ವಿದ್ಯಾರ್ಥಿ, ಮಹಿಳೆಯರ ಅನುಕೂಲಕ್ಕಾಗಿ 'ಇಂದಿರಾ ಸಾರಿಗೆ ಬಸ್ ಸೇವೆ' ಆರಂಭ: ಸಚಿವ ರೇವಣ್ಣ

ಬೆಂಗಳೂರು, ನ.4: ಮಾಜಿ ಪ್ರಧಾನಮಂತ್ರಿ ಇಂದಿರಾಗಾಂಧಿಯ ಜನ್ಮಶತಮಾನೋತ್ಸವದ ಅಂಗವಾಗಿ ನಗರದ ಆಯ್ದ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಹಾಗೂ ಮಹಿಳೆಯರ ಅನುಕೂಲಕ್ಕಾಗಿ ರಿಯಾಯಿತಿ ಟಿಕೆಟ್ ದರದಲ್ಲಿ ಹೊಸದಾಗಿ ‘ಇಂದಿರಾ ಸಾರಿಗೆ ಬಸ್ ಸೇವೆ’ ಆರಂಭಿಸಲಾಗುತ್ತದೆ ಎಂದು ಸಾರಿಗೆ ಸಚಿವ ಎಚ್.ಎಂ.ರೇವಣ್ಣ ಇಂದಿಲ್ಲಿ ತಿಳಿಸಿದ್ದಾರೆ.
ಶನಿವಾರ ನಗರದ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ ವತಿಯಿಂದ ಆಯೋಜಿಸಿದ್ದ 94 ನೆ ಬಸ್ ದಿನಾಚರಣೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಇಂದಿರಾಗಾಂಧಿಯವರು ದೇಶಕ್ಕಾಗಿ ಅಪಾರವಾದ ಸೇವೆ ಸಲ್ಲಿಸಿದ್ದಾರೆ. ಈ ನಿಟ್ಟಿನಲ್ಲಿ ಅವರ ನೆನಪಿನಾರ್ಥವಾಗಿ ಈ ಬಸ್ ಸೇವೆ ಆರಂಭಿಸುತ್ತಿದ್ದು, ನ.19 ರಂದು ಇದಕ್ಕೆ ಚಾಲನೆ ನೀಡಲಾಗುತ್ತದೆ ಎಂದರು.
ಇಂದಿರಾ ಬಸ್ ಸೇವೆಗೆ ನಿರ್ಭಯಾ ನಿಧಿಯಿಂದ ಹಣ ಬಳಸಲು ನಿರ್ಧರಿಸಲಾಗಿದೆ. ಪ್ರಸಕ್ತ ಸರಕಾರಿ ಬಸ್‌ಗಳಲ್ಲಿ 16 ಆಸನಗಳನ್ನು ಮಹಿಳೆಯರಿಗೆ ಮೀಸಲಿಡಲಾಗುತ್ತಿದೆ. ಈ ಆಸನಗಳಲ್ಲಿ ಕುಳಿತು ಪ್ರಯಾಣಿಸವ ಗಂಡಸರಿಗೆ ದಂಡ ವಿಧಿಸಲಾಗುತ್ತಿದೆ. ಆದರೂ, ನಗರದಲ್ಲಿ ಉದ್ಯೋಗಕ್ಕಾಗಿ, ವಿದ್ಯಾಭ್ಯಾಸಕ್ಕಾಗಿ ತೆರಳುತ್ತಿರುವ ಮಹಿಳೆಯರ ಸಂಖ್ಯೆ ಹೆಚ್ಚಾಗಿರುವುದರಿಂದ ಮೀಸಲು ಸೀಟುಗಳ ಸಂಖ್ಯೆ ಹೆಚ್ಚು ಮಾಡಲು ಚಿಂತನೆ ನಡೆಸಲಾಗಿದೆ. ಅದರ ನಡುವೆಯೂ ಇಂದಿರಾ ಸಾರಿಗೆ ಸಂಚಾರ ಮಾಡಲಿದೆ ಎಂದು ಹೇಳಿದರು.
