370ನೇ ವಿಧಿಯನ್ನು ಗೌರವಿಸಬೇಕು: ಮೆಹಬೂಬ ಮುಫ್ತಿ

ಶ್ರೀನಗರ, ನ.4: ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಖಾತರಿಪಡಿಸುವ ಸಂವಿಧಾನದ 370ನೇ ವಿಧಿಯು ಜಮ್ಮು ಕಾಶ್ಮೀರದ ಜನತೆಗೆ ದೇಶದ ಬದ್ಧತೆಯಾಗಿದ್ದು ಇದನ್ನು ಎಲ್ಲರೂ ಗೌರವಿಸಬೇಕು ಎಂದು ಜಮ್ಮು ಕಾಶ್ಮೀರ ಮುಖ್ಯಮಂತ್ರಿ ಮೆಹಬೂಬ ಮುಫ್ತಿ ಹೇಳಿದ್ದಾರೆ.
ಮಾತುಕತೆ ಜಮ್ಮು-ಕಾಶ್ಮೀರದ ಸಮಸ್ಯೆಯನ್ನು ಇತ್ಯರ್ಥಪಡಿಸಲು ಇರುವ ಏಕೈಕ ಮಾರ್ಗವಾಗಿದ್ದು, ಭಾರೀ ಬಹುಮತ ಹೊಂದಿರುವ ಪ್ರಧಾನಿ ನರೇಂದ್ರ ಮೋದಿ ಜಮ್ಮು-ಕಾಶ್ಮೀರದ ವೃತ್ತಾಂತವನ್ನು ಬದಲಾಯಿಸುವ ಮೂಲಕ ಇತಿಹಾಸ ನಿರ್ಮಿಸಬಹುದಾಗಿದೆ ಎಂದು ಅವರು ಹೇಳಿದರು.
ಪ್ರಜಾಪ್ರಭುತ್ವವು ಸಿದ್ಧಾಂತಗಳ ಸಮರವಾಗಿದ್ದು ಮಾತುಕತೆಯೊಂದೇ ಮುಂದಿರುವ ದಾರಿಯಾಗಿದೆ ಎಂದು ಮೆಹಬೂಬ ಮುಪ್ತಿ ಟ್ವೀಟ್ ಮಾಡಿದ್ದಾರೆ. ಜಮ್ಮುಕಾಶ್ಮೀರ ಭೌಗೋಳಿಕವಾಗಿ ಅತ್ಯಂತ ಮಹತ್ವದ ಸ್ಥಾನದಲ್ಲಿದ್ದು ಇದರ ಲಾಭವನ್ನು ದೇಶ ಪಡೆಯಬೇಕಿದೆ. ರಾಜ್ಯದ ಆರ್ಥಿಕ ಚಟುವಟಿಕೆಗಳಿಗೆ ಪುನಶ್ಚೇತನ ನೀಡುವ ಸಾಂಪ್ರದಾಯಿಕ ಕ್ರಮಗಳನ್ನು ಪುನರಾರಂಭಿಸಬೇಕಿದೆ ಎಂದು ಮೆಹಬೂಬ ಮುಪ್ತಿ ಹೇಳಿದ್ದಾರೆ.
ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿಯನ್ನು ರದ್ದುಗೊಳಿಸಬೇಕು ಎಂಬ ಬಗ್ಗೆ ಇದೀಗ ಚರ್ಚೆ ನಡೆಯುತ್ತಿರುವುದನ್ನು ಇಲ್ಲಿ ಉಲ್ಲೇಖಿಸಬಹುದಾಗಿದೆ.







