‘ಬ್ರೈನ್ ಕ್ವೆಸ್ಟ್’ನಲ್ಲಿ ವಿದ್ಯಾರ್ಥಿಗಳಿಂದ ವಿವಿಧ ಮಾದರಿಗಳ ಪ್ರದರ್ಶನ

ಉಡುಪಿ, ನ.4: ಉಡುಪಿಯ ಇ ಸ್ಕೂಲ್ ವತಿಯಿಂದ ಉಡುಪಿ ಎಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ಶನಿವಾರ ಹಮ್ಮಿಕೊಳ್ಳಲಾದ ‘ಬ್ರೈನ್ ಕ್ವೆಸ್ಟ್’ ವಿಜ್ಞಾನ ಮತ್ತು ತಂತ್ರಜ್ಞಾನ ಉತ್ಸವದಲ್ಲಿ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದ ವಿವಿಧ ರೀತಿು ಮಾದರಿಗಳನ್ನು ಪ್ರದರ್ಶಿಸಿದರು.
ಕಟ್ಟಡಗಳಿಗೆ ಬೆಳಕು ಗಾಳಿ ಬರುವ ವ್ಯವಸ್ಥೆಯ ಕುರಿತು ಉಡುಪಿಯ ಅನಂತೇಶ್ವರ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಮಾದರಿಯನ್ನು ತಯಾರಿಸಿದ್ದು, ಅದರಲ್ಲಿ ಹೊಸ ಹೊಸ ಪ್ರಯೋಗಗಳ ಕುರಿತು ವಿವರಗಳನ್ನು ನೀಡಿದರು. ಅದೇ ರೀತಿ ಕಾಂಕ್ರೀಟ್ ಮಿಶ್ರಣದಲ್ಲಿ ನೀರು ಎಷ್ಟು ಪ್ರಮಾಣದಲ್ಲಿ ಇದ್ದರೆ ಕಟ್ಟಡ ಗಟ್ಟಿಯಾಗಿರುತ್ತದೆ ಎಂಬುದರ ಬಗ್ಗೆಯೂ ವಿದ್ಯಾರ್ಥಿಗಳು ಪ್ರಾತ್ಯಕ್ಷಿಕೆಯ ಮೂಲಕ ತಿಳಿಸಿದರು.
ಮರಳು ಪರೀಕ್ಷೆಯ ಮಾದರಿಯನ್ನು ಕೂಡ ಮಕ್ಕಳು ಪ್ರದರ್ಶಿಸಿದರು. ಅಲ್ಲದೆ ಮಕ್ಕಳೇ ತಯಾರಿಸಿದ ವಿವಿಧ ಕ್ರಾಫ್ಟ್‌ಗಳು ಗಮನ ಸೆಳೆದವು. ಪೇಪರ್ ಕಪ್ ನಲ್ಲಿ ತಯಾರಿಸಲಾದ ಅಲಂಕಾರಿಕ ವಸ್ತುಗಳು, ಕ್ಯಾಂಡಿ ಸ್ಟಿಕ್‌ನಲ್ಲಿ ರಚಿಸಿದ ವಿವಿಧ ಪರಿಕರಗಳು, ಬಟ್ಟೆಯಲ್ಲಿ ತಯಾರಿಸಿದ ಕಲಾಕೃತಿಗಳು, ಹಾರಗಳು ಆಕರ್ಷಣೀಯವಾಗಿದ್ದವು.
ಉಡುಪಿಯ ಒಟ್ಟು 5 ಶಾಲೆಗಳ 120ಕ್ಕೂ ಅಧಿಕ ವಿದ್ಯಾರ್ಥಿಗಳು ಇದರಲ್ಲಿ ಪಾಲ್ಗೊಡಿದ್ದರು. ಇದೇ ಸಂದರ್ಭದಲ್ಲಿ ಇ ಸ್ಕೂಲ್‌ನ ಡಾ.ಪೂರ್ಣಿಮಾ ಕಾಮತ್ ಉಪಕಾರಿ ಕೀಟಗಳ ರಕ್ಷಣೆ ಕುರಿತು ಉಪನ್ಯಾಸ ನೀಡಿದರು. ಎಂಜಿಎಂ ಕಾಲೇಜಿನ ಪ್ರಾಂಶುಪಾಲೆ ಪ್ರೊ.ಕುಸುಮಾ ಕಾಮತ್ ಮೊದ ಲಾದವರು ಉಪಸ್ಥಿತರಿದ್ದರು.