ಮಹಿಳಾ ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಬಸ್‌ಗಳಲ್ಲಿ 1000 ಸಿಸಿಟಿವಿ ಅಳವಡಿಸಲು ಕ್ರಮಕೈಗೊಳ್ಳಲಾಗಿದೆ. ಬಿಎಂಟಿಸಿಯಲ್ಲಿ ಶೇ.50ರಷ್ಟು ಮಹಿಳೆಯರೇ ಪ್ರಯಾಣಿಸುತ್ತಿದ್ದು, ಮಹಿಳಾ ಸ್ನೇಹಿ ಬಸ್‌ಗಳನ್ನಾಗಿ ಪರಿವರ್ತಿಸಲು ನಿರ್ಧರಿಸಲಾಗಿದೆ. ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ಸಾರಿಗೆ ಮೊದಲ ಸ್ಥಾನದಲ್ಲಿದ್ದು, ಇದುವರೆಗೆ 106 ವಿವಿಧ ಪ್ರಶಸ್ತಿಗಳನ್ನು ಪಡೆದಿದೆ ಎಂದರು.
ಮಿನಿ ಭಾರತ: ಬೆಂಗಳೂರು ಒಂದು ಮಿನಿ ಭಾರತದಂತಿದೆ. ಇಲ್ಲಿ ಎಲ್ಲ ರಾಜ್ಯಗಳ ಜನರಿದ್ದಾರೆ. ಅವರ ರಾಜ್ಯಗಳ ಸಾರಿಗೆ ವ್ಯವಸ್ಥೆಗಿಂತ ಇಲ್ಲಿನ ಸಾರಿಗೆ ವ್ಯವಸ್ಥೆ ಚೆನ್ನಾಗಿದೆ ಎಂದು ಅವರೇ ಹೇಳುತ್ತಿದ್ದಾರೆ. ವಿಮಾನ ನಿಲ್ದಾಣಕ್ಕೂ ಬಿಎಂಟಿಸಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ರೇವಣ್ಣ ಹೇಳಿದರು.
ಮಹಿಳೆಯರಿಗೆ ಚಾಲನಾ ತರಬೇತಿ: ಮಹಿಳೆಯರು ಎಲ್ಲಾ ಕ್ಷೇತ್ರಗಳಲ್ಲೂ ಪ್ರಗತಿ ಹೊಂದಬೇಕು. ಸಾರಿಗೆ ವಲಯದಲ್ಲೂ ಅವರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆದರೆ, ಚಾಲನಾ ಹುದ್ದೆಯಲ್ಲಿ ಮಹಿಳೆಯರ ಸಂಖ್ಯೆ ಕಡಿಮೆ ಇರುವುದರಿಂದ ಮಹಿಳೆಯರಿಗೆ ವಿಶೇಷ ತರಬೇತಿ ನೀಡಿ, ಪ್ರೋತ್ಸಾಹ ನೀಡಲಾಗುತ್ತಿದೆ ಎಂದರು.
ಕಾರ್ಯಕ್ರಮದಲ್ಲಿ ಬಿಎಂಟಿಸಿ ಅಧ್ಯಕ್ಷ ನಾಗರಾಜ್ ಯಾದವ್, ನಟ ಲಕ್ಷ್ಮಣ್, ನಟಿ ಕಾರುಣ್ಯ ಮಹಿಳಾ ಸಹಾಯವಾಣಿ ಸಂಖ್ಯೆ ಇರುವ ಭಿತ್ತಿ ಪತ್ರವನ್ನು ಬಿಡುಗಡೆ ಮಾಡಿದರು.
ನಗರಕ್ಕೆ ದಿನದಿಂದ ದಿನಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಬರುತ್ತಿರುವ ಹಿನ್ನೆಲೆಯಲ್ಲಿ ನಗರದ ನಾಲ್ಕು ಭಾಗಗಳಲ್ಲಿ ಬಸವೇಶ್ವರ ಬಸ್ ನಿಲ್ದಾಣದ ಮಾದರಿಯಲ್ಲಿ ಹೊಸ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣ ನಿರ್ಮಿಸುವ ಗುರಿ ಹೊಂದಲಾಗಿದೆ. ಆಯಾ ಭಾಗದ ಜನರು ಅಲ್ಲಿಂದಲೇ ತಮ್ಮ ತಮ್ಮ ಊರುಗಳಿಗೆ ಹೋಗುವಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ.
-ಎಚ್.ಎಂ.ರೇವಣ್ಣ, ಸಾರಿಗೆ ಸಚಿವ







