧಾರಗಳು ಇಲ್ಲ ಎಂದು ಪ್ರಕರಣಕ್ಕೆ ತೆರೆಬಿದ್ದಿತ್ತು. ಈಗ ರಾಜ್ಯ ಸರಕಾರ ಅದಕ್ಕೆ ಮರುಜೀವ ನೀಡಿರುವುದು ಒಳ್ಳೆಯ ಕೆಲಸ ಎಂದು ತಿಳಿಸಿದರು.
ಅದಿರು ರಫ್ತು ಪ್ರಕರಣದಲ್ಲಿ ಅಕ್ರಮ ನಡೆದಿರುವ ಬಗ್ಗೆ ನನಗೆ ಖಚಿತ ನಂಬಿಕೆಯಿದೆ. ಹೀಗಾಗಿ ತನಿಖೆ ನಡೆದು ಸತ್ಯಾಂಶ ಹೊರಬರಬೇಕು. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕೆಂಬುದು ಜೆಡಿಎಸ್‌ನ ಆಗ್ರಹವಾಗಿದೆ. ಎಸ್‌ಐಟಿ ತನಿಖಾ ಸಂಸ್ಥೆಗೆ ವಹಿಸಿದ ಕೂಡಲೇ ಕಾಂಗ್ರೆಸ್ ರಾಜಕೀಯ ಅಸ್ತ್ರವಾಗಿ ಬಳಸುತ್ತಿದೆ ಎಂಬಂತೆ ಬಿಂಬಿಸಬಾರದು ಎಂದು ಅವರು ಹೇಳಿದರು.





