ಟಿಪ್ಪು ವಿರೋಧಿಗಳಿಗೆ ಧಿಕ್ಕಾರ ಹೇಳಬೇಕು: ಜಿ.ರಾಜಶೇಖರ್
ಮಂಗಳೂರು, ನ.4: ಟಿಪ್ಪು ಸುಲ್ತಾನ್ ಮೈಸೂರಿನ ಹುಲಿ ಎಂದು ಜನಮಾನಸದಲ್ಲಿ ನೆಲೆಸಿದ್ದಾರೆ. ಬಿಜೆಪಿಗರು ರಾಜಕಾರಣಕ್ಕಾಗಿ ಟಿಪ್ಪುವನ್ನು ಹಿಂದೂ ವಿರೋಧಿ, ಮತಾಂತರಿ ಎಂದು ಅಪಪ್ರಚಾರ ಮಾಡುತ್ತಿದ್ದಾರೆ. ಈ ಅಪಪ್ರಚಾರವನ್ನು ಬದಿಗೊತ್ತಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟಿಪ್ಪು ಜಯಂತಿ ಆಚರಿಸಲು ಮುಂದಾಗಿರುವ ನಿರ್ಧಾರ ಸೂಕ್ತವಾದುದು. ಈ ಸಂದರ್ಭ ಬಿಜೆಪಿಯ ಚುನಾಯಿತ ಜನಪ್ರತಿನಿಧಿಗಳು ಟಿಪ್ಪು ಜಯಂತಿಯ ಆಮಂತ್ರಣ ಪತ್ರಿಕೆಯಲ್ಲಿ ತಮ್ಮ ಹೆಸರು ಉಲ್ಲೇಖಿಸಬಾರದು ಎನ್ನುತ್ತಿರುವುದು ಸಂವಿಧಾನಕ್ಕೆ ಬಗೆಯುವ ಅಪಚಾರ. ಇಂತಹ ಟಿಪ್ಪು ವಿರೋಧಿಗಳಿಗೆ ಧಿಕ್ಕಾರ ಹೇಳಬೇಕಿದೆ ಎಂದು ಲೇಖಕ, ಚಿಂತಕ ಜಿ.ರಾಜಶೇಖರ್ ಹೇಳಿದರು.
ಟಿಪ್ಪು ಸುಲ್ತಾನ್ ಇತಿಹಾಸ ಸಂಶೋಧನಾ ಸಮಿತಿಯು ನಗರದ ಪುರಭವನದ ಮಿನಿಹಾಲ್‌ನಲ್ಲಿ ಶನಿವಾರ ಏರ್ಪಡಿಸಿದ ಹೈದರಾಲಿ ಮತ್ತು ಟಿಪ್ಪು ಸುಲ್ತಾನ್ ವಿಚಾರಗೋಷ್ಠಿಯ ಸಮಾರೋಪ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಗತ್ತಿನ 8 ಮಂದಿ ಶ್ರೇಷ್ಠ ನಾಟಕಕಾರರೂ ಕೂಡ ಟಿಪ್ಪು ಬಗ್ಗೆ ನಾಟಕ ರಚಿಸಿದ್ದೇ ಟಿಪ್ಪು ಚಾರಿತ್ರಿಕ ನಾಯಕ ಎಂಬುದಕ್ಕೆ ಸಾಕ್ಷಿ. ಆದರೆ ಮುಸ್ಲಿಮರು ಮನುಷ್ಯರೇ ಅಲ್ಲ ಎಂಬಂತೆ ವರ್ತಿಸುವ ಸಂಘ ಪರಿವಾರ-ಬಿಜೆಪಿಗರು ರಾಜಕೀಯ ಲಾಭಕ್ಕೋಸ್ಕರ ಟಿಪ್ಪುವನ್ನು ಖಳನಾಯಕನಂತೆ ಬಿಂಬಿಸುತ್ತಿದ್ದಾರೆ. ಬಾಬರಿ ಮಸೀದಿಯ ಧ್ವಂಸ, ಬಾಬಾಬುಡನ್‌ಗಿರಿ ವಿವಾದ ಹುಟ್ಟು ಹಾಕಿದ ಬಿಜೆಪಿಗರು ಇದೀಗ ಟಿಪ್ಪು ಜಯಂತಿಯ ಹೆಸರಿನಲ್ಲಿ ರಾಜಕಾರಣ ಮಾಡುತ್ತಿದ್ದಾರೆ. ಇದಕ್ಕೆ ಅವಕಾಶ ನೀಡದೆ ಟಿಪ್ಪು ವಿಚಾರಧಾರೆಯನ್ನು ಪ್ರಚಾರ ಮಾಡುವ ಕೆಲಸ ತುರ್ತಾಗಿ ಆಗಬೇಕಿದೆ ಎಂದು ಜಿ. ರಾಜಶೇಖರ್ ನುಡಿದರು.
