ರಾಜ್ಯಮಟ್ಟದ ವಿಪ್ರ ತಂಡಗಳ ಕ್ರಿಕೆಟ್ ಪಂದ್ಯಾಟಕ್ಕೆ ಚಾಲನೆ

ಉಡುಪಿ, ನ.4: ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ ವತಿಯಿಂದ ಉಡುಪಿ ಬೀಡಿನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾದ ಎರಡು ದಿನಗಳ ರಾಜ್ಯಮಟ್ಟದ ಆಯ್ದ ವಿಪ್ರ ತಂಡಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾಟವನ್ನು ಪರ್ಯಾಯ ಪೇಜಾವರ ಕಿರಿಯ ಯತಿ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಹಾಗೂ ಕಾಣಿಯೂರು ಮಠಾಧೀಶ ಶ್ರೀವಿದ್ಯಾವಲ್ಲಭ ತೀರ್ಥ ಸ್ವಾಮೀಜಿ ಉದ್ಘಾಟಿಸಿದರು.
ನಂತರ ಮೈದಾನದಲ್ಲಿ ಬ್ಯಾಟ್ ಹಿಡಿದು ಕ್ರಿಕೆಟ್ ಆಡುವ ಮೂಲಕ ಪಂದ್ಯಾಟಕ್ಕೆ ಚಾಲನೆ ನೀಡಿದ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿ, ಆಚಾರ್ಯ ಮಧ್ವರು ಆಧ್ಯತ್ಮಿಕ ಚಿಂತನೆ ಮಾತ್ರವಲ್ಲದೆ ಆಟೋಟ ದಲ್ಲಿಯೂ ಮುಂದಿದ್ದರು. ಹನುಮ, ಭೀಮ, ಮಧ್ವರು ಮಾನಸಿಕವಾಗಿ ಮಾತ್ರ ವಲ್ಲದೆ ದೈಹಿಕವಾಗಿಯೂ ಸಾಧನೆ ಮಾಡಿ ಸಮಾಜಕ್ಕೆ ತೋರಿಸಿದ್ದಾರೆ ಎಂದು ಹೇಳಿದರು.
ಕಾಣಿಯೂರು ಸ್ವಾಮೀಜಿ ಮಾತನಾಡಿ, ಕ್ರೀಡೆಯು ದೇಹ ಮತ್ತು ಬುದ್ಧಿ ಗಳಿಗೆ ಒಳ್ಳೆಯ ಉತ್ತೇಜನ ನೀಡುತ್ತದೆ. ಶಾರೀರಿಕವಾಗಿ ಸದೃಢ ಇದ್ದರೆ ಸಾಧನೆ ಮಾಡಲು ಬಹಳ ಸುಲಭವಾಗುತ್ತದೆ. ಈ ಉದ್ದೇಶಕ್ಕಾಗಿ ಕ್ರೀಡೆ ಸಹಕಾರಿ ಯಾಗುತ್ತದೆ ಎಂದು ಶುಭಹಾರೈಸಿದರು.
ಮುಖ್ಯ ಅತಿಥಿಗಳಾಗಿ ಮಂಗಳೂರಿನ ಶಾರದಾ ವಿದ್ಯಾಲಯದ ಅಧ್ಯಕ್ಷ ಎಂ.ಬಿ.ಪುರಾಣಿಕ್, ಜಿಲ್ಲಾ ಬ್ರಾಹ್ಮಣ ಮಹಾ ಸಭಾದ ಅಧ್ಯಕ್ಷ ಮಂಜುನಾಥ ಉಪಾಧ್ಯ, ಹಿರಿಯ ವಕೀಲ ಎ.ಶ್ರೀಪತಿ ಆಚಾರ್ಯ, ಕರ್ನಾಟಕ ಬ್ಯಾಂಕಿನ ಉಪಮಹಾಪ್ರಭಂದಕಿ ವಿದ್ಯಾಲಕ್ಷ್ಮಿ ಆರ್., ಉಡುಪಿ ತಾಪಂ ಅಧ್ಯಕ್ಷೆ ನಳಿನಿ ಪ್ರದೀಪ್ ರಾವ್, ಉಡುಪಿ ಟೌನ್ ಕೋ.ಬ್ಯಾಂಕಿನ ಅಧ್ಯಕ್ಷ ಕೃಷ್ಣರಾಜ ಸರಳಾಯ ಉಪಸ್ಥಿತರಿದ್ದರು.
ಪರಿಷತ್ತಿನ ಅಧ್ಯಕ್ಷ ವಿಷ್ಣು ಪ್ರಸಾದ್ ಪಾಡಿಗಾರ್ ಸ್ವಾಗತಿಸಿದರು. ಕಾರ್ಯ ದರ್ಶಿ ಪ್ರವೀಣ್ ಉಪಾಧ್ಯ ವಂದಿಸಿದರು. ಶುಭ ಉಲ್ಲಾಸ್ ಕಾರ್ಯಕ್ರಮ ನಿರೂಪಿಸಿದರು. ಕಾರ್ಯಕ್ರಮ ಸಂಘಟಕರಾದ ಪರಿಷತ್ತಿನ ಮಾಜಿ ಅಧ್ಯಕ್ಷ ಶಶಿಧರ ಭಟ್, ಮಟ್ಟಿ ಲಕ್ಷ್ಮೀನಾರಾಯಣ ರಾವ್ ಉಪಸ್ಥಿತರಿದ್ದರು.







