ಕುರುಬರನ್ನು ಎಸ್ಟಿಗೆ ಸೇರಿಸಲು ಆಗ್ರಹಿಸಿ 'ಬೆಳಗಾವಿ ಚಲೋ'
ಬೆಂಗಳೂರು, ನ.4: ಕುರುಬ ಸಮುದಾಯವನ್ನು ಎಸ್ಟಿ ಮೀಸಲಾತಿಗೆ ಸೇರಿಸಿ, ಮೀಸಲಾತಿ ಹೆಚ್ಚಿಸುವಂತೆ ಆಗ್ರಹಿಸಿ ಚಳಿಗಾಲದ ಅಧಿವೇಶನದ ಸಮಯದಲ್ಲಿ ಬೆಳಗಾವಿ ಚಲೋ ಹಮ್ಮಿಕೊಳ್ಳಲಾಗಿದೆ ಎಂದು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಘರ್ಜನೆ ಅಧ್ಯಕ್ಷ ರಾಜಶೇಖರ ದೊಡ್ಡಣ್ಣ ಮೌರ್ಯ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಕುರಿತು ಹಲವಾರು ಬಾರಿ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ. ಆದುದರಿಂದ ನ.15ರಂದು ಬೆಳಗಾವಿಯ ಸುವರ್ಣ ಸೌಧದ ಮುಂದೆ ಧರಣಿ ಹಮ್ಮಿಕೊಳ್ಳಲಾಗಿದೆ. ನಮ್ಮ ಬೇಡಿಕೆಗೆ ಸ್ಪಂದಿಸುವವರೆಗೂ ಪ್ರತಿಭಟನೆ ಕೈಬಿಡುವುದಿಲ್ಲ. ಸೂಕ್ತ ಸ್ಪಂದನೆ ಸಿಗದಿದ್ದಲ್ಲಿ ಅಲ್ಲಿಯೇ ಧರಣಿ ಮುಂದುವೆಸಲಾಗುವುದು ಎಂದು ಹೇಳಿದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಕುರುಬ ಜನಾಂಗಕ್ಕೆ ಸೇರಿದವರಾಗಿದ್ದು, ನಮ್ಮನ್ನು ಕಡೆಗಣಿಸುತ್ತಿದ್ದಾರೆ. ಹೀಗಾಗಿ, ಈಗಲಾದರೂ ನಮ್ಮ ಕಡೆ ಗಮನಹರಿಸಬೇಕು. ಕುರುಬರನ್ನು ಎಸ್ಟಿಗೆ ಸೇರಿಸುವ ಸಂಬಂಧ ಕೇಂದ್ರ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಬೇಕು. ಇಲ್ಲದಿದ್ದರೆ, ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಬೆಂಬಲ ನೀಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಸಂಘದ ಮುಖಂಡರಾದ ಚಂದ್ರಶೇಖರ್ ಉಪಸ್ಥಿತರಿದ್ದರು.