ಟಿಪ್ಪು ಸ್ವಾತಂತ್ರ ಹೋರಾಟಗಾರನಲ್ಲ. ಆ ಕಾಲದಲ್ಲಿ ಅದರ ಪರಿಕಲ್ಪನೆಯೇ ಇರಲಿಲ್ಲ ಎಂದು ಸಂಘಪರಿವಾರದವರು ಹೇಳುತ್ತಾರೆ. ಹಾಗಿದ್ದರೆ ಝಾನ್ಸಿರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮರು ಸ್ವಾತಂತ್ರ ಸೇನಾನಿಗಳೇ? ಆ ಕಾಲದಲ್ಲಿ ಸ್ವಾತಂತ್ರದ ಪರಿಕಲ್ಪನೆ ಇತ್ತೇ? ಝಾನ್ಸಿ ರಾಣಿ, ಕಿತ್ತೂರು ರಾಣಿ ಸ್ವಾತಂತ್ರ ಹೋರಾಟಗಾರರಾಗುವುದಾದರೆ ಟಿಪ್ಪು ಯಾಕೆ ಆಗಬಾರದು?ಎಂದು ಜಿ. ರಾಜಶೇಖರ್ ಪ್ರಶ್ನಿಸಿದರು.
ವಿಚಾರಗೋಷ್ಠಿಯಲ್ಲಿ ಮಾತನಾಡಿದ ಮಂಗಳೂರು ವಿ.ವಿ. ಪ್ರಾಧ್ಯಾಪಕ ಪ್ರೊ. ರಾಜಾರಾಮ ತೋಳ್ಪಾಡಿ ಟಿಪ್ಪು ಮತಾಂಧ, ದುಷ್ಟ, ಹಿಂದೂ ವಿರೋಧಿ ಎಂದೆಲ್ಲಾ ಹೇಳಿದರೂ ಕೂಡ ಟಿಪ್ಪುವಿಗೆ ದೇಶದ ಇತಿಹಾಸದಲ್ಲಿ ಒಳ್ಳೆಯ ಸ್ಥಾನವಿದ್ದೇ ಇದೆ ಎಂದು ಅಭಿಪ್ರಾಯಪಟ್ಟರು.
ಆಗಿಹೋದ ಘಟನೆಯನ್ನು ನಿಷ್ಪಕ್ಷಪಾತವಾಗಿ ಮಂಡನೆ ಮಾಡುವುದು ಇತಿಹಾಸ. ಉತ್ತಮ ಭವಿಷ್ಯವನ್ನು ರೂಪಿಸುವಂತಹ ಇತಿಹಾಸವನ್ನು ತಿರುಚುವುದು ಕೂಡ ಅದಕ್ಕೆ ಮಾಡುವ ಅಪಚಾರವಾಗಿದೆ. ಸೈದ್ಧಾಂತಿಕ ಹಿನ್ನಲೆ ಅಥವಾ ಹಿತಾಸಕ್ತಿಗೆ ಅನುಗುಣವಾಗಿ ಬೇರೆ ಬೇರೆ ನೆಲೆಗಳಲ್ಲಿ ಚರಿತ್ರಕಾರರು ಟಿಪ್ಪುವನ್ನು ಚಿತ್ರಿಸಿದ್ದಾರೆ. ಟಿಪ್ಪು ಸಮಾಜ ಸುಧಾರಕ, ಅನಿಷ್ಠಗಳ ವಿರುದ್ಧ ಹೋರಾಡಿದ ಧೀರ. ಪರಾಕ್ರಮಿ, ಸ್ವಾಭಿಮಾನಿ, ಸೋಲನ್ನು ಒಪ್ಪಿಕೊಳ್ಳದ ಹೋರಾಟಗಾರ. ಅಂತಹ ಟಿಪ್ಪುವನ್ನು ವಸಾಹತುಶಾಹಿ ರಾಜಕಾರಣದ ಭಾಗವಾಗಿ ಮತಾಂಧ ಎಂದು ಚಿತ್ರಿಸಲಾಗಿದೆ. ಹಿಂದೂ ವಿರೋಧಿ ಎಂದು ಬಿಂಬಿಸಲಾಗಿದೆ. ಇಲ್ಲಿ ಸತ್ಯ ಅಥವಾ ಸುಳ್ಳಿನ ಪ್ರಶ್ನೆಗಿಂತಲೂ ಟಿಪ್ಪುವಿನ ಚರಿತ್ರೆಯನ್ನು ವರ್ತಮಾನದೊಳಗೆ ಹೇಗೆ ಗ್ರಹಿಸಬಹುದು ಎಂಬುದು ಮುಖ್ಯವಾಗಿದೆ ಎಂದು ಪ್ರೊ. ರಾಜಾರಾಮ ತೋಳ್ಪಾಡಿ ನುಡಿದರು.
