ಫೇಸ್‌ಬುಕ್ ಪಾಸ್‌ವರ್ಡ್ ಕದ್ದು ದುರ್ಬಳಕೆ: ಯುವತಿ ಸೇರಿ ಇಬ್ಬರ ಬಂಧನ
ಬೆಂಗಳೂರು, ನ. 4: ಫೇಸ್‌ಬುಕ್ ಪಾಸ್‌ವರ್ಡ್ ಕದ್ದು, ಅದನ್ನು ದುರ್ಬಳಕೆ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಇಲ್ಲಿನ ಸಿಸಿಬಿ ಪೊಲೀಸರು ಯುವತಿ ಸೇರಿದಂತೆ ಇಬ್ಬರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಬಂಧಿತರನ್ನು ನಾಗರಭಾವಿ ನಿವಾಸಿ ಕರೀಷ್ಮಾ ಕುಶಾಲಪ್ಪ(24) ಹಾಗೂ ಐಟಿಐ ಕಾಲನಿ, ದೂರವಾಣಿ ನಗರದ ನಿವಾಸಿ ಪವನ್ ಕುಮಾರ್(24) ಎಂದು ಗುರುತಿಸಲಾಗಿದೆ.
ಆರೋಪಿಗಳಿಬ್ಬರು ಒಟ್ಟಾಗಿ ಸೇರಿ ಪಿರ್ಯಾದುದಾರರ ಫೇಸ್‌ಬುಕ್‌ನ ಪಾಸ್ ವರ್ಡ್‌ನ್ನು ಕದ್ದು ಅನಧಿಕೃತವಾಗಿ ಪಿರ್ಯಾದುದಾರರ ಫೇಸ್‌ಬುಕ್ ಅಕೌಂಟನ್ನು ಆಕ್ಸ್‌ಸ್ ಮಾಡಿ ವಿದ್ಯುನ್ಮಾನ ರೂಪದ ಫೋಟೊಗಳನ್ನು ಡಿಲೀಟ್ ಮಾಡಿದ್ದಲ್ಲದೆ, ಪಿರ್ಯಾದುದಾರರ ಕೆಲವು ಭಾವಚಿತ್ರಗಳನ್ನು ತೆಗೆದುಕೊಂಡು ತಮಗೆ ಸಂಬಂಧಿಸಿದ ಫೇಸ್‌ಬುಕ್ ಅಕೌಂಟ್‌ನಲ್ಲಿ ಅಪ್‌ಲೋಡ್ ಮಾಡಿಕೊಂಡಿದ್ದಾರೆಂಬುದು ಗೊತ್ತಾಗಿದೆ.
ಬಂಧಿತರಿಂದ ಮೂರು ಮೊಬೈಲ್‌ಫೋನ್, ಒಂದು ಲ್ಯಾಪ್‌ಟಾಪ್ ಮತ್ತು ದ್ವಿಚಕ್ರ ವಾಹನವನ್ನು ವಶಪಡಿಸಿಕೊಳ್ಳಲಾಗಿದೆ. ಸಾರ್ವಜನಿಕರು ತಮ್ಮ ಖಾಸಗಿ ಮಾಹಿತಿಯನ್ನು ಬ್ಯಾಂಕ್, ಸಾಮಾಜಿಕ ಜಾಲತಾಣದ ಪಾಸ್‌ವರ್ಡ್‌ಗಳನ್ನು ಅನ್ಯವ್ಯಕ್ತಿಗಳಿಗೆ ದೊರಕದಂತೆ ಎಚ್ಚವಹಿಸಿ ಎಂದು ಸಿಸಿಬಿ ಪೊಲೀಸರು ಮನವಿ ಮಾಡಿದ್ದಾರೆ.





