ಕಳವು ಪ್ರಕರಣ: ಸೊತ್ತು ಸಹಿತ ಆರೋಪಿ ಸೆರೆ

ಉಪ್ಪಿನಂಗಡಿ, ನ.4: ಮೊಬೈಲ್ ಟವರ್‌ನ ಜನರೇಟರ್ ಕಳವು ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿಯನ್ನು ಉಪ್ಪಿನಂಗಡಿ ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದು, ಆತನಿಂದ ನಾಲ್ಕು ಲಕ್ಷ ರೂ. ಮೌಲ್ಯದ 2 ಜನರೇಟರ್ ಹಾಗೂ ಜನರೇಟರ್ ಸಾಗಾಟಕ್ಕೆ ಬಳಸಿದ ಲಾರಿಯನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಓರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಚಿಕ್ಕಮಗಳೂರಿನ ಮಾರ್ಕೆಟ್ ರಸ್ತೆಯ ಬೋವಿ ಕಾಲನಿಯ ರಾಮುಕುಮಾರ್ (40) ಬಂಧಿತ ಆರೋಪಿ. ಈ ಪ್ರಕರಣಕ್ಕೆ ಸಂಬಂಧಿಸಿ ಇನ್ನೋರ್ವ ಆರೋಪಿ ಚಿಕ್ಕಮಗಳೂರಿನ ಇರ್ಫಾನ್ (27) ತಲೆಮರೆಸಿಕೊಂಡಿದ್ದು, ಈತನ ಶೋಧ ಕಾರ್ಯ ನಡೆಯುತ್ತಿದೆ.
ಪೊಲೀಸರು ವಶಪಡಿಸಿಕೊಂಡ ಎರಡು ಜನರೇಟರ್‌ನ ಮೌಲ್ಯ ಸುಮಾರು ನಾಲ್ಕು ಲಕ್ಷ ರೂ. ಆಗಿದ್ದು, ಈಚರ್ ಲಾರಿಯ ಮೌಲ್ಯ ಸುಮಾರು 5 ಲಕ್ಷ ರೂ. ಎಂದು ಅಂದಾಜಿಸಲಾಗಿದೆ.
ಬಜತ್ತೂರು ಗ್ರಾಮದ ಬೆದ್ರೋಡಿ ಎಂಬಲ್ಲಿ ಅಳವಡಿಸಲಾಗಿದ್ದ ಮೊಬೈಲ್ ಟವರ್‌ನ 2 ಜನರೇಟರ್‌ಗಳನ್ನು ಕಳೆದ ಸೆ.16ರಂದು ಕಳವುಗೈಯಲಾಗಿತ್ತು. ಈ ಬಗ್ಗೆ ಟವರ್‌ನ ಮೇಲ್ವಿಚಾರಣೆ ನೋಡಿಕೊಳ್ಳುತ್ತಿದ್ದ ಜಯಪ್ರಸಾದ್ ಎಂಬವರು ಉಪ್ಪಿನಂಗಡಿ ಪೊಲೀಸರಿಗೆ ದೂರು ನೀಡಿದ್ದರು. ಪ್ರಕರಣ ದಾಖಲಿಸಿಕೊಂಡ ಉಪ್ಪಿನಂಗಡಿ ಪೊಲೀಸರು ಈ ಬಗ್ಗೆ ತನಿಖೆ ನಡೆಸಿದ್ದು, ಪ್ರಮುಖ ಆರೋಪಿಯನ್ನು ಶುಕ್ರವಾರ ರಾತ್ರಿ ಚಿಕ್ಕಮಗಳೂರಿನಲ್ಲಿ ಬಂಧಿಸಿದ್ದಾರೆ. ಆರೋಪಿ ರಾಮುಕುಮಾರ್ ಈ ಹಿಂದೆ ಜಿಟಿಎಲ್ ಕಂಪೆನಿಯಲ್ಲಿ ಕೆಲಸಕ್ಕಿದ್ದು, ಕಳೆದ ಆರು ತಿಂಗಳ ಹಿಂದೆ ಕೆಲಸ ಬಿಟ್ಟಿದ್ದ. ಪುತ್ತೂರು ಗ್ರಾಮಾಂತರ ವೃತ್ತ ನಿರೀಕ್ಷಕ ಗೋಪಾಲ ನಾಯ್ಕ ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಠಾಣಾ ನಿರೀಕ್ಷಕ ನಂದಕುಮಾರ್ ಅವರ ನಿರ್ದೇಶನದಂತೆ ನಡೆದ ಈ ಕಾರ್ಯಾಚರಣೆಯಲ್ಲಿ ಉಪ್ಪಿನಂಗಡಿ ಪೊಲೀಸ್ ಠಾಣಾ ಸಿಬ್ಬಂದಿಗಳಾದ ಶೇಖರ ಗೌಡ, ಸಂಗಯ್ಯ, ಪ್ರವೀಣ್ ರೈ, ಇರ್ಷಾದ್, ಜಗದೀಶ್ ಭಾಗವಹಿಸಿದರು ಹಾಗೂ ಈ ತನಿಖಾ ತಂಡಕ್ಕೆ ಜಿಲ್ಲಾ ಕಂಪ್ಯೂಟರ್ ವಿಭಾಗದ ಸಂಪತ್ ಹಾಗೂ ದಿವಾಕರ ಸಹಕರಿಸಿದರು.