ಲೇಖಕ ಎ.ಕೆ.ಕುಕ್ಕಿಲ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ಸಾಮಾಜಿಕ ಕಾರ್ಯಕರ್ತೆ ಅತ್ರಾಡಿ ಅಮೃತಾ ಶೆಟ್ಟಿ, ಪ್ರಾಧ್ಯಾಪಕ ಪ್ರೊ. ಬಿ. ಶಿವರಾಮ ಶೆಟ್ಟಿ, ಕ್ರಿಯೇಟಿವ್ ಫೌಂಡೇಶನ್‌ನ ಅಧ್ಯಕ್ಷ ಅನ್ವರ್ ಸಾದಾತ್ ವಿಷಯ ಮಂಡಿಸಿದರು. ಬದ್ರಿಕಾ ಕಾಲೇಜಿನ ಪ್ರಾಂಶುಪಾಲ ಡಾ. ಎನ್. ಇಸ್ಮಾಯೀಲ್ ವಿಚಾರಗೋಷ್ಠಿಯ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಡಿವೈಎಫ್‌ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ ಟಿಪ್ಪು ಕೇವಲ ಮುಸ್ಲಿಮ್ ರಾಜನಲ್ಲ. ಆತ ಸಮಾನತೆಯ ಹರಿಕಾರ. ಪ್ರಜಾಪ್ರಭುತ್ವದ ಕಲ್ಪನೆಯೇ ಇಲ್ಲದ ಕಾಲದಲ್ಲಿ ಜನಪರ ಆಡಳಿತ ನೀಡಿದ್ದ. ರಾಣಿ ಅಬ್ಬಕ್ಕದೇವಿ, ಕಿತ್ತೂರು ರಾಣಿ ಚೆನ್ನಮ್ಮರನ್ನು ಹೇಗೆ ಸರ್ವರೂ ಸ್ಮರಿಸುತ್ತಾರೋ ಟಿಪ್ಪುವನ್ನು ಕೂಡ ಸರ್ವರೂ ಕೊಂಡಾಡಬೇಕು. ಆತನನ್ನು ಕೇವಲ ಮುಸ್ಲಿಮರ ಆದರ್ಶ ವ್ಯಕ್ತಿಯಾಗಿ ಬಿಂಬಿಸುವ ಅಗತ್ಯವಿಲ್ಲ. ಹಾಗೇ ಮಾಡಿದರೆ ಅದರ ಲಾಭವನ್ನು ಸಂಘಪರಿವಾರದ ಶಕ್ತಿಗಳು ಮಾಡುವ ಅಪಾಯವಿದೆ ಎಂದರು.
ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಮಾಜಿ ಅಧ್ಯಕ್ಷ ಹಾಜಿ ಅಬ್ದುಲ್ ರಶೀದ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶಾಸಕ ಬಿ.ಎ.ಮೊಯ್ದಿನ್ ಬಾವಾ, ಕೇಂದ್ರ ಬ್ಯಾರಿ ಸಾಹಿತ್ಯ ಪರಿಷತ್‌ನ ಅಧ್ಯಕ್ಷ ಡಿ.ಎಂ.ಅಸ್ಲಂ, ಕರಾವಳಿ ಅಭಿವೃದ್ಧಿ ಪ್ರಾಧಿಕಾರದ ನಿರ್ದೇಶಕ ಶಾಹುಲ್ ಹಮೀದ್ ಕದಿಕೆ ಭಾಗವಹಿಸಿದ್ದರು.
ಜೆ. ಹುಸೈನ್ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಸಂಶೋಧನಾ ಸಮಿತಿಯ ಅಧ್ಯಕ್ಷ ಪಿ.ಎಚ್.ಎಂ.ರಫೀಕ್ ಕಾಟಿಪಳ್ಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಇ.ಕೆ. ಹುಸೈನ್ ಕೂಳೂರು ವಂದಿಸಿದರು. ಜೀವನ್ ಕುತ್ತಾರ್ ಕಾರ್ಯಕ್ರಮ ನಿರೂಪಿಸಿದರು.







