ಕೆನಡಿ ಹತ್ಯೆ: ಇನ್ನಷ್ಟು ರಹಸ್ಯ ಕಡತಗಳ ಬಿಡುಗಡೆ

ವಾಶಿಂಗ್ಟನ್, ನ. 4: ಅಮೆರಿಕದ ದಿವಂಗತ ಅಧ್ಯಕ್ಷ ಜಾನ್ ಎಫ್. ಕೆನಡಿ ಹತ್ಯೆಗೆ ಸಂಬಂಧಿಸಿದ ಇನ್ನಷ್ಟು ರಹಸ್ಯ ಸಿಐಎ ಕಡತಗಳನ್ನು ರಾಷ್ಟ್ರೀಯ ಪತ್ರಾಗಾರ ಶುಕ್ರವಾರ ಬಿಡುಗಡೆ ಮಾಡಿದೆ
ಹೊಸದಾಗಿ ಸುಮಾರು 680 ಕಡತಗಳನ್ನು ಬಹಿರಂಗಪಡಿಸಲಾಗಿದ್ದು, ಆ ಪೈಕಿ 553 ಈ ಹಿಂದೆ ನೋಡಿರದ ಸೆಂಟ್ರಲ್ ಇಂಟಲಿಜನ್ಸ್ ಏಜನ್ಸಿ (ಸಿಐಎ)ಯ ಕಡತಗಳಾಗಿವೆ. ಈ ಕಡತಗಳ ಬಿಡುಗಡೆಗೆ ರಾಷ್ಟ್ರೀಯ ಭದ್ರತೆಯ ಕಾರಣವೊಡ್ಡಿ ಈ ಹಿಂದೆ ಸಿಐಎ ವಿರೋಧ ವ್ಯಕ್ತಪಡಿಸಿತ್ತು.
ವಿದೇಶಗಳಲ್ಲಿ ಸೇವೆ ಸಲ್ಲಿಸುತ್ತಿರುವ ಸೋವಿಯತ್ ರಾಜತಾಂತ್ರಿಕರನ್ನು ನೇಮಿಸಿಕೊಳ್ಳಲು ಸಿಐಎ ನಡೆಸಿದ ಪ್ರಯತ್ನಗಳು ಹಾಗೂ ಕದ್ದಾಲಿಸಿದ ಅವರ ಸಂಭಾಷಣೆಗಳ ಅಕ್ಷರ ರೂಪಾಂತರಗಳನ್ನು ಈ ಕಡತಗಳು ಹೊಂದಿವೆ.
ಕಾನೂನು ಇಲಾಖೆ, ರಕ್ಷಣಾ ಇಲಾಖೆ ಮತ್ತು ಕೆನಡಿ ಹತ್ಯೆ ಬಗ್ಗೆ ತನಿಖೆ ನಡೆಸಿದ್ದ ಸದನ ಸಮಿತಿಯೊಂದರ ಬಳಿಯಿದ್ದ ದಾಖಲೆಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ರಾಷ್ಟ್ರೀಯ ಪತ್ರಾಗಾರ ತಿಳಿಸಿದೆ.
ಅಮೆರಿಕದ ಅಧ್ಯಕ್ಷ ಜಾನ್ ಎಫ್. ಕೆನಡಿಯನ್ನು 1963 ನವೆಂಬರ್ 22ರಂದು ಟೆಕ್ಸಾಸ್ ರಾಜ್ಯದ ಡಲ್ಲಾಸ್‌ನಲ್ಲಿ ದುಷ್ಕರ್ಮಿಯೊಬ್ಬ ಗುಂಡು ಹಾರಿಸಿ ಹತ್ಯೆಗೈದಿದ್ದ.
ವ್ಯಾಪಕ ಪಿತೂರಿ ಸಿದ್ಧಾಂತಗಳು
46 ವರ್ಷದ ಪ್ರಭಾವಿ ನಾಯಕನನ್ನು ಮರೀನ್ ಕಾರ್ಪ್ಸ್‌ನ ಮಾಜಿ ಶಾರ್ಪ್ ಶೂಟರ್ ಲೀ ಹಾರ್ವೆ ಒಸ್ವಾಲ್ಡ್ ಒಬ್ಬಂಟಿಯಾಗಿ ಹತ್ಯೆ ನಡೆಸಿದ್ದಾನೆ ಎಂಬುದಾಗಿ ಈ ಬಗ್ಗೆ ತನಿಖೆ ನಡೆಸಿದ ಅಧಿಕೃತ ವಾರನ್ ಆಯೋಗ ಹೇಳಿದೆ.
ಆದರೆ, ಈ ಹತ್ಯೆಯ ಹಿಂದೆ ದೊಡ್ಡ ಪಿತೂರಿಯಿದೆ ಎಂಬ ಬಲವಾದ ಊಹಾಪೋಹಗಳನ್ನು ನಿವಾರಿಸಲು ಆಯೋಗದ ಈ ವರದಿಗೆ ಸಾಧ್ಯವಾಗಲಿಲ್ಲ. ಪಿತೂರಿಗೆ ಸಂಬಂಧಿಸಿ ನೂರಾರು ಪುಸ್ತಕಗಳು ಪ್ರಕಟಗೊಂಡಿವೆ ಮತ್ತು ಹಲವಾರು ಸಿನೆಮಾಗಳು ಹೊರಬಂದಿವೆ. ಶೀತಲ ಸಮರ ಕಾಲದ ಪ್ರತಿಸ್ಪರ್ಧಿಗಳಾದ ರಶ್ಯ ಮತ್ತು ಕ್ಯೂಬ ಹಾಗೂ ಮಾಫಿಯ ಕೆನಡಿ ಹತ್ಯೆಯ ಹಿಂದೆ ಇರಬಹುದು ಎಂಬ ಊಹಾಪೋಹಗಳಿಗೆ ಈ ಪುಸ್ತಕಗಳು ಮತ್ತು ಸಿನೆಮಾಗಳು ಇಂಬು ನೀಡಿದವು. ಅಲ್ಲದೆ, ಸ್ವತಃ ಕೆನಡಿಯ ಉಪಾಧ್ಯಕ್ಷ ಲಿಂಡನ್ ಜಾನ್ಸನ್ ಹತ್ಯೆಯಲ್ಲಿ ಶಾಮೀಲಾಗಿರುವ ಬಗ್ಗೆ ಊಹಾಪೋಹಗಳಿದ್ದವು.
ನೂತನ ಕಡತಗಳು ಯಾವುದೇ ಸ್ಫೋಟಕ ಮಾಹಿತಿಗಳನ್ನು ಒಳಗೊಂಡಿರುವ ಅಥವಾ ವ್ಯಾಪಕವಾಗಿರುವ ಪಿತೂರಿ ಸಿದ್ಧಾಂತಗಳನ್ನು ನಿವಾರಿಸುವ ಸಾಧ್ಯತೆಯಿಲ್ಲ ಎಂದು ಕೆನಡಿ ಕುರಿತ ಸಂಶೋಧಕರು ಹೇಳುತ್ತಾರೆ.







