ಕಾನೂನು ಬಾಹಿರವಾಗಿ ಅಂಗಡಿ ಮಳಿಗೆಗಳ ನಿರ್ಮಾಣ: ಪದ್ಮನಾಭರೆಡ್ಡಿ ಆರೋಪ
ಬೆಂಗಳೂರು, ನ.4: ಬಿಬಿಎಂಪಿ ಮಾಜಿ ಮೇಯರ್ ಜಿ.ಪದ್ಮಾವತಿ, ಶಾಸಕ ಆರ್.ವಿ.ದೇವರಾಜ್ ಮತ್ತು ಸ್ಥಾಯಿ ಸಮಿತಿ ಸದಸ್ಯೆ ಗಾಯತ್ರಿ ಸೇರಿ ನಗರದ ಕೆ.ಆರ್.ಮಾರುಕಟ್ಟೆಯಲ್ಲಿ ಕಾನೂನು ಬಾಹಿರವಾಗಿ ಅಂಗಡಿ ಮಳಿಗೆಗಳನ್ನು ನಿರ್ಮಿಸಿ, ಕೋಟ್ಯಂತರ ರೂ.ಗಳು ಭ್ರಷ್ಟಾಚಾರ ನಡೆಸಿದ್ದಾರೆ ಎಂದು ಪಾಲಿಕೆಯ ಪ್ರತಿಪಕ್ಷದ ನಾಯಕ ದ್ಮನಾಭರೆಡ್ಡಿ ಇಂದಿಲ್ಲಿ ಆರೋಪಿಸಿದ್ದಾರೆ.
ಮಾರುಕಟ್ಟೆಯಲ್ಲಿನ ಸಾರ್ವಜನಿಕ ಸ್ಥಳಗಳು, ಶೌಚಾಲಯ ಸೇರಿದಂತೆ ಹಲವು ಸ್ಥಳಗಳಲ್ಲಿ ಕಾನೂನು ಬಾಹಿರವಾಗಿ 24 ಮಳಿಗೆಗಳು ನಿರ್ಮಿಸಿಕೊಂಡಿದ್ದು, ಒಂದೊಂದು ಮಳಿಗೆಯನ್ನು 50 ಲಕ್ಷಕ್ಕೆ ಮಾರಾಟ ಮಾಡಿದ್ದು, ಕೋಟ್ಯಂತರ ಭ್ರಷ್ಟಾಚಾರ ನಡೆಸಿದ್ದಾರೆ. ಹೀಗಾಗಿ, ಈ ಪ್ರಕರಣವನ್ನು ಎಸಿಬಿ ತನಿಖೆಗೆ ವಹಿಸಬೇಕು ಎಂದು ಅವರು ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಟೆಂಡರ್ ಕರೆಯದೆ ಯಾವುದೇ ಮಳಿಗೆಯಾಗಲಿ ಅಥವಾ ಆಸ್ತಿಯಾಗಲಿ ಹಂಚಿಕೆ ಮಾಡಬಾರದು ಎಂದು ಸರಕಾರದ ಸುತ್ತೋಲೆಯಿದೆ. ಆದರೆ, ಶಾಸಕ ಆರ್.ವಿ. ದೇವರಾಜ್ ಹಾಗೂ ಜಿ.ಪದ್ಮಾವತಿ ಇತರರು ಸ್ಥಾಯಿ ಸಮಿತಿ ಅಧ್ಯಕ್ಷೆ ಗಾಯಿತ್ರಿ ಮೇಲೆ ಒತ್ತಡ ಹೇರಿ ಅಕ್ರಮವಾಗಿ 24 ಮಳಿಗೆ ಹಂಚಿಕೆ ಮಾಡಿದ್ದಾರೆ ಎಂದು ದೂರಿದರು.
ಕೆ.ಆರ್.ಮಾರುಕಟ್ಟೆ ನಿರ್ಮಾಣ ಸಂದರ್ಭದಲ್ಲಿ ಬೆಂಗಳೂರಿನ ಜನಸಂಖ್ಯೆ 80 ಲಕ್ಷ ಇತ್ತು. ನಗರದಲ್ಲಿ ಈಗ ಒಂದು ಕೋಟಿಗೂ ಹೆಚ್ಚು ಜನಸಂಖ್ಯೆ ಇದೆ. ಜನ ಓಡಾಡಲು ಕಷ್ಟ. ಹೀಗಿದ್ದರೂ, ಅಕ್ರಮ ಕಟ್ಟಡಗಳು ನಿರ್ಮಿಸಿದ್ದಾರೆ. ಹೀಗಾಗಿ, ಕೂಡಲೇ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಹಂಚಿಕೆಯಾಗಿರುವ ಮಳಿಗೆಗಳನ್ನು ರದ್ದುಪಡಿಸಬೇಕೆಂದು ಅವರು ಒತ್ತಾಯಿಸಿದರು.







